ಚಾಮರಾಜಪೇಟೆ ಆಸ್ಪತ್ರೆಯಲ್ಲಿ ಮಗು ಕಳ್ಳತನದ ಕೇಸ್ ಬೇಧಿಸಿದ್ರೂ ನೈಜ ಪೋಷಕರಿಗೆ ಮಾತ್ರ ಮಗು ಸಿಗ್ತಾ ಇಲ್ಲ. ಕಳೆದ ಒಂದು ವರ್ಷದಿಂದ ತಮ್ಮದೇ ಮಗು ಅಂತ ನೋಡಿಕೊಂಡಿದ್ದವರೂ ಮಗುವನ್ನು ಬಿಟ್ಟಿರಲಾರದೆ ಒದ್ದಾಡುತ್ತಿದ್ದಾರೆ. ನಿಜಕ್ಕೂ ಇದು ಉಭಯ ಸಂಕಟದ ಕಥೆ-ವ್ಯಥೆ.

ಕಳೆದ ಒಂದು ವರ್ಷದಿಂದ ಬೆಂಗಳೂರು ಪೊಲೀಸರು ನಡೆಸಿದ ಪತ್ತೆ ಕಾರ್ಯಾಚರಣೆಯ ಫಲವಾಗಿ ನಿಜವಾದ ಪೋಷಕರಿಗೆ ಮಗು ಮತ್ತೆ ಸಿಗುವಂತಾಗಿತ್ತು. ಈ ಪ್ರಕರಣವನ್ನೇನೋ ಪೊಲೀಸರು ಬೇಧಿಸಿ ಮಗುವನ್ನು ಮರಳಿ ತನ್ನ ತಂದೆ-ತಾಯಿಯ ಮಡಿಲು ಸೇರಿಸ್ತಾ ಇದಾರೆ. ಆದ್ರೆ ನಿಜವಾದ ಪೋಷಕರಿಗೆ ಮಗು ಇನ್ನೂ ಕೈಗೆ ಸಿಗ್ತಾ ಇಲ್ಲ. ಇನ್ನು ಕಳೆದ ಒಂದು ವರ್ಷದಿಂದ ತಮ್ಮದೇ ಮಗು ಅಂತ ಸಾಕಿದ್ದ ವಂಚಿತ ಪೋಷಕರು ಕೂಡ ಮಗುವನ್ನು ಬಿಟ್ಟಿರಲಾರದೆ ಪರಿತಪಿಸುತ್ತಿದ್ದಾರೆ.

ವೈದ್ಯೆಯಿಂದಲೇ ವಂಚನೆಗೊಳಗಾಗಿದ್ದ ಪೋಷಕರಿಗೂ ನೋವು
ಮಗು ಇನ್ನೂ ಕೈ ಸೇರದೆ ಪರಿತಪಿಸುತ್ತಿರುವ ನೈಜ ಪೋಷಕರು
ಹಾಗಾದ್ರೆ ನಿಜಕ್ಕೂ ಈ ಪ್ರಕರಣದಲ್ಲಿ ಆಗ್ತಿರುವ ಸಮಸ್ಯೆ ಏನು?

ಚಾಮರಾಜಪೇಟೆ ಆಸ್ಪತ್ರೆಯಿಂದ ಅಪಹರಿಸಲ್ಪಿಟ್ಟದ್ದ ಶಿಶು ಕೊಪ್ಪಳದ ದಂಪತಿ ಮಡಿಲು ಸೇರಿತ್ತು. ಮನೋವೈದ್ಯೆ ರಶ್ಮಿ ಶಿವಕುಮಾರ್ ಅವತ್ತು ಮಗು ಕಳ್ಳತನ ಮಾಡಿ ಕೊಪ್ಪಳದ ದಂಪತಿಗೆ ನಿಮ್ಮದೇ ಮಗು ಅಂತ ಮಡಿಲು ಸೇರಿಸಿ ಬಿಟ್ಟಿದ್ದರು. ಆದ್ರೆ ಇದು ಬೇರೆಯವರ ಮಗು ಅಂತ ಕೊಪ್ಪಳದ ದಂಪತಿಗೆ ಗೊತ್ತೇ ಇರಲಿಲ್ಲ. ಬಾಡಿಗೆ ತಾಯಿ ಮೂಲಕ ವೈದ್ಯೆ ರಶ್ಮಿ ಹೆತ್ತು ಕೊಡಿಸಿದ್ದಾರೆ ಅಂತಾನೇ ತಿಳಿದುಕೊಂಡಿದ್ರು. ಆದ್ರೆ ಕಥೆನೇ ಬೇರೆ ಆಗಿ ಹೋಗಿತ್ತು. ಚಾಮರಾಜಪೇಟೆ ಆಸ್ಪತ್ರೆಯಲ್ಲಿ ಜನ್ಮ ನೀಡಿದ್ದ ತಾಯಿ ತನ್ನ ಮಗು ಕಳ್ಳತನ ಆಗಿದೆ ಅಂತ ಕಂಪ್ಲೇಂಟ್ ಕೊಟ್ಟಿದ್ರು.

ತನಿಖೆ ಆರಂಭಿಸಿದ್ದ ಬೆಂಗಳೂರು ಪೊಲೀಸರು ಸಿಸಿ ಕ್ಯಾಮರಾ ಫುಟೇಜ್ ,ಮೊಬೈಲ್ ನಂಬರ್ ಗಳನ್ನೆಲ್ಲ ಗುಡ್ಡೆ ಹಾಕಿ ಕೊನೆಗೆ ಮಗು ಕದ್ದೊಯ್ದಿದ್ದ ರಶ್ಮಿ ಶಿವಕುಮಾರ್ ಅವರನ್ನು ಕರೆ ತಂದು ಕೂರಿಸಿದ್ರು. ಸತ್ಯ ಬಾಯ್ಬಿಟ್ಟಿದ್ದ ರಶ್ಮಿ, ತಪ್ಪೊಪ್ಪಿಕೊಂಡಿದ್ರು. ಕೊಪ್ಪಳದ ಶ್ರೀಮಂತ ದಂಪತಿಯಿಂದ 14 ಲಕ್ಷ ರೂಪಾಯಿ ಹಣ ಪಡೆದು ಇಂತಾ ಕೆಲಸ ಮಾಡಿದ್ದೆ ಅಂತ ಹೇಳಿಕೊಂಡಿದ್ರು. ಆ ಮಗುವನ್ನು ತಂದು ನಿಜವಾದ ಪೋಷಕರಿಗೆ ಒಪ್ಪಿಸುವಂತೆ ಪೊಲೀಸರು ಫೋನ್ ಮಾಡಿ ತಿಳಿಸಿದ್ದಾಗ ಕೊಪ್ಪಳದ ದಂಪತಿ ಬೇರೆ ದಾರಿ ಕಾಣದೇ ಮಗುವನ್ನು ತಂದು ಒಪ್ಪಿಸಿದ್ದರು.

ಸತ್ಯ ಗೊತ್ತಾಗುವುದಕ್ಕೆ ಮುಂಚಿನ ದಿನ ಗ್ರ್ಯಾಂಡ್ ಬರ್ತಡೇ ಆಚರಣೆ
ರಾಜಕುಮಾರನಂತೆ ಮಗುವನ್ನು ನೋಡಿಕೊಂಡಿದ್ದ ದಂಪತಿಗೆ ಶಾಕ್
ವೈದ್ಯೆ ಮಾಡಿದ್ದ ವಂಚನೆಯಿಂದ ಆಘಾತಕ್ಕೊಳಗಾಗಿರುವ ದಂಪತಿ

ತಮ್ಮದೇ ಮಗು ಅಂತ ಕೊಪ್ಪಳದ ದಂಪತಿ ಮಗುವನ್ನು ರಾಜಕುಮಾರನಂತೆ ಬೆಳೆಸಿದ್ದರು. ಇದು ತಮ್ಮ ಮಗು ಇಲ್ಲ ಅಂತ ಸತ್ಯ ಗೊತ್ತಾಗುವ ಮುನ್ನಾ ದಿನವಷ್ಟೇ ಗ್ರ್ಯಾಂಡ್ ಆಗಿ ಬರ್ತಡೇ ಕೂಡ ಆಚರಿಸಿದ್ರು. ಆದರೆ, ಪೊಲೀಸರಿಂದ ಫೋನ್ ಬಂದಾಗಲೇ ಗೊತ್ತಾಗಿದ್ದು ಇದು ಬೇರೆ ದಂಪತಿಯ ಮಗು ಅಂತಾ. ಇದನ್ನು ನಂಬುವ ಪರಿಸ್ಥಿತಿಯಲ್ಲಿರಲಿಲ್ಲ ಕೊಪ್ಪಳದ ದಂಪತಿ. ಆದ್ರೆ ಬೆಂಗಳೂರಿಗೆ ಬಂದಾಗ ಸಂಪೂರ್ಣ ವಿವರ ತಿಳಿದುಕೊಂಡ ಮೇಲೆ ಇವರಿಗೆ ಶಾಕ್ ಆಗಿತ್ತು. ವೈದ್ಯೆ ರಶ್ಮಿಯನ್ನು ನಂಬಿ ಹಣ ಕಳೆದುಕೊಂಡಿದ್ದಲ್ಲದೆ ಈಗ ಪ್ರೀತಿಯಿಂದ ಸಾಕಿದ್ದ ಮಗುವನ್ನು ದೂರ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದೊದಗಿತ್ತು. ಮಗುವಿನ ನಿಜವಾದ ತಂದೆ-ತಾಯಿ ತಮ್ಮ ಮಗು ಕೊನೆಗೂ ಸಿಕ್ತಲ್ಲಾ ಅಂತ ಸಂತೋಷದಲ್ಲಿದ್ದರು. ಆದ್ರೆ ಕಳೆದ ಒಂದು ವರ್ಷದಿಂದ ತಮ್ಮದೇ ಮಗು ಅಂತ ಸಾಕಿದ್ದ ಕೊಪ್ಪಳದ ದಂಪತಿ ಮಗುವನ್ನು ದೂರ ಮಾಡಲಾಗದ ಸಂಕಟದಲ್ಲಿದ್ದರು. ಹೀಗಾದಾಗ ಕೊಪ್ಪಳದ ದಂಪತಿ, ಮಗುವಿನ ತಂದೆ-ತಾಯಿಯ ಮನವೊಲಿಸುವ ಕೆಲಸವನ್ನೂ ಮಾಡಿದ್ದಾರೆ. ಅಷ್ಟೇ ಅಲ್ಲ ಇನ್ನೊಂದು ರೀತಿಯ ಆಫರ್ ಕೂಡ ನೀಡಿದ್ರಂತೆ.

ಕೋಟಿ ಕೊಡ್ತೀವಿ ಮಗು ನಮಗೇ ಕೊಟ್ಟು ಬಿಡಿ ಅಂತ ಕೇಳಿದ್ರು
ಕೋಟಿ ಕೊಟ್ರು ಮಗು ಕೊಡಲ್ಲ ಅಂತ ಹೇಳಿ ಬಿಟ್ಟಿದ್ರು ಹೆತ್ತ ತಾಯಿ
ಕೊನೆಗೆ ಬೇರೆ ದಾರಿ ಕಾಣದೇ ವಾಪಸ್ ಹೋಗಿಬಿಟ್ಟರು ದಂಪತಿ

ಒಂದು ವರ್ಷದಿಂದ ತಮ್ಮದೇ ಮಗು ಅಂತ ಬಾಂಧವ್ಯ ಬೆಳೆದು ಬಿಟ್ಟಿತ್ತು. ತಮ್ಮದೇ ಮಗು ಅಂತ ಸಾಕಿ ಬೆಳೆಸಿದವರಿಗೆ ಅದೆಷ್ಟು ಪ್ರೀತಿ ಇರಬೇಕು ನೀವೇ ಊಹಿಸಿಕೊಳ್ಳಿ. ಆದ್ರೆ ತಾವು ಮೋಸ ಹೋಗಿರೋದು ಗೊತ್ತಾದ ಮೇಲೆ ದಂಪತಿ ಬೇರೆ ದಾರಿ ಇದ್ಯಾ ಅಂತ ಹುಡುಕತೊಡಗಿದ್ರು. ಈ ಮಗುವನ್ನು ಹೇಗಾದರೂ ಮಾಡಿ ತಮ್ಮ ಬಳಿಯೇ ಉಳಿಸಿಕೊಳ್ಳಬೇಕೆಂದು ಯೋಚಿಸಿದ್ರು. ಹೆತ್ತ ತಾಯಿಯ ಬಳಿ ಹೋಗಿ ಮನವೊಲಿಸಲು ಪ್ರಯತ್ನಿಸಿದ್ರು. ಕೋಟಿ ಕೋಟಿ ಹಣ ಬೇಕಾದರೂ ಕೊಡ್ತೀವಿ ಆದ್ರೆ ಮಗು ನಮಗೇ ಕೊಟ್ಟು ಬಿಡಿ ಅಂತ ಅಂಗಲಾಚಿದ್ದರಂತೆ. ಆದ್ರೆ ಕೋಟಿ ಕೊಟ್ಟರೂ ಮಗು ಕೊಡಲ್ಲ ಅಂತ ಹೆತ್ತ ತಾಯಿ ನಿಷ್ಠುರವಾಗಿ ಹೇಳಿ ಬಿಟ್ಟಿದ್ದರು. ಕಾರಣ ಈ ತಾಯಿ ತಾನು ಹೆತ್ತ ಮಗುವಿಗಾಗಿ ಒಂದು ವರ್ಷದಿಂದ ಪಟ್ಟ ಸಂಕಟ ಅಷ್ಟಿಷ್ಟಲ್ಲ. ಯಾವುದೇ ತಾಯಿ ತನ್ನ ಮಗುವನ್ನು ಮಾರಾಟ ಮಾಡಿಕೊಳ್ಳಲು ಇಚ್ಛಿಸುತ್ತಾಳಾ. ಹೋಗಲಿ ಬೇರೆಯವರು ಸಾಕಿ ಬಿಡ್ತೇವೆ ಅಂದರೂ ಕೊಟ್ಟು ಬಿಡ್ತಾರಾ. ಈ ಹೆತ್ತ ತಾಯಿಯ ಕರುಳು ಕೇಳಲಿಲ್ಲ. ಮನಸ್ಸು ಒಪ್ಪಲಿಲ್ಲ. ಕೊನೆಗೂ ಮಗು ಕೊಡಲ್ಲ ಅಂದು ಬಿಟ್ಟಿದ್ರು. ಅಲ್ಲಿಗೆ ಕೊಪ್ಪಳದ ದಂಪತಿಗೆ ನಿರಾಸೆಯಾಗಿ ಹೋಗಿತ್ತು.

ತಮ್ಮದೇ ಮಗು ಅಂತ ಊರೆಲ್ಲ ಹೇಳಿಕೊಂಡು ಬೀಗುತ್ತಿದ್ದರು
ಈಗ ಮೋಸ ಹೋಗಿದ್ದು ಗೊತ್ತಾದ ಮೇಲೆ ದಂಪತಿ ಕಂಗಾಲು
ಊರಲ್ಲಿ ಮರ್ಯಾದೆ ಹೋಗುತ್ತೆ ಅಂತ ನೊಂದಿರುವ ದಂಪತ

ಎಂಥಾ ಪರಿಸ್ಥಿತಿ ಬಂದು ಬಿಡ್ತು ನೋಡಿ. ಬಾಡಿಗೆ ತಾಯಿ ಮೂಲಕ ಮಗು ಪಡೆದುಕೊಂಡಿದ್ದು ಅಂತಾನೂ ಹೇಳಿರಲಿಲ್ಲ.ತಮ್ಮದೇ ಮಗು ಅಂತ ಈ ಕೊಪ್ಪಳದ ಶ್ರೀಮಂತ ದಂಪತಿ ಊರು-ಕೇರಿಯಲ್ಲಿ,ಸಂಬಂಧಿಗಳಲ್ಲಿ ಹೇಳಿಕೊಂಡು ಬೀಗಿದ್ದರು. ಎಲ್ಲರನ್ನೂ ಕರೆದು ಮಗುವಿನ ನಾಮಕರಣ,ಬರ್ತಡೇ ಅಂತ ಸೆಲಬ್ರೇಷನ್ ಮಾಡಿದ್ರು. ಆದ್ರೆ ಮೋಸ ಹೋಗಿದ್ದು ಗೊತ್ತಾಗ್ತಾ ಇದ್ದಂತೆ ಎಲ್ಲಾ ಕಡೆ ವಿಷಯ ಜಗಜ್ಜಾಹೀರಾಗಿ ಬಿಟ್ಟಿದೆ. ಈಗ ಊರ ಜನರಿಗೆ ,ಸಂಬಂಧಿಗಳಿಗೆ ಹೇಗೆ ಮುಖ ತೋರಿಸೋದು ಅನ್ನೋ ಚಿಂತೆಯಲ್ಲಿದ್ದಾರೆ ಕೊಪ್ಪಳದ ದಂಪತಿ. ಹಣ ಹೋದರೂ ಚಿಂತೆ ಇಲ್ಲ, ಮಗು ಸಿಕ್ಕಿಬಿಟ್ರೆ ಸಾಕು,ನೈಜ ತಂದೆ-ತಾಯಿ ಮಗುವನ್ನು ತಮಗೇ ಕೊಟ್ಟು ಬಿಟ್ಟರೆ ಸಾಕು ಅಂತ ಅಂದುಕೊಂಡರೆ ಅದು ಈಡೇರಲಿಲ್ಲ. ಹೀಗಾಗಿ ಕೊಪ್ಪಳದ ಈ ಶ್ರೀಮಂತ ದಂಪತಿ ಒಂದು ಕಡೆ ಮಗುವನ್ನು ದೂರ ಮಾಡಿಕೊಂಡ ಸಂಕಟದಲ್ಲಿದ್ರೆ ಇನ್ನೊಂದು ಕಡೆ ಸಂಬಂಧಿಗಳ ಮುಂದೆ ಮುಜುಗರ ಆಗುತ್ತೆ ಅಂತ ಚಿಂತೆಯಲ್ಲಿ ಮುಳುಗಿದ್ದಾರೆ. ಆದ್ರೆ ಮೋಸ ಹೋಗಿದ್ವಿ ಅಂತ ಹೇಳಿದರೆ ತಪ್ಪೇನಿಲ್ಲ. ಇಷ್ಟಕ್ಕೂ ಇದಕ್ಕೆಲ್ಲ ಕಾರಣ ಮನೋ ವೈದ್ಯೆ ರಶ್ಮಿ. ಈ ರಶ್ಮಿ ಮಾಡಿದ ಮಹಾ ಮೋಸಕ್ಕೆ ಕೊಪ್ಪಳದ ದಂಪತಿ ವ್ಯಥೆ ಪಡುವಂತಾಗಿದೆ.

ಮಗು ಸಿಕ್ಕರೂ ಇನ್ನೂ ತಾಯಿಯ ಮಡಿಲು ಸೇರಲಾಗಲಿಲ್ಲ
ಮಕ್ಕಳ ಆರೈಕೆ ಕೇಂದ್ರದಲ್ಲಿಯೇ ಮಗು ಇರುವಂತಾಗಿದ್ದೇಕೆ?
ಬೆಂಗಳೂರಿನಲ್ಲಿ ಹೆತ್ತ ತಾಯಿ ನಿತ್ಯ ಅಲೆದಾಡ್ತಿರೋದು ಎಲ್ಲಿಗೆ?

ಮಗು ಕಳ್ಳತನ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.ಆದ್ರೆ ನಿಜವಾದ ಪೋಷಕರಿಗೆ,ಹೆತ್ತ ತಾಯಿಗೆ ತಕ್ಷಣ ಮಗು ಸಿಗಲ್ಲ. ಮಗು ಪತ್ತೆಯಾಗಿದ್ದರೂ ಅದು ಇವ್ರದ್ದೇ ಮಗು ಅನ್ನೋದು ದೃಢಪಡಬೇಕು.ಇದಕ್ಕಾಗಿ ಸದ್ಯ ಕೊಪ್ಪಳದ ಶ್ರೀಮಂತ ದಂಪತಿ ಕೊಟ್ಟು ಹೋದ ಮಗುವನ್ನು ಆರೈಕೆ ಕೇಂದ್ರದಲ್ಲಿಯೇ ಇರಿಸಲಾಗಿದೆ. ಮಗುವಿನ ಡಿಎನ್ ಎ ಟೆಸ್ಟ್ ಆದ ಬಳಿಕವೇ ಅದನ್ನು ಹೆತ್ತ ತಾಯಿಗೆ ಹಸ್ತಾಂತರ ಮಾಡಲಾಗುತ್ತದೆ. ಬಹುಷಃ ಈ ಪ್ರಕ್ರಿಯೆ ಮುಗಿಯಲು ಇನ್ನಷ್ಟು ದಿನಗಳು ಕಾಯಲೇಬೇಕಾಗುತ್ತದೆ. ಆದ್ರೆ ಒಂದು ಕಡೆ ಪೋಷಕರನ್ನು ದೂರ ಮಾಡಿಕೊಂಡು,ಇನ್ನೊಂದು ಕಡೆ ಹೆತ್ತ ತಾಯಿಯ ಮಡಿಲನ್ನು ಸೇರಲಾಗದೆ ಮಗು ಮಧ್ಯೆ ಆರೈಕೆ ಕೇಂದ್ರದಲ್ಲಿರುವಂತಾಗಿದೆ. ಆದ್ರೆ ಇದು ಅನಿವಾರ್ಯ. ಕಾನೂನಾತ್ಮಕವಾದ ಪ್ರಕ್ರಿಯೆಗಳು ಆಗೋವರೆಗೂ ಯಾರೂ ಏನು ಮಾಡಕಾಗಲ್ಲ. ಆದರೆ, ಹೆತ್ತ ತಾಯಿಯ ಮನಸ್ಸು ಕೇಳುತ್ತಿಲ್ಲ. ಮಗುವನ್ನು ಎಷ್ಟು ಬೇಗ ತನ್ನ ಮಡಿಲಿಗೆ ಸೇರಿಸಿಕೊಳ್ಳುತ್ತೇನೋ ಅನ್ನುವ ತವಕ. ಹೀಗಾಗಿ ಬೆಳಗಾದರೆ ಸಾಕು ಪೊಲೀಸ್ ಸ್ಟೇಷನ್ ಬಳಿ, ಆರೈಕೆ ಕೇಂದ್ರದ ಬಳಿ ಬರ್ತಾನೇ ಇದಾರೆ ಈ ತಂದೆ-ತಾಯಿ. ಆದ್ರೆ ಪೊಲೀಸರು ಕಾನೂನಿನ ಪ್ರಕಾರವೇ ಮಗುವನ್ನು ಮರಳಿಸಬೇಕಾಗಿದೆ.

ಮೋಸ ಹೋಗೋರು ಇರೋವರೆಗೂ ಮೋಸ ಮಾಡೋರು ಇದ್ದೇ ಇರ್ತಾರೆ. ಆದರೆ, ಮುಗ್ಧರನ್ನು ವಂಚಿಸೋದು ತಪ್ಪು. ವಂಚನೆ ಮಾಡಿದವರಿಗೆ ಶಿಕ್ಷೆ ಆಗುತ್ತೆ. ಹಾಗೆಯೇ ಕಾನೂನಿನ ಪ್ರಕ್ರಿಯೆ ಮುಗಿದ ಮೇಲೆ ಮಗು ಹೆತ್ತ ತಾಯಿಯ ಮಡಿಲು ಸೇರುತ್ತೆ.

The post ವೈದ್ಯೆ ವಂಚನೆ ಕೇಸ್; ರಾಜಕುಮಾರನಂತೆ ಸಾಕಿದವ್ರಿಗೆ ನೋವು.. ಅತ್ತ ಹೆತ್ತವರಿಗೂ ಸಿಕ್ತಿಲ್ಲ ಮಗು appeared first on News First Kannada.

Source: newsfirstlive.com

Source link