ಜೋಹಾನ್ಸ್ ಬರ್ಗ್: ಮಿಸ್ಟರ್ 360 ಖ್ಯಾತಿಯ ಎಬಿಡಿ ವಿಲಿಯರ್ಸ್ ಮರಳಿ ದಕ್ಷಿಣ ಆಫ್ರಿಕಾ ತಂಡ ಸೇರಲು ವೇದಿಕೆ ಸಜ್ಜಾಗಿದೆ. ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ20 ಸರಣಿಯಲ್ಲಿ ಎಬಿಡಿ ಕಾಣಿಸಿಕೊಳ್ಳುವ ಬಗ್ಗೆ ಆಫ್ರಿಕಾ ತಂಡದ ನಿರ್ದೇಶಕ ಗ್ರೇಮ್ ಸ್ಮಿತ್ ಸುಳಿವೊಂದನ್ನು ನೀಡಿದ್ದಾರೆ.

ಎಬಿಡಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ಮೂರು ವರ್ಷಗಳು ಕಳೆದಿದೆ. 2018ರಲ್ಲಿ ವಿಲಿಯರ್ಸ್ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ನಿವೃತ್ತಿ ಘೋಷಿಸಿ ನಂತರ ವಿಶ್ವದ ಬೇರೆ ಬೇರೆ ಕಡೆಗಳಲ್ಲಿ ನಡೆಯುವ ಫ್ರಾಂಚೈಸಿ ಟಿ20 ಲೀಗ್‍ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತಿಚೇಗೆ ಭಾರತದಲ್ಲಿ ಕೊರೊನಾದಿಂದಾಗಿ ಮೂಂದುಡಲ್ಪಟ್ಟ 14ನೇ ಆವೃತ್ತಿಯ ಐಪಿಎಲ್‍ನಲ್ಲಿ ಕೂಡ ಎಬಿಡಿ ಆರ್​ಸಿಬಿ ತಂಡದ ಪರ ಬ್ಯಾಟ್‍ಬೀಸಿದ್ದರು. ಆರ್​ಸಿಬಿ ಪರ ಒಟ್ಟು 7 ಪಂದ್ಯಗಳಿಂದ 207 ರನ್ ಗಳಿಸಿದ್ದರು. ಈ ಎಲ್ಲಾ ಪ್ರದರ್ಶನವನ್ನು ಗಮನಿಸಿ ವಿಲಿಯರ್ಸ್ ಅವರನ್ನು ಮರಳಿ ಆಫ್ರಿಕಾ ತಂಡದಲ್ಲಿ ಸೇರಿಸಿಕೊಳ್ಳಲು ಕ್ರಿಕೆಟ್ ದಕ್ಷಿಣ ಆಫ್ರಿಕಾ ನಿರ್ಧಾರ ಮಾಡಿದೆ.

ಈ ಮೊದಲು 2021 ಟಿ20 ವಿಶ್ವಕಪ್‍ನಲ್ಲಿ ದಕ್ಷಿಣ ಆಫ್ರಿಕಾ ತಂಡದ ಪರ ಪುನಾರಾಗಮನ ಮಾಡುವ ನಿರೀಕ್ಷೆ ಇತ್ತು. ಆದರೆ ಇದೀಗ ಈ ಮೊದಲೇ ಎಬಿಡಿ ಆಫ್ರಿಕಾ ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವ ವದಂತಿ ಹರಿದಾಡುತ್ತಿದೆ. ಐಪಿಎಲ್‍ಗೂ ಮುಂಚೆ ವಿಲಿಯರ್ಸ್ ಜೊತೆ ಮಾತನಾಡಿರುವ ದಕ್ಷಿಣ ಆಫ್ರಿಕಾ ತಂಡದ ಕೋಚ್ ಮಾರ್ಕ್ ಬೌಷರ್, ಐಪಿಎಲ್‍ನಲ್ಲಿ ಉತ್ತಮ ಪ್ರದರ್ಶನ ತೋರಿ ನಿಮ್ಮ ಸಾಮಥ್ರ್ಯವನ್ನು ಸಾಬೀತುಪಡಿಸಿ. ನಂತರ ಮುಂದೆ ರಾಷ್ಟ್ರೀಯ ತಂಡದಲ್ಲಿನ ಬಾಗಿಲು ತಾನಾಗಿಯೇ ತೆರೆಯಲಿದೆ. ಎಂದು ಮತ್ತೆ ಪುನರಾಗಮನದ ಕುರಿತು ಸಣ್ಣ ಸುಳಿವೊಂದನ್ನು ನೀಡಿದ್ದರು.

ಆ ಬಳಿಕ ಇದೀಗ ಕ್ರಿಕಟ್ ದಕ್ಷಿಣ ಆಫ್ರಿಕಾದ ಡೈರೆಕ್ಟರ್ ಆಗಿರುವ ಮಾಜಿ ಆಟಗಾರ ಗ್ರೇಮ್ ಸ್ಮಿತ್, ಎಬಿಡಿ ಪುನಾರಾಗಮನದ ಸುಳಿವು ನೀಡಿದ್ದು, ಮುಂದೆ ನಡೆಯಲಿರುವ ವೆಸ್ಟ್ ಇಂಡೀಸ್ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾದ ಮಾಜಿ ಕ್ಯಾಪ್ಟನ್ ಎಬಿಡಿ ಸಹಿತ ಇಮ್ರಾನ್ ತಾಹೀರ್, ಕ್ರೀಸ್ ಮೋರಿಸ್ ಕೂಡ ಕಾಣಿಸಿಕೊಳ್ಳಲಿದ್ದಾರೆ ಇದರಿಂದಾಗಿ ಆಫ್ರಿಕಾ ತಂಡ ಬಲಿಷ್ಠಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೆರಿಬಿಯನ್ ಕ್ರಿಕೆಟ್ ಪಾಡ್‍ಕ್ಯಾಸ್ಟ್, ಕ್ರಿಕೆಟ್ ದಕ್ಷಿಣ ಆಫ್ರಿಕಾದ ಡೈರೆಕ್ಟರ್ ಗ್ರೇಮ್ ಸ್ಮಿತ್ ತಿಳಿಸಿರುವಂತೆ ದಕ್ಷಿಣ ಆಫ್ರಿಕಾ ತಂಡ ಜೂನ್‍ನಲ್ಲಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿದೆ. ಈ ವೇಳೆ ಆಫ್ರಿಕಾ ಟಿ20 ತಂಡದಲ್ಲಿ ಎಬಿಡಿ ವಿಲಿಯರ್ಸ್, ಇಮ್ರಾನ್ ತಾಹೀರ್ ಮತ್ತು ಕ್ರೀಸ್ ಮೋರಿಸ್ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ ಎಂದು ಬರೆದುಕೊಂಡಿದೆ.

ಎಬಿಡಿ ವಿಲಿಯರ್ಸ್ ದಕ್ಷಿಣ ಆಫ್ರಿಕಾ ಪರ ಒಟ್ಟು 78 ಟಿ20 ಪಂದ್ಯಗಳನ್ನು ಆಡಿದ್ದು, 135.17 ಸ್ಟ್ರೇಕ್ ರೇಟ್‍ನಲ್ಲಿ 10 ಅರ್ಧಶತಕ ಸಹಿತ 1672 ರನ್ ಗಳಿಸಿದ್ದಾರೆ.

The post ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿ-ದಕ್ಷಿಣ ಆಫ್ರಿಕಾ ತಂಡದಲ್ಲಿ ಎಬಿಡಿ? appeared first on Public TV.

Source: publictv.in

Source link