ಇಂಗ್ಲೆಂಡ್ ನಲ್ಲಿ ಕೊರೊನಾ ಅಬ್ಬರಿಸಿದ್ದೇ ಸುಳ್ಳಾಗಿ ಬಿಟ್ಟಿದೆ. ಅಷ್ಟರ ಮಟ್ಟಿಗೆ ಜನ ನಿರಾಳರಾಗಿ ಎಲ್ಲಾ ಕಡೆ ಬಿಂದಾಸ್ ಆಗಿ ಓಡಾಡ್ತಾ ಇದ್ದಾರೆ. ಇಲ್ಲಿನ ವಿಶಾಲವಾದ ಪಾರ್ಕ್​​ಗಳು, ಬೀಚ್ ಗಳು ಜನರಿಂದ ತುಂಬಿ ತುಳುಕ್ತಾ ಇವೆ. ಯಾರೂ ಮಾಸ್ಕ್ ಹಾಕಿಲ್ಲ. ಸಾಮಾಜಿಕ ಅಂತರವಂತೂ ಮೊದಲೇ ಇಲ್ಲ. ಇದೆಲ್ಲ ನೋಡಿದಾಗ ಬ್ರಿಟನ್ ಕೊರೊನಾದಿಂದ ಮುಕ್ತವಾಗಿ ಬಿಡ್ತಾ ಅನ್ನೋ ಪ್ರಶ್ನೆ ಸಹಜವಾಗಿ ಉದ್ಭವಿಸುತ್ತೆ.

ಬ್ರಿಟನ್ನಿನ ಬಹುತೇಕ ಕಡೆ ಎಲ್ಲಾ ನಿರ್ಬಂಧಗಳನ್ನು ತೆರವುಗೊಳಿಸಲಾಗಿದೆ. ಎರಡನೇ ಅಲೆ ತಗ್ಗುತ್ತಿದ್ದಂತೆ ಇಲ್ಲಿನ ಸರ್ಕಾರ, ಎಲ್ಲಾ ಕಡೆ ಹೆಚ್ಚು ಕಡಿಮೆ ಲಾಕ್ ಡೌನ್ ಓಪನ್ ಮಾಡಿದೆ. ಲಂಡನ್ ನಲ್ಲಂತೂ ಜನ ಮುಕ್ತವಾಗಿ ಮೊದಲಿದ್ದ ಲೈಫ್ ಸ್ಟೈಲ್​​ಗೆ ಮರಳಿ ಬಿಟ್ಟಿದ್ದಾರೆ. ಇವರಿಗೆ ಕೊರೊನಾ ಭಯಾನೂ ಇಲ್ಲ, ಮುಂದೆ ಬಂದು ಬಿಡಬಹುದು ಅನ್ನೋ ಆತಂಕವೂ ಇಲ್ಲ.

ಕೊರೊನಾದಿಂದ ನಮ್ಮ ದೇಶ ಸೇಫ್ ಅನ್ನೊ ಮಾತನ್ನ ಯಾವ ದೇಶವೂ ಧೈರ್ಯದಿಂದ ಹೇಳ್ತಾನೇ ಇಲ್ಲ. ಯಾಕಂದ್ರೆ ತಕ್ಕ ಮಟ್ಟಿಗೆ ಗೆದ್ದಿರೋ ರಾಷ್ಟ್ರಗಳಲ್ಲೂ ಇನ್ನೂ ಸೋಂಕಿತರ ಸಾವು ವರದಿಯಾಗುತ್ತಲೇ ಇದೆ. ಆದರೆ, ಇಂಗ್ಲೆಂಡ್ ನಲ್ಲಿ ಮಾತ್ರ ಜನ ಈ ರೀತಿ ಓಡಾಡ್ತಾ ಇರೋದನ್ನು ನೋಡಿದ್ರೆ ಅಲ್ಲಿ ಕೊರೊನಾ ಹೋಗೇ ಬಿಡ್ತು ಅನ್ನೋ ತರಾ ಇದೆ. ನಿಜವಾಗಲೂ ಬ್ರಿಟನ್ ನಲ್ಲಿ ಕೊರೊನಾ ಕಡಿಮೆ ಆಗಿ ಬಿಟ್ಟಿದ್ಯಾ. ಬ್ರಿಟನ್ ಕೊರೊನಾದಿಂದ ಈಗಲೂ ಮುಕ್ತವಾಗಿಲ್ಲ.

ಇಂಗ್ಲೆಂಡ್ ಅದೆಷ್ಟರ ಮಟ್ಟಿಗೆ ತತ್ತರಿಸಿ ಹೋಗಿತ್ತು ಗೊತ್ತಾ?
ಬ್ರಿಟನ್ ನಲ್ಲಿ ಕೊರೊನಾದಿಂದ ಸಾವನ್ನಪ್ಪಿದವರು ಎಷ್ಟು?

ಕೊರೊನಾದಿಂದ ತತ್ತರಿಸಿ ಹೋಗಿದ್ದ ರಾಷ್ಟ್ರಗಳ ಸಾಲಿನಲ್ಲಿ ಬ್ರಿಟನ್ ಕೂಡ ಮುಂಚೂಣಿಯಲ್ಲೇ ಇದೆ. ಅಮೆರಿಕಾ, ಬ್ರೆಜಿಲ್, ಇಂಡಿಯಾ, ಇಟಲಿ ಮತ್ತಿತರೆ ದೇಶಗಳ ಜೊತೆಗೆ ಇಂಗ್ಲೆಂಡ್ ಕೂಡ ಹೆಚ್ಚು ಸಂಕಷ್ಟ ಅನುಭವಿಸಿದೆ. ಬ್ರಿಟನ್ನಿನ ಕೊರೊನಾ ಸ್ಥಿತಿ ಗತಿಯನ್ನು ಒಮ್ಮೆ ನೋಡಿಕೊಂಡು ಬರೋಣ.

ಇಂಗ್ಲೆಂಡ್ ಕೊರೊನಾ ಸ್ಥಿತಿ ಗತಿ
ವಿಶ್ವದ ಶ್ರೀಮಂತ ರಾಷ್ಟ್ರ ಬ್ರಿಟನ್ ನಲ್ಲಿ ಒಟ್ಟು ಜನ ಸಂಖ್ಯೆ 6 ಕೋಟಿ 82 ಲಕ್ಷವಿದ್ದರೆ, ಇದುವರೆಗೂ ಕೊರೊನಾ ಬಂದಾಗಿನಿಂದ ಒಟ್ಟು ಸೋಂಕಿತರಾದವರ ಸಂಖ್ಯೆ 44 ಲಕ್ಷದವರೆಗೂ ತಲುಪಿದೆ, ಹಾಲಿ ರಿಪೋರ್ಟ್ ಆದ ಹೊಸ ಪ್ರಕರಣಗಳು 3165 ಮಾತ್ರ. ಆದ್ರೆ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 71 ಸಾವಿರದ 169 ಕ್ಕೆ ತಲುಪಿದೆ. ಜೊತೆಗೆ ಕೋವಿಡ್ ನಿಂದ 1 ಲಕ್ಷದ 27 ಸಾವಿರದಷ್ಟು ಜನ ಮೃತರಾಗಿದ್ದಾರೆ.

ಈ ಅಂಕಿ ಅಂಶ ನೋಡಿದ ಮೇಲೆ ಸ್ಪಷ್ಟವಾಗಿ ಗೊತಾಗುತ್ತಿದೆ. ಇಂಗ್ಲೆಂಡ್ ಕೊರೊನಾ ಆಂತಕದಿಂದ ದೂರವಾಗಿಲ್ಲ ಅಂತ. ಇರುವ 6 ಕೋಟಿ ಜನ ಸಂಖ್ಯೆಯಲ್ಲಿ 70 ಸಾವಿರದಷ್ಟು ಸಕ್ರಿಯ ಪ್ರಕರಣಗಳು ಇದ್ದಾವೆ. ಅಂದರೆ ಇದು ಕಡಿಮೆಯೇನಲ್ಲ. 70 ಸಾವಿರ ಇದ್ದಿದ್ದು 7 ಲಕ್ಷವಾಗಲು ಎಷ್ಟು ದಿನವೂ ಬೇಕಾಗಲ್ಲ. ಆದ್ರೆ ಇಂಗ್ಲೆಂಡ್ ನಲ್ಲಿ ಜನಸಂದಣಿ ಕಡಿಮೆ ಇರೋದ್ರಿಂದ ಇದರ ಸಾಧ್ಯತೆ ಕಡಿಮೆ. ಹಾಗಂತ ಹೀಗೆ ಬೀಚ್ ನಲ್ಲಿ, ಪಾರ್ಕ್ ನಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಇಷ್ಟೊಂದು ಬಿಂದಾಸ್ ಆಗಿ ಜನ ಓಡಾಡ್ತಾ ಇದಾರೆ ಅಂದ್ರೆ ಅದ್ಯಾವುದೋ ಹಾಸ ದಾರಿ ಕಂಡು ಕೊಂಡಿರಬಹುದು ಇಂಗ್ಲೆಂಡಿನ ಜನ.

ವಿಶ್ವದ ಬಹುಪಾಲು ರಾಷ್ಟ್ರಗಳು ಕೊರೊನಾದಿಂದ ತತ್ತರಿಸಿ ಹೋಗ್ತಾ ಇದ್ರೆ, ದಿ ಗ್ರೇಟ್ ಬ್ರಿಟನ್ ಕೊರೊನಾದಿಂದ ಸ್ವಲ್ಪ ತಣ್ಣಗಾಗಿದೆ. ಮೊದಲ ಅಲೆಯಿಂದ ಇಲ್ಲಿಯವರೆಗೂ ಸತತವಾಗಿ ಏರಿಕೆಯಲ್ಲೇ ಇದ್ದ ಸೋಂಕಿತರ ಸಂಖ್ಯೆ ಹಾಗೂ ಸಾವಿನ ಸಂಖ್ಯೆಯಲ್ಲಿ ಇಳಿಕೆ ಕಾಣಿಸಿದ್ದು, ಕೊರೊನಾ ನಿಯಂತ್ರಣದಲ್ಲಿ ಬ್ರಿಟನ್ ತಜ್ಞರು ಸೂಚಿಸಿದ ಸಲಹೆಯನ್ನು ಪಾಲಿಸುತ್ತಿರುವುದು ಈ ಸಮಾಧಾನಕ್ಕೆ ಕಾರಣ ಎನ್ನಲಾಗಿದೆ.

ಇಂಗ್ಲೆಂಡ್ ನಲ್ಲಿ ಶೂನ್ಯಕ್ಕೆ ತಲುಪಿದ ಸೋಂಕಿತರ ಸಾವಿನ ಸಂಖ್ಯೆ
ಇದರಿಂದಾಗಿ ಜನರಲ್ಲಿದ್ದ ಭೀತಿ ಕಡಿಮೆಯಾಗ್ತಾ ಇರುವ ವರದಿ

ವಿಶ್ವಕ್ಕೆ ಕೊರೊನಾ ಅಪ್ಪಳಿಸಿದಂತೆ ಬ್ರಿಟನ್ ದೇಶವೂ ಕೋವಿಡ್ ನಿಂದ ತತ್ತರಿಸಿ ಹೋಗಿತ್ತು. ಕಳೆದ ಒಂದೂವರೆ ವರ್ಷಗಳಿಂದ ದಿನ ನಿತ್ಯ ಪ್ರಕರಣಗಳು ಹಾಗೂ ನಿತ್ಯದ ಸಾವಿನ ಪ್ರಕರಣಗಳು ಹೆಚ್ಚಾಗೇ ಇತ್ತು. ಆದರೆ ಕಳೆದ ವಾರದಿಂದ ಈ ಸಂಖ್ಯೆಯಲ್ಲಿ ನಿಧಾನವಾಗಿ ಇಳಿಕೆ ಕಾಣಿಸಿದೆ. ಕಳೆದ ಭಾನುವಾರದಿಂದ ನೋಡೋದಾದ್ರೆ, ಇಡೀ ಬ್ರಿಟನ್ ನಲ್ಲಿ ವೇಲ್ಸ್​ನಲ್ಲಿ ಮಾತ್ರ ನಾಲ್ವರು ಸೋಂಕಿತರು ಮೃತಪಟ್ಟಿದ್ದರು. ಕಳೆದ ಒಂದೂವರೆ ವರ್ಷದಲ್ಲೇ ಕೊರೊನಾ ಸಾವಿನ ಸಂಖ್ಯೆ ಶೂನ್ಯಕ್ಕೆ ತಲುಪಿತ್ತು. ಈ ಬೆಳವಣಿಗೆಯಿಂದ ಇಂಗ್ಲೆಂಡಿನ ಜನರಲ್ಲಿ ಇದ್ದ ಆತಂಕ ದೂರವಾಗ್ತಾ ಇದೆ.

ಪಬ್, ಬಾರ್ ರೆಸ್ಟೋರೆಂಟ್ ಗಳು ರೀ-ಒಪನ್
ಮದುವೆ ಇನ್ನಿತರ ಕಾರ್ಯಕ್ರಮಗಳಿಗೂ ಅವಕಾಶ

ಇಂಗ್ಲೆಂಡ್ ನಲ್ಲಿ ಎರಡನೇ ಅಲೆ ಕಡಿಮೆ ಆಗ್ತಾ ಇದ್ದಂತೆ ನಿರ್ಬಂಧಗಳನ್ನು ತೆರವು ಮಾಡ್ತಾ ಬರಲಾಗಿದೆ. ಇಂಗ್ಲೆಂಡ್ ನ ಮಹಾನಗರಗಳಲ್ಲಿ ಪಬ್, ಬಾರ್ ,ರೆಸ್ಟೋರೆಂಟ್ ಗಳು ರೀ ಓಪನ್ ಆಗಿವೆ. ಪಬ್ ಬಾರ್ ಗಳಲ್ಲಿ ಮತ್ತೆ ಜನ ಹೆಚ್ಚಾಗಿಯೇ ಕಾಣಿಸಿಕೊಳ್ತಾ ಇದಾರೆ. ಇನ್ನು ಮನರಂಜನಾ ಪಾರ್ಕ್ ಗಳಿಗೂ ಜನ ಬರ್ತಾ ಇದಾರೆ. ವಿಚಿತ್ರ ಅಂದ್ರೆ ಇಲ್ಲಿ ಬರ್ತಾ ಇರುವ ಜನರು ಮಾಸ್ಕ್ ಕೂಡ ಧರಿಸ್ತಾ ಇಲ್ಲ. ಸಾಮಾಜಿಕ ಅಂತರವನ್ನಂತೂ ಪಾಲಿಸ್ತಾನೇ ಇಲ್ಲ. ಇದಕ್ಕೆಲ್ಲ ಕಾರಣವೇನು ಅಂತ ನೋಡಿದಾಗ ಇಲ್ಲಿನ ಜನ ಮಾನಸಿಕವಾಗಿ ಕೊರೊನಾ ಮಣಿಸಲು ಸಿದ್ಧರಾಗಿ ಬಿಟ್ಟಿದ್ದಾರೆ. ಇದಕ್ಕೆ ಕಾರಣ ಇಂಗ್ಲೆಂಡ್ ನಲ್ಲಾದ ವ್ಯಾಕ್ಸಿನೇಷನ್ ಡ್ರೈವ್.

ಇಂಗ್ಲೆಂಡ್ ವ್ಯಾಕ್ಸಿನೇಷನ್ ಡ್ರೈವ್ ಬಹುತೇಕ ಪೂರ್ಣ
ಶೇಕಡಾ 50ರಷ್ಟು ಜನರಿಗೆ ಎರಡೂ ಡೋಸ್ ಕಂಪ್ಲೀಟ್
ದೇಶದಲ್ಲಿ ಒಂದು ಡೋಸ್ ಪಡೆದವರ ಸಂಖ್ಯೆ ಶೇಕಡಾ 75

ಇಂಗ್ಲೆಂಡ್, ಅಮೆರಿಕಾ, ಇಟಲಿ, ಬ್ರೆಜಿಲ್, ಇಸ್ರೇಲ್ ಹೀಗೆ ಹಲವು ದೇಶಗಳು ಕೊರೊನಾ ಆತಂಕದಿಂದ ದೂರ ಆಗ್ತಾ ಇರೋದಕ್ಕೆ ಮೂಲ ಕಾರಣ ಲಸಿಕೆ ಅಭಿಯಾನ. ಅಮೆರಿಕಾದಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಶೇಕಡಾ 65ರಷ್ಟು ಆಗ್ತಾ ಇದ್ದಂತೆಯೇ ಅಲ್ಲಿ ಮಾಸ್ಕ್ ಕೂಡ ಅಗತ್ಯ ಇಲ್ಲ ಅಂತ ಘೋಷಿಸಿ ಬಿಡಲಾಗಿತ್ತು. ಅದೇ ರೀತಿ ಇಸ್ರೇಲ್ ಕೂಡ ಮಾಸ್ಕ್ ಮುಕ್ತವಾಗಿದೆ. ಈಗ ನೋಡಿದ್ರೆ ಇಂಗ್ಲೆಂಡ್ ನಲ್ಲೂ ಇದೇ ವಾತಾವರಣ ಕಾಣ್ತಾ ಇದೆ. ಇಲ್ಲಿ ಜನ ಮಾಸ್ಕ್ ಹಾಕಬೇಕಿಲ್ಲ ಅಂತ ಸರ್ಕಾರವೇನು ಹೇಳಿಲ್ಲ. ಆದ್ರೆ ಜನರೇ ಮಾಸ್ಕ್ ಹೆಚ್ಚಾಗಿ ಬಳಸ್ತಾ ಇಲ್ಲ. ಇದಕ್ಕೆಲ್ಲ ಕಾರಣ ಇಂಗ್ಲೆಂಡ್ ನಲ್ಲಿ ವ್ಯಾಕ್ಸಿನೇಷನ್ ಡ್ರೈವ್ ಬಹುತೇಕ ಸಕ್ಸಸ್ ಆಗಿದೆ. ಇರುವ 6 ಕೋಟಿ ಜನರಲ್ಲಿ ಹೆಚ್ಚು ಕಡಿಮೆ ಅರ್ಹ 4 ಕೋಟಿ ಜನರು ಲಸಿಕೆ ಪಡೆದುಕೊಂಡಿದ್ದಾರೆ. ಶೇಕಡಾ 50ರಷ್ಟು ಜನ ಅಂದ್ರೆ 2 ಕೋಟಿಗೂ ಹೆಚ್ಚು ಜನಕ್ಕೆ ಎರಡೂ ಡೋಸ್ ವ್ಯಾಕ್ಸಿನ್ ಕಂಪ್ಲೀಟ್ ಆಗಿದೆ. ಇನ್ನು ಶೇಕಡಾ 75ರಷ್ಟು ಜನರಿಗೆ ಒಂದು ಡೋಸ್ ಕಂಪ್ಲೀಟ್ ಆಗಿದೆ. ಹೀಗಾಗಿ ಕೊರೊನಾ ಅಪಾಯ ತರಲ್ಲ ಅನ್ನೋ ವಿಶ್ವಾಸ ಇಂಗ್ಲೆಂಡಿನ ಜನರದ್ದು. ಹೀಗಾಗಿಯೇ ಎಲ್ಲಾ ಕಡೆ ನೆಮ್ಮದಿಯಿಂದ ಓಡಾಡಿಕೊಂಡಿದಾರೆ ಜನ.

ಇಂಗ್ಲೆಂಡಿಗೆ ತಜ್ಞರು ಕೊಟ್ಟಿರುವ ಎಚ್ಚರಿಕೆ ಸಂದೇಶ ಏನು?
ಭಾರತೀಯ ಮೂಲದ ತಜ್ಞ ಇಲ್ಲಿನ ಸರ್ಕಾರಕ್ಕೆ ಹೇಳಿದ್ದೇನು?

ಇಂಗ್ಲೆಂಡಿನಲ್ಲಿ ಜನ ಇಷ್ಟೊಂದು ನಿರಾಳರಾಗಿ ಎಲ್ಲಾ ಕಡೆ ಓಡಾಡ್ತಾ ಇದಾರೆ ಅಂದುಕೊಂಡ್ರೆ ಪರಿಸ್ಥಿತಿ ಮುಂದೆಯೂ ಹೀಗೆಯೇ ಕಂಟಿನ್ಯೂ ಆಗುತ್ತಾ ಅಂತ ಕೇಳಿದ್ರೆ ಇಲ್ಲ ಅಂತಿದಾರೆ ತಜ್ಞರು. ಇಲ್ಲಿನ ವೈರಸ್ ಥ್ರೆಟ್ ಅಡ್ವೈಸರಿ ಗ್ರೂಪ್ ನ ಸದಸ್ಯರು ಈಗಾಗಲೇ ಇಲ್ಲಿನ ಸರ್ಕಾರಕ್ಕೆ ಎಚ್ಚರಿಕೆ ಸಂದೇಶವನ್ನೂ ರವಾನಿಸಿದ್ದಾರೆ. ಕೆಂಬ್ರಿಡ್ಜ್ ನಲ್ಲಿ ಪ್ರಾಧ್ಯಾಪಕರಾಗಿರುವ ಭಾರತೀಯ ಮೂಲದ ಪ್ರೊಫೆಸರ್ ರವಿ ಗುಪ್ತಾ ಕೂಡ ಈ ಕಮಿಟಿಯಲ್ಲಿ ಸದಸ್ಯರಾಗಿದ್ದಾರೆ.

ಇವರು ಹೇಳೋ ಪ್ರಕಾರ ಇಂಗ್ಲೆಂಡ್ ಮೂರನೇ ಅಲೆ ಎದುರಿಸಬೇಕಾಗುತ್ತದೆ ಅಂತ ಸುಳಿವು ನೀಡಲಾಗಿದೆ. ಈಗಾಗಲೇ ಕೆಲವು ದೇಶಗಳಲ್ಲಿ ನಾಲ್ಕನೇ ಅಲೆ ಬಂದಿರುವಾಗ ಇಂಗ್ಲೆಂಡ್ ನಲ್ಲಿ ಎರಡನೇ ಅಲೆ ತಗ್ಗಿದೆ ಅಂತ ಮೈಮರೆತರೆ ಮೂರನೇ ಅಲೆ ಶಾಕ್ ಕೊಡಬಹುದು ಅಂತ ತಿಳಿಸಿದ್ದಾರೆ. ಹೀಗಾಗಿ ಈಗಿನಿಂದಲೇ ಸರ್ಕಾರ ಮತ್ತು ಜನ ಕೊರೊನಾ ನಿಯಂತ್ರಣಕ್ಕೆ ಏನೆಲ್ಲಾ ಮುನ್ನೆಚ್ಚರಿಕೆ ವಹಿಸಬೇಕೋ ಅದನ್ನು ವಹಿಸಲೇಬೇಕು ಅಂತ ಸಲಹೆ ಕೊಟ್ಟಿದ್ದಾರೆ. ಆದ್ರೆ ಜನ ಮಾತ್ರ ಇದ್ಯಾವುದಕ್ಕೂ ತಲೆ ಕೆಡಿಸಿಯೇ ಕೊಂಡಂತಿಲ್ಲ.

ಬ್ರಿಟನ್ ಗೆ B.1.617 ರೂಪಾಂತರಿಯ ಆತಂಕ ಅಂತ ಎಚ್ಚರಿಕೆ
ಕಂಪ್ಲೀಟ್ ನಿರ್ಬಂಧ ತೆರವು ಮಾಡಲು ನಿರ್ಧರಿಸಿದ ಬೆನ್ನಲ್ಲೇ ಆತಂಕ
ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೆ ಕೊರೊನಾ ಅಬ್ಬರಿಸುವ ಸಾಧ್ಯತೆ

ಕೊರೊನಾ ವೈರಸ್ ಮೊದಲನೇ, ಎರಡನೇ ಅಲೆಯಿಂದ ತತ್ತರಿಸಿದ್ದ ಬ್ರಿಟನ್​ನಲ್ಲಿ ಇದೀಗ ಕೋವಿಡ್​ 3ನೇ ಅಲೆಯು ಆರಂಭಿಕ ಹಂತದಲ್ಲಿದೆ ಎಂಬ ಸುಳಿವು ಸಿಗ್ತಾ ಇದೆ. ಆದರೆ ಇಲ್ಲಿನ ಜನರಿಗೆ ತಾವು ಲಸಿಕೆ ಹಾಕಿಸಿಕೊಂಡಿದ್ದೇವೆ, ಅಪಾಯ ಇಲ್ಲ ಅನ್ನೋ ಧೈರ್ಯ. ಇಲ್ಲಿನ ಸರ್ಕಾರವೂ ಇದೇ ವಿಶ್ವಾಸದಲ್ಲಿದೆ. ಲಸಿಕೆ ಹಾಕಿಸಿಕೊಂಡರೆ ಕೊರೊನಾ ಅಪಾಯ ತರಲ್ಲ ಎಂಬ ಸಂಶೋಧಕರ ಅಭಿಪ್ರಾಯದ ಮೇರೆಗೆ ಸರ್ಕಾರ ಕೂಡ ಜೂನ್ 21ರಿಂದ ಇಲ್ಲಿ ಎಲ್ಲಾ ರೀತಿಯ ನಿರ್ಬಂಧಗಳನ್ನು ತೆರವು ಮಾಡಲು ನಿರ್ಧರಿಸಿ ಬಿಟ್ಟಿದೆ. ಕಳೆದ ಒಂದೂವರೆ ವರ್ಷದಿಂದ ಜಾರಿಗೊಳಿಸಲಾಗಿದ್ದ ನಿರ್ಬಂಧಗಳನ್ನು ಜೂನ್ 21ರಂದು ತೆಗೆದುಹಾಕಲು ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ನಿರ್ಧರಿಸಿದ ಬೆನ್ನಲ್ಲೇ ಕೊರೊನಾ 3ನೇ ಅಲೆಯ ಆತಂಕದ ಬಗ್ಗೆ ಇಲ್ಲಿನ ತಜ್ಞರು ಈಗಾಗಲೇ ಸಂದೇಶ ರವಾನಿಸಿದ್ದಾರೆ. ನೋಡಬೇಕು, ಬ್ರಿಟನ್ ಮೂರನೇ ಅಲೆಯಿಂದ ತಪ್ಪಿಸಿಕೊಳ್ಳುತ್ತಾ, ಅಥವಾ ಮತ್ತೆ ಇಲ್ಲಿ ಆತಂಕ ಆವರಿಸುತ್ತಾ.

ಥೇಮ್ಸ್ ನದಿಯ ದಂಡೆಯ ಮೇಲೆ ಜನ ಈಗಂತೂ ನೆಮ್ಮದಿಯ ವಾತಾವರಣ ಕಂಡು ಬರ್ತಾ ಇದೆ. ಕಳೆದ ಒಂದೂವರೆ ವರ್ಷಗಳಿಂದ ಅನುಭವಿಸಿದ ನೋವು, ಸಂಕಷ್ಟಗಳು ಥೇಮ್ಸ್ ನದಿಯಲ್ಲಿ ನೀರು ಹರಿದು ಹೋದಂತೆ ಹೋಗಿಬಿಟ್ಟಿವೆ. ಹೊಸ ನೀರು ಬರ್ತಾ ಇರೋದ್ರಿಂದ ತಮ್ಮ ಲೈಫ್ ನಲ್ಲೂ ಹೊಸ ಬೆಳಕು ಮೂಡಿದ ಧೈರ್ಯದಲ್ಲಿದ್ದಾರೆ ಇಂಗ್ಲೆಂಡಿನ ಜನ. ಇಂಗ್ಲೆಂಡ್ ಸೇಫ್ ಆಗಿರಲಿ, ಥೇಮ್ಸ್ ನದಿಯ ದಂಡೆ ಹೀಗೆಯೇ ನಳ ನಳಿಸುತ್ತಿರಲಿ. ವಿಶ್ವದ ಎಲ್ಲಾ ಕಡೆಯೂ ಇದೇ ರೀತಿಯ ವಾತಾವರಣ ನಿರ್ಮಾಣವಾಗಲಿ ಅನ್ನೋದೇ ಎಲ್ಲರ ಆಶಯ.

The post ವ್ಯಾಕ್ಸಿನೇಷನ್ ಡ್ರೈವ್ ಸಕ್ಸಸ್.. ಲಂಡನ್​​ನಲ್ಲಿ ಹಿಂದಿನ ಲೈಫ್​​ಸ್ಟೈಲ್​ಗೆ ಮರಳಿದ್ರು ಜನ appeared first on News First Kannada.

Source: newsfirstlive.com

Source link