ಟೀಂ ಇಂಡಿಯಾ ಆಟಗಾರ, ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುವ ಆಲ್ರೌಂಡರ್ ರಾಹುಲ್ ತೆವಾಟಿಯಾ ತಮ್ಮ ಗೆಳತಿ ರಿಧಿ ಮಣ್ಣು ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ವರ್ಷದ ಆರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಜೋಡಿ, ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆ ಕಾರ್ಯಕ್ರಮದಲ್ಲಿ ಟೀಮ್ ಇಂಡಿಯಾದ ಆಟಗಾರರಾದ ಯುಜವೇಂದ್ರ ಚಹಾಲ್, ರಿಷಭ್ ಪಂತ್, ನಿತೀಶ್ ರಾಣಾ ಸೇರಿದಂತೆ ಹಲವು ಸಹ ಆಟಗಾರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಮದುವೆ ಸಮಾರಂಭ ಫೋಟೋಗಳನ್ನು ತೆವಾಟಿಯಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ನವ ದಂಪತಿಗೆ ಕ್ರಿಕೆಟ್ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ.
ಅಂದಹಾಗೇ, ಕಳೆದೆರಡು ಐಪಿಎಲ್ ಆವೃತ್ತಿಗಳಿಂದ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ತೆವಾಟಿಯಾ ಆಡುತ್ತಿದ್ದು, 2020ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಸತತ 5 ಸಿಕ್ಸರ್ ಸಿಡಿಸಿ ಪಂದ್ಯದ ಗತಿಯನ್ನೇ ಬದಲಿಸಿದ್ದರು. ಇದರೊಂದಿಗೆ ಒಂದೇ ಪ್ರದರ್ಶನದಲ್ಲಿ ಸ್ಟಾರ್ ಆಗಿ ಹೊರ ಹೊಮ್ಮಿದ್ದರು. ಈ ಆವೃತ್ತಿಯ ಬಳಿಕ ಇಂಗ್ಲೆಂಡ್ ವಿರುದ್ಧದ ನಡೆದ ಟಿ-20 ಸರಣಿಗೆ ತೆವಾಟಿಯಾ ಆಯ್ಕೆಯಾದರೂ ಟೀಮ್ ಇಂಡಿಯಾಯ ಪರ ಪಾದಾರ್ಪಣೆ ಮಾಡೋ ಅವಕಾಶ ಅವರಿಗೆ ಸಿಕ್ಕಿರಲಿಲ್ಲ.