‘ವೈದ್ಯರು ಹೇಳಿದಾಗ ಅವರನ್ನು ಮನೆಗೆ ಕರೆತರುತ್ತೇವೆ’; ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ಹೊಸ ಮಾಹಿತಿ | Lata Mangeshkar Health is Stable now Says spokesperson confirms


‘ವೈದ್ಯರು ಹೇಳಿದಾಗ ಅವರನ್ನು ಮನೆಗೆ ಕರೆತರುತ್ತೇವೆ’; ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ಹೊಸ ಮಾಹಿತಿ

ಗಾಯಕಿ ಲತಾ ಮಂಗೇಶ್ಕರ್

ಖ್ಯಾತ ಗಾಯಕಿ ಲತಾ ಮಂಗೇಶ್ಕರ್​ (Lata Mangeshkar) ಅವರು ಕೊವಿಡ್ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಹಲವು ದಿನಗಳು ಕಳೆದಿವೆ. ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿಯೇ ಚಿಕಿತ್ಸೆ ನೀಡಲಾಗುತ್ತಿದೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ವಿಶೇಷ ವೈದ್ಯರ ತಂಡ ಅವರನ್ನು ನೋಡಿಕೊಳ್ಳುತ್ತಿದೆ. ಈ ಮಧ್ಯೆ ಅವರ ಆರೋಗ್ಯದ ಬಗ್ಗೆ ಸಾಕಷ್ಟು ವದಂತಿಗಳು ಕೂಡ ಹಬ್ಬಿದ್ದವು. ಈ ಬಗ್ಗೆ ಲತಾ ಮಂಗೇಶ್ಕರ್​ ಅವರ ವಕ್ತಾರರು ಸ್ಪಷ್ಟನೆ ನೀಡಿದ್ದಾರೆ. ಖ್ಯಾತ ಗಾಯಕಿಯ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳು ಸಂತಸಗೊಂಡಿದ್ದಾರೆ. ಅವರು ಬೇಗ ಗುಣಮುಖರಾಗಿ ಮರಳಿ ಮನೆಗೆ ಬರಲಿ ಎನ್ನುವ ಪ್ರಾರ್ಥನೆ ಮುಂದುವರಿದಿದೆ.

ಜನವರಿ 9ರಂದು ಲತಾ ಮಂಗೇಶ್ಕರ್​ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕೊವಿಡ್​ ಲಕ್ಷಣ ಇದ್ದಿದ್ದರಿಂದ ಹೆಚ್ಚು ಆತಂಕ ಮೂಡಿತ್ತು. ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಕೊವಿಡ್​ ಇರುವ ವಿಚಾರ ಅಧಿಕೃತವಾಗಿತ್ತು. ಇದರ ಜತೆಗೆ ಅವರಿಗೆ ನ್ಯುಮೋನಿಯಾ ಕೂಡ ಅಂಟಿದೆ. ಹೀಗಾಗಿ, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಈಗ ಅವರು ಚಿಕಿತ್ಸೆಗೆ ಸ್ಪಂದನೆ ನೀಡುತ್ತಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಪ್ರಕಟಣೆ ಬಿಡುಗಡೆ ಮಾಡಲಾಗಿದೆ.

‘ಲತಾ ಅವರ ಆರೋಗ್ಯ ಸ್ಥಿರವಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವೈದ್ಯರು ಸೂಚನೆ ನೀಡಿದ ನಂತರದಲ್ಲಿ ಅವರನ್ನು ಮನೆಗೆ ಕರೆ ತರಲಾಗುತ್ತದೆ’ ಎಂದು ಅನುಷಾ ಶ್ರೀನಿವಾಸ್​ ಅಯ್ಯರ್​ ಹೇಳಿದ್ದಾರೆ. ಲತಾ ಮಂಗೇಶ್ಕರ್​ ವಕ್ತಾರೆಯಾಗಿ ಅವರು ಕೆಲಸ ಮಾಡುತ್ತಿದ್ದಾರೆ.

ಲತಾ ಮಂಗೇಶ್ಕರ್​ ಆರೋಗ್ಯದ ಕುರಿತಂತೆ ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್​ ಟೋಪೆ ಅವರು ಭಾನುವಾರ (ಜ.16) ಹೇಳಿಕೆ ನೀಡಿದ್ದರು. ‘ಲತಾ ಅವರ ಆರೋಗ್ಯ ಸುಧಾರಿಸುತ್ತಿದೆ. ಆಸ್ಪತ್ರೆಯ ಆಡಳಿತ ವರ್ಗದವರ ಜೊತೆ ನಾನು ಮಾತನಾಡಿದ್ದೇನೆ. ಜನರು ಹೆಲ್ತ್​ ಅಪ್​ಡೇಟ್​ ತಿಳಿಯಲು ಕಾಯುತ್ತ ಇರುತ್ತಾರೆ. ಹಾಗಾಗಿ ಆಸ್ಪತ್ರೆಯ ವಕ್ತಾರರು ಅಪ್​ಡೇಟ್​ ನೀಡುತ್ತಾ ಇರಬೇಕು ಅಂತ ಸೂಚಿಸಿದ್ದೇನೆ’ ಎಂದು ರಾಜೇಶ್​ ಟೋಪೆ ಹೇಳಿದ್ದರು.

TV9 Kannada


Leave a Reply

Your email address will not be published. Required fields are marked *