– 2 ಕಿ.ಮೀ ಮನೆಗೆ ನಡೆದು ಬಂದ ವೃದ್ದೆ

ಮಡಿಕೇರಿ: ಮಡಿಕೇರಿಯ ಕೋವಿಡ್ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಯಾದ ವೃದ್ಧೆಯೊಬ್ಬರನ್ನು ಆಂಬುಲೆನ್ಸ್ ಚಾಲಕನೊಬ್ಬ ದಾರಿ ಮಧ್ಯೆ ಬಿಟ್ಟು ಹೋದ ಅಮಾನವೀಯ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ. ಕಿರಗಂದೂರು ಗ್ರಾಮದ 60 ವರ್ಷದ ಪೊನ್ನಮ್ಮ ಮೇ 15ರಂದು ತೀವ್ರ ಉಸಿರಾಟದ ತೊಂದರೆಯಿಂದ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಗುಣಮುಖರಾದ ಮೇಲೆ ಭಾನುವಾರ ಮಧ್ಯಾಹ್ನ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಆದರೆ ಆಸ್ಪತ್ರೆಯಿಂದ ಪೊನ್ನಮ್ಮ ಅವರ ಮನೆಗೆ ಮಾಹಿತಿ ನೀಡಿರಲಿಲ್ಲ. ಆಂಬುಲೆನ್ಸ್ ನಲ್ಲಿ ಕರೆತಂದ ಚಾಲಕ ಸಂಜೆ 5 ಗಂಟೆಯ ಸುಮಾರಿಗೆ ಐಗೂರು ಜಂಕ್ಷನ್‍ನಲ್ಲಿ ಬಿಟ್ಟು ತೆರಳಿದ್ದಾನೆ. ಅಲ್ಲಿಂದ ವೃದ್ಧೆಯ ಮನೆಗೆ 2 ಕಿ.ಮೀ. ದೂರವಿದ್ದು, ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಲಾಕ್‍ಡೌನ್ ಅಗಿರುವ ಸಂದರ್ಭವಾಗಿರುವುದರಿಂದ ಆ ರಸ್ತೆಯಲ್ಲಿ ಜನ ಸಂಚಾರ ಇರುವುದಿಲ್ಲ. ಸಂಜೆ ಸಮಯದಲ್ಲಿ ಕಾಡಾನೆಗಳ ಕಾಟವೂ ಇದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಿತ್ರಾಣಗೊಂಡಿರುವ ಅವರು ದಾರಿತಪ್ಪಿದ್ದರೆ ಯಾರು ಗತಿ? ಅವರು ಆಸ್ಪತ್ರೆಯಿಂದ ಬಿಡುಗಡೆಯಾದ ಯಾವುದೇ ಮಾಹಿತಿಯನ್ನು ನೀಡಿಲ್ಲ. ಇಂತಹ ನಿರ್ಲಕ್ಷ್ಯ ಸಲ್ಲದು ಎಂದು ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೇ.15ರಂದು ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿಸಲಾಗಿತ್ತು. ಉತ್ತಮ ಚಿಕಿತ್ಸೆ ಸಿಕ್ಕಿದ್ದರಿಂದ ಗುಣಮುಖರಾಗಿದ್ದಾರೆ. ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭ ಕಂಟ್ರೋಲ್ ರೂಂ ನಿಂದ ಮಾಹಿತಿ ಸಿಗುತ್ತಿತ್ತು. ಆದರೆ ಬಿಡುಗಡೆಯಾದ ದಿನ ಯಾವುದೇ ಮಾಹಿತಿ ಇರಲಿಲ್ಲ. ವೃದ್ಧರು, ಮಹಿಳೆಯರು, ಯುವತಿಯರು, ಮಕ್ಕಳು ಚಿಕಿತ್ಸೆ ಪಡೆಯುತ್ತಿರುತ್ತಾರೆ. ದಾರಿಮಧ್ಯೆ ಬಿಟ್ಟು ತೆರಳಿವುದು ಸಹಿಸುವಂತದಲ್ಲ. ಯಾವ ನಂಬಿಕೆ ಮೇಲೆ ಆಸ್ಪತ್ರೆಗೆ ದಾಖಲಿಸುವುದು. ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೊನ್ನಮ್ಮ ಅವರ ಕುಟುಂಬ ಸದಸ್ಯರು ಅಕ್ರೋಶ ವ್ಯಕ್ತಪಡಿಸಿದ್ದಾರೆ.

The post ವೃದ್ಧೆಯನ್ನು ನಡು ದಾರಿಯಲ್ಲೇ ಬಿಟ್ಟು ಹೋದ ಆಂಬುಲೆನ್ಸ್ ಚಾಲಕ appeared first on Public TV.

Source: publictv.in

Source link