ನವದೆಹಲಿ: ಕೊರೊನಾ ವ್ಯಾಕ್ಸಿನೇಷನ್ ವಿಚಾರದಲ್ಲಿ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.

2021ರ ಜನವರಿ 16ರಂದು ಭಾರತದಲ್ಲಿ ವಿಶ್ವದ ಅತೀ ದೊಡ್ಡ ವ್ಯಾಕ್ಸಿನೇಷನ್ ಅಭಿಯಾನ ಶುರುವಾಗಿತ್ತು. ಅಂದಿನಿಂದ ಈವರೆಗೆ 32.36 ಕೋಟಿ ಡೋಸ್​ ಲಸಿಕೆ ವಿತರಣೆ ಮಾಡಲಾಗಿದೆ. ಈ ಮೂಲಕ ಒಟ್ಟಾರೆ ಲಸಿಕೆ ವಿತರಣೆಯಲ್ಲಿ ಭಾರತ ಅಮೆರಿಕಾವನ್ನ ಹಿಂದಿಕ್ಕಿದೆ.

ಜನವರಿ 16 ರಿಂದ ಜೂನ್ 28, 2021ರವರೆಗೆ ಭಾರತದಲ್ಲಿ  32,36,63,297 ಡೋಸ್​ ಲಸಿಕೆ ನೀಡಲಾಗಿದೆ. ಭಾರತಕ್ಕಿಂತ ಒಂದು ತಿಂಗಳ ಮುನ್ನ ಅಂದ್ರೆ 2020ರ ಡಿಸೆಂಬರ್​ನಲ್ಲಿ ವ್ಯಾಕ್ಸಿನೇಷನ್ ಶುರು ಮಾಡಿದ್ದ ಅಮೆರಿಕಾದಲ್ಲಿ ಈವರೆಗೆ 32,33,27,328 ಡೋಸ್​ ನೀಡಲಾಗಿದೆ. ಇನ್ನು ಕಳೆದ ವಾರ ಲಸಿಕೆ ಉತ್ಸವದ ಮೊದಲ ದಿನವೇ ಒಂದೇ ದಿನ 80 ಲಕ್ಷಕ್ಕೂ ಅಧಿಕ ಜನರಿಗೆ ಲಸಿಕೆ ನೀಡಿ ಭಾರತ ವಿಶ್ವದಾಖಲೆ ಬರೆದಿತ್ತು.

ಭಾರತದಲ್ಲಿ ಪ್ರಸ್ತುತ ಇರುವ  ಸಕ್ರಿಯ ಕೊರೊನಾ ಕೇಸ್​ಗಳ ಸಂಖ್ಯೆ 5,72,994. ಒಟ್ಟಾರೆ ಕೊರೊನಾ ಪ್ರಕರಣಗಳಿಗೆ ಹೋಲಿಸಿದ್ರೆ ಇದು 1.89 ಪರ್ಸೆಂಟ್​ ಇದೆ. ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 46,148 ಹೊಸ ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಈವರೆಗೆ ಸೋಂಕಿಗೊಳಗಾದವರ ಸಂಖ್ಯೆ 3,02,79,331ಕ್ಕೆ ತಲುಪಿದೆ.

ಕಳೆದ 24 ಗಂಟೆಗಳ್ಲಲಿ 58,578 ಮಂದಿ ಸೋಂಕಿನಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದು, ಈವರೆಗೆ ಡಿಸ್ಚಾರ್ಜ್ ಆದವರ ಸಂಖ್ಯೆ 2,93,09,607ಕ್ಕೆ ಏರಿಕೆಯಾಗಿದೆ. ಸದ್ಯ ದೇಶದಲ್ಲಿ ರಿಕವರಿ ರೇಟ್​(ಸೋಂಕಿತರು ಗುಣಮುಖರಾಗ್ತಿರುವ ಪ್ರಮಾಣ) ಶೇಕಡ 96.80 ಇದೆ.

ಪ್ರತಿದಿನದ ಕೊರೊನಾ ಪಾಸಿಟಿವಿಟಿ ಪ್ರಮಾಣ ಶೇಕಡ 2.94 ಇದೆ. ಸತತ 21 ದಿನಗಳಿಂದ ಪಾಸಿಟಿವಿಟಿ ರೇಟ್​ ಶೇಕಡ 5ಕ್ಕಿಂತ ಕಡಿಮೆ ಇದೆ. ಪ್ರತಿದಿನ ದಾಖಲಾಗ್ತಿರೋ ಹೊಸ ಕೇಸ್​ಗಳಿಗಿಂತ ಗುಣಮುಖರಾಗ್ತಿರುವವರ ಸಂಖ್ಯೆ ಹೆಚ್ಚಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

The post ವ್ಯಾಕ್ಸಿನೇಷನ್​​ನಲ್ಲಿ ಮತ್ತೊಂದು ಮೈಲಿಗಲ್ಲು.. ಅಮೆರಿಕಾವನ್ನ ಹಿಂದಿಕ್ಕಿದ ಭಾರತ appeared first on News First Kannada.

Source: newsfirstlive.com

Source link