ಬೆಂಗಳೂರು: ರಾಜ್ಯದಲ್ಲಿ ಎಲ್ಲರೂ ಲಸಿಕೆ ಪಡೆಯುವಂತೆ ಜಾಗೃತಿ ಮೂಡಿಸಲು ಕೆಪಿಸಿಸಿ ವತಿಯಿಂದ ಮಕ್ಕಳ ಮೂಲಕ ಆರಂಭಿಸಲಾಗಿರುವ #VaccinateKarnataka (ವ್ಯಾಕ್ಸಿನೇಟ್ ಕರ್ನಾಟಕ) ಅಭಿಯಾನ ಸ್ಪರ್ಧೆಯಲ್ಲಿ ಉದ್ದೇಶಿತ 100 ವಿಜೇತರ ಪೈಕಿ ಮೊದಲ ವಿಜೇತರನ್ನು ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಭಾನುವಾರ ಆಯ್ಕೆ ಮಾಡಿದ್ದಾರೆ.

ಉಜಿರೆಯ ಎಸ್‍ಡಿಎಂ ಆಂಗ್ಲ ಮಾಧ್ಯಮ ಶಾಲೆಯ 5ನೇ ತರಗತಿ ವಿದ್ಯಾರ್ಥಿ ಆಶ್ಲೇಶ್ ಡಿ. ಜೈನ್ ಈ ಸ್ಪರ್ಧೆಯ ಮೊದಲ ವಿಜೇತರಾಗಿದ್ದಾರೆ.

ಅಭಿಯಾನದ ಮೊದಲ ದಿನ ಸುಮಾರು 5,000 ವಿದ್ಯಾರ್ಥಿಗಳು ಲಸಿಕೆ ಜಾಗೃತಿ ಕುರಿತ ವೀಡಿಯೋಗಳನ್ನು ಕಳುಹಿಸಿದ್ದಾರೆ. ವಿದ್ಯಾರ್ಥಿಗಳು ಫೇಸ್‍ಬುಕ್, ಟ್ವಿಟ್ಟರ್ ಹಾಗೂ ಇನ್ ಸ್ಟಾಗ್ರಾಮ್ ಗಳಲ್ಲಿ #VaccinateKarnataka ಮೂಲಕ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳು ಬಹಳ ಪರಿಣಾಮಕಾರಿಯಾಗಿ ಲಸಿಕೆ ಕುರಿತು ತಮ್ಮ ವೀಡಿಯೋಗಳಲ್ಲಿ ಸಂದೇಶ ರವಾನಿಸಿರುವುದು ಗಮನಾರ್ಹ ಸಂಗತಿ.

ದಿನನಿತ್ಯ ಬರುವ ವಿಡಿಯೋಗಳ ಆಧಾರದ ಮೇಲೆ ಉಳಿದ ವಿಜೇತರನ್ನು ಆಯ್ಕೆ ಮಾಡಲಾಗುವುದು. ಲಸಿಕೆ ಮಹತ್ವದ ಬಗ್ಗೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಇಂತಹ ಅಭಿಯಾನ ಆರಂಭವಾಗಿದ್ದು, ರಾಜ್ಯದ 95 ಲಕ್ಷ ವಿದ್ಯಾರ್ಥಿಗಳಿಗೆ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಸ್ಪರ್ಧೆ ಜುಲೈ 1ರವರೆಗೂ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ತಮ್ಮದೇ ಆದ ಸೃಜನಶೀಲತೆ ಮೂಲಕ ಎಲ್ಲ ವಯಸ್ಕರು ಲಸಿಕೆ ಪಡೆಯಬೇಕು ಎಂದು ಒತ್ತಾಯಿಸಿ 2 ನಿಮಿಷದೊಳಗಿನ ವೀಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ #VaccinateKarnataka ಹ್ಯಾಶ್ ಟ್ಯಾಗ್ ಮೂಲಕ ಹಾಕಬೇಕು. ಜತೆಗೆ www.vaccinate karnataka.com ಗೆ ಕಳುಹಿಸಿಕೊಡಬೇಕು.

ಸ್ಪರ್ಧೆ ಮುಕ್ತಾಯವಾದ ನಂತರ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲ ವಿಜೇತರನ್ನು ಸಂಪರ್ಕಿಸಿ, ಅಭಿನಂದನೆ ಸಲ್ಲಿಸಿದ್ದಾರೆ.

The post ವ್ಯಾಕ್ಸಿನೇಟ್ ಕರ್ನಾಟಕ ಅಭಿಯಾನ ಸ್ಪರ್ಧೆಯ ಮೊದಲ ವಿಜೇತರನ್ನು ಆಯ್ಕೆ ಮಾಡಿದ ಡಿ.ಕೆ.ಶಿವಕುಮಾರ್ appeared first on Public TV.

Source: publictv.in

Source link