ಬಿಗ್‍ಬಾಸ್ ಮನೆಯಲ್ಲಿ ರಿಯಲ್ ಆಟ ಶುರುವಾಗಿ ದಿನಗಳೇ ಕಳೆದು ಹೋಗಿವೆ. ಈ ಮಧ್ಯೆ ಕೆಲವೊಂದು ಟಾಸ್ಕ್ ಗಳ ಮೂಲಕ ಸ್ಪರ್ಧಿಗಳು ತಾವು ಅನುಭವಿಸಿದ ನೈಜ ಘಟನೆಗಳನ್ನು ಬಿಚ್ಚಿಡುತ್ತಿದ್ದಾರೆ. ಅಂತೆಯೇ ಇದೀಗ ಚಕ್ರವರ್ತಿ ಚಂದ್ರಚೂಡ್ ಅವರು ಭಯಾನಕ ಘಟನೆಯೊಂದನ್ನು ಬಹಿರಂಗಪಡಿಸುವ ಮೂಲಕ ಎಲ್ಲರನ್ನೂ ಅಚ್ಚರಿಗೆ ಒಳಪಡಿಸಿದ್ದಾರೆ.

ಹೌದು. ಸ್ಪರ್ಧಿಗಳಿಗೆ ಬಿಗ್ ಬಾಸ್ ಟಾಸ್ಕ್ ಒಂದನ್ನು ನೀಡಿದ್ದರು. ಈ ಟಾಸ್ಕ್ ನಲ್ಲಿ ಸ್ಪರ್ಧಿಗಳು ತಮ್ಮ ಜೀವನದಲ್ಲಿ ಅನಿಭವಿಸಿದ ಕಹಿ ಘಟನೆಯನ್ನು ತೆರೆದಿಡಬೇಕಿತ್ತು. ಈ ಟಾಸ್ಕ್ ನಲ್ಲಿ ಮಾತನಾಡಲು ಆರಂಭಿಸಿದ ಚಕ್ರವರ್ತಿ, ಸ್ಪರ್ಧಿಗಳೇ ಅಚ್ಚರಿಯಿಂದ ನೋಡುವಂತಹ ಘಟನೆಯೊಂದನ್ನು ಬಿಚ್ಚಿಟ್ಟರು.

ಚೆನ್ನೈ ರೈಲ್ವೆ ನಿಲ್ದಾಣದಲ್ಲಿದ್ದೆ. ಊಟ ಇಲ್ಲದೆ ಮೂರು ದಿನಗಳ ಕಾಲ ಹಸಿದುಕೊಂಡಿದ್ದೆ. ನಿಲ್ದಾಣದ ಕೆಳಗಡೆ ಇದ್ದ ಟೀ ಅಗಡಿ ಪಕ್ಕ ನಿರ್ಗತಿಕನಾಗಿ ಬೀಳಬೇಕಾದ ಪರಿಸ್ಥಿತಿ ಬಂದಿತ್ತು. ಮನೆಯ ಸಂಪರ್ಕ ಕಡಿತಗೊಂಡಿತ್ತು. ಈ ವೇಳೆ ನನಗೆ ಓರ್ವನ ಪರಿಚಯವಾಯಿತು. ಆತ ನನ್ನನ್ನು ವೇಶ್ಯೆಯರ ಮನೆಗೆ ಕೆಲಸಕ್ಕೆ ಬಿಡುತ್ತಾನೆ. ಅದು ನನ್ನ ಜೀವನದ ಅತ್ಯಂತ ಕ್ರೂರ ಸಂದರ್ಭ. ಆ ಮನೆಯಲ್ಲಿ 127 ಜನ ಇದ್ರು. ಅಲ್ಲಿ ಹದಿನಾಲ್ಕೂವರೆ ವರ್ಷದ ಹುಡುಗಿಯನ್ನು ಆಕೆಯ ಚಿಕ್ಕಪ್ಪ ಮಾರಿ ಹೋಗಿದ್ದ. ಕ್ರಮೇಣ ನನಗೂ ಅವಳಿಗೂ ಪರಿಚಯ ಆಯಿತು ಎಂದು ಚಕ್ರವರ್ತಿ ವಿವರಿಸಿದರು.

ಪರಿಚಯ ಪ್ರೀತಿಗೆ ತಿರುಗಿದ್ದು, ನೀನು ಅಷ್ಟೊಂದು ಪ್ರೀತಿ ಮಾಡುವುದಾದರೆ ನನ್ನನ್ನು ಇಲ್ಲಿಂದ ತಪ್ಪಿಸಿಕೊಂಡು ಹೋಗು ಎಂದಳು. ಹೀಗಾಗಿ ನಾವಿಬ್ಬರು ಗಾರ್ಬೆಜ್ ವಾಹನದಲ್ಲಿ ಹೊರಟೆವು. ರೈಲ್ವೆ ನಿಲ್ದಾಣಕ್ಕೆ ಹೋದೆವು. ಆಗ ಹಣ ಕೂಡ ಇರಲಿಲ್ಲ. ಹೇಗೋ ಮಾಡಿ ಬೆಂಗಳೂರು ರೈಲು ಏರಿದೆವು. ಬಂಗಾರ ಪೇಟೆ ಬಳಿ ನಮ್ಮನ್ನು ಅಡ್ಡಹಾಕಿ, ಇಬ್ಬರಿಗೂ ಚೆನ್ನಾಗಿ ಥಳಿಸಿದರು. ಪರಿಣಾಮ ಆಕೆ ಸತ್ತು ಹೋದಳು, ನಾನು ಬದುಕಿದೆ ಎಂದು ಚಕ್ರವರ್ತಿ ಗದ್ಗದಿತರಾದರು.

ಪೊಲೀಸ್ ಒಬ್ಬರು ನನ್ನನ್ನು ಬದುಕಿಸಿದರು. ನಂತರ ನಾನು ನೇರವಾಗಿ ಹಿಮಾಲಯಕ್ಕೆ ಹೋದೆ. ಎರಡು ವರ್ಷ ಇದ್ದು, ಬೆಂಗಳೂರಿಗೆ ವಾಪಸ್ಸಾದೆ. ಬಳಿಕ ಪತ್ರಕರ್ತ, ಹೋರಾಟಗಾರನಾದೆ. ಇದೇ ವೇಳೆ ವೇಶ್ಯೆಯರಿಗೆ ಏನಾದರೂ ಮಾಡಬೇಕು ಅಂದುಕೊಂಡು ಸುಮಾರು 25 ಮಂದಿ ವೇಶ್ಯೆಯರನ್ನು ಸೇರಿಸಿ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕವಾಡಿಸಿದೆ ಎಂದು ತನ್ನ ಜೀವನದ ಕಹಿ ಘಟನೆಯನ್ನು ಚಕ್ರವರ್ತಿ ಹೇಳಿಕೊಂಡರು. ಚಕ್ರವರ್ತಿಯ ಮಾತನ್ನು ಕೇಳಿಸಿಕೊಂಡ ಇತರ ಸ್ಪರ್ಧಿಗಳು ಮೂಕವಿಸ್ಮಿತರಾದರು.

The post ವೇಶ್ಯೆಯರ ಮನೆಯಲ್ಲಿ ಕೆಲಸಕ್ಕೆ ಬಿಟ್ಟ ಭಯಾನಕ ಘಟನೆ ಬಿಚ್ಚಿಟ್ಟ ಚಕ್ರವರ್ತಿ..! appeared first on Public TV.

Source: publictv.in

Source link