ಶಂಖನಾದವನ್ನು 15 ದಿನ ಮುಂದೂಡಿ, ಜನರ ನೆರವಿಗೆ ಬನ್ನಿ: ಬಿಜೆಪಿ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಟೀಕೆ | HD Kumaraswamy on Karnataka Rains MLC Elections Karnataka Politics BJP


ಶಂಖನಾದವನ್ನು 15 ದಿನ ಮುಂದೂಡಿ, ಜನರ ನೆರವಿಗೆ ಬನ್ನಿ: ಬಿಜೆಪಿ ವಿರುದ್ಧ ಹೆಚ್​ಡಿ ಕುಮಾರಸ್ವಾಮಿ ಟೀಕೆ

ಹೆಚ್‌.ಡಿ.ಕುಮಾರಸ್ವಾಮಿ

ಬೆಂಗಳೂರು: ಡಿಸೆಂಬರ್ 10 ರಂದು ವಿಧಾನಪರಿಷತ್​ನ 25 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸೋಮವಾರ ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುತ್ತೇವೆ ಎಂದು ಬೆಂಗಳೂರಿನ ಜೆಪಿ ಭವನದಲ್ಲಿ ಇಂದು (ನವೆಂಬರ್ 20) ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಜೆಡಿಎಸ್ ವರಿಷ್ಠ ದೇವೇಗೌಡರ ಜೊತೆ ಚರ್ಚಿಸಿ ಪಟ್ಟಿ ಅಂತಿಮ ಮಾಡಲಿದ್ದೇವೆ. 25 ಸ್ಥಾನಗಳ ಪೈಕಿ ನಮ್ಮ ಶಕ್ತಿ ಇರುವ ಕಡೆ ಸ್ಪರ್ಧಿಸುತ್ತೇವೆ. ಮಂಡ್ಯದಲ್ಲಿ ಹಾಲಿ ಸದಸ್ಯರೇ ಮತ್ತೊಮ್ಮೆ ಸ್ಪರ್ಧಿಸುತ್ತಾರೆ. ಬೆಂಗಳೂರು ಗ್ರಾಮಾಂತರ ಅಭ್ಯರ್ಥಿ ಬಗ್ಗೆ ಚರ್ಚೆ ಮಾಡಿದ್ದೇವೆ. ನಾಳೆ ಸಂಜೆ ಕೋಲಾರ ಅಭ್ಯರ್ಥಿ ಯಾರೆಂದು ತೀರ್ಮಾನ ಆಗಲಿದೆ ಎಂದು ತಿಳಿಸಿದ್ದಾರೆ.

ಸಂದೇಶ್ ನಾಗರಾಜ್, ಸಿ.ಆರ್. ಮನೋಹರ್​ ಜೆಡಿಎಸ್​ಗೆ ವಾಪಸ್ ವಿಚಾರವಾಗಿ ನನ್ನ ಮುಂದೆ ಪ್ರಸ್ತಾಪಿಸಿಲ್ಲ. ಜೆಡಿಎಸ್​ನಲ್ಲಿ ನಂಬಿಕೆಯಿಲ್ಲವೆಂದು ಹೋದವರು ಅವರು. 3 ವರ್ಷದ ಹಿಂದೆಯೇ ಪಕ್ಷ ಬಿಟ್ಟಿದ್ದಾಗಿ ಹೇಳಿಕೊಂಡಿದ್ದಾರೆ. ಮೈಸೂರಲ್ಲಿ ಜಿಟಿಡಿ ಕುಟುಂಬ ಸ್ಪರ್ಧೆ ವಿಚಾರ ಚರ್ಚೆ ಆಗಿಲ್ಲ. ಸಾ.ರಾ. ಮಹೇಶ್ ಯಾವ ಅರ್ಥದಲ್ಲಿ ಹೇಳಿದ್ದಾರೋ ಗೊತ್ತಿಲ್ಲ. ಜಿ.ಟಿ. ದೇವೇಗೌಡ ಕುಟುಂಬ ಸ್ಪರ್ಧೆ ಬಗ್ಗೆ ಪ್ರಸ್ತಾಪ ಬಂದಿಲ್ಲ. ಹಾಗಾಗಿ ನಾನು ಉತ್ತರ ಕೊಡುವುದು ಅನವಶ್ಯಕವಾಗುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಹೆಚ್.ಡಿ. ಕುಮಾರಸ್ವಾಮಿ ರೀತಿ ದಿನಕ್ಕೆ 2 ಬಾರಿ ಕ್ಯಾಮರಾ ಮುಂದೆ ಬರಲಾಗುತ್ತಾ? ಬಿಜೆಪಿ ನಾಯಕರಷ್ಟು ನಾನು ಪ್ರಚಾರ ತೆಗೆದುಕೊಂಡಿಲ್ಲ ಎಂಬ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿಕೆಗೆ ಹೆಚ್​ಡಿಕೆ ತಿರುಗೇಟು ನೀಡಿದ್ದಾರೆ. ನನಗೆ ಕೆಲಸವಿಲ್ಲ, ಅಧಿಕಾರವಿಲ್ಲ ಕ್ಯಾಮರಾ ಮುಂದೆ ಬರುತ್ತೇನೆ. ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದು ಸರಿಯಾಗಿಯೇ ಇದೆ. ರಾಜ್ಯದಲ್ಲಿ ಇಂತಹ ಗೃಹಸಚಿವರು ಇದುವರೆಗೆ ಬರಲೇ ಇಲ್ಲ. ನನ್ನ ಬಗ್ಗೆ ನೀವು ಲಘುವಾಗಿ ಮಾತನಾಡುವ ಅವಶ್ಯಕತೆಯಿಲ್ಲ. ಪಾಪ ಅವರು ಜನರ ಕಷ್ಟ ಕೇಳಲು ನಿದ್ದೆ ಕೂಡ ಮಾಡುತ್ತಿಲ್ಲ. ಆರಗ ಜ್ಞಾನೇಂದ್ರ ಅವರೇ ನಿಮ್ಮ ಶಿವಮೊಗ್ಗ ಹೇಗಿದೆ ಗೊತ್ತಾ? ಅಡಕೆ ಬೆಳೆಗಾರರು ಹೇಗಿದ್ದಾರೆ ನೋಡಿದ್ದಿಯೇನಪ್ಪಾ ನೀನು? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.

ಸರ್ಕಾರಕ್ಕೆ ಜನರ ಹಿತಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ
ನಿರಂತರ ಮಳೆಯಿಂದ ರೈತರು, ಗ್ರಾಹಕರಿಗೆ ಸಮಸ್ಯೆಯಾಗಿದೆ. ಆದರೆ ಸರ್ಕಾರ ರೈತರ ಪರ, ಗ್ರಾಹಕರ ಪರವಾಗಿಯೂ ಇಲ್ಲ. ಬಿಜೆಪಿ ನಾಯಕರು ಕೋಲಾರ, ಚಿಕ್ಕಬಳ್ಳಾಪುರದಲ್ಲಿ ಇದ್ದಾರೆ. ಜನಸ್ವರಾಜ್​ ಕಾರ್ಯಕ್ರಮದಲ್ಲಿ ಶಂಖ ಊದುತ್ತಿದ್ದಾರೆ. ಸಿಎಂ ಬಸವರಾಜ ಬೊಮ್ಮಾಯಿ ಹೋಗಿದ್ದಾರೋ ಗೊತ್ತಿಲ್ಲ. ಅಧಿಕಾರಿಗಳ ಜತೆ ನಿನ್ನೆ ವಿಡಿಯೋ ಕಾನ್ಫರೆನ್ಸ್​ ನಡೆಸಿದ್ದರು. ಆದರೆ ಸಚಿವರು ಹೋಗುವಂತೆ ಸಿಎಂ ಬೊಮ್ಮಾಯಿ ಹೇಳಿಲ್ಲ. ರಾಜ್ಯ ಸರ್ಕಾರಕ್ಕೂ ಅಧಿಕಾರಿಗಳಿಗೂ ಸಮನ್ವಯವೇ ಇಲ್ಲ. ಸರ್ಕಾರಕ್ಕೆ ಜನರ ಹಿತಕ್ಕಿಂತ ಚುನಾವಣೆಯೇ ಮುಖ್ಯವಾಗಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಶಂಖನಾದವನ್ನು 15 ದಿನ ಮುಂದೂಡಿ, ಜನರ ನೆರವಿಗೆ ಬನ್ನಿ. ಸಾಧನೆ ಆಧಾರದ ಮೇಲೆ ಶಂಖ ಊದಿದ್ರೆ ಪರಿಣಾಮ ಆಗಲ್ಲ. ವಿಧಾನಪರಿಷತ್​ ಚುನಾವಣೆ ಮೇಲೆ ಪರಿಣಾಮ ಬೀರುವುದಿಲ್ಲ. ನೀವು ಎಲ್ಲಿ ಕೂತಿದ್ರೂ ಪರಿಷತ್​ ಚುನಾವಣೆಯಲ್ಲಿ ಗೆಲ್ಲುತ್ತೀರಿ. ಚುನಾವಣೆ ಹೇಗೆ ಗೆಲ್ಲಬೇಕು ಎಂದು ನಿಮಗೆ ಚೆನ್ನಾಗಿ ಗೊತ್ತಿದೆ ಎಂದು ಬೆಂಗಳೂರಿನಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.

ಶಂಖನಾದವನ್ನು 15 ದಿನ ಮುಂದೂಡಿ, ಜನರ ನೆರವಿಗೆ ಬನ್ನಿ
ರಾಜ್ಯದಲ್ಲಿ ಭಾರಿ ಮಳೆಯಿಂದ ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ರಾಜ್ಯದಲ್ಲಿ ಮಳೆಯಿಂದ ಈವರೆಗೆ 9 ಜನ ಮೃತಪಟ್ಟಿದ್ದಾರೆ. ಲಕ್ಷಾಂತರ ಎಕರೆಯಲ್ಲಿ ಬೆಳೆದಿದ್ದ ಬೆಳೆ ಹಾನಿಯಾಗಿದೆ. ಮಳೆಯಿಂದಾಗಿ ಹಣ್ಣು, ತರಕಾರಿ ಬೆಲೆ ಏರಿಕೆಯಾಗಿದೆ. ಸರ್ಕಾರ ಯಾರ ನೆರವಿಗೂ ಬರುತ್ತಿಲ್ಲ. ರೈತರ ನೆರವಿಗೂ ಬಂದಿಲ್ಲ, ಗ್ರಾಹಕರ ನೆರವಿಗೂ ಬಂದಿಲ್ಲ ಎಂದು ಜೆಡಿಎಸ್ ನಾಯಕ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಗಳಿಗೆ ತೆರಳುವಂತೆ ಸಚಿವರಿಗೆ ಸಿಎಂ ಸೂಚಿಸಬೇಕು. ಇವರು ಜಿಲ್ಲೆಯ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ. ಅವರು ತಹಶೀಲ್ದಾರ್​, ಆರ್​ಐ, ವಿಎಗೆ ಸೂಚನೆ ನೀಡ್ತಾರೆ. ಯಾರೂ ಘಟನಾ ಸ್ಥಳಕ್ಕೆ ಹೋಗದೆ ವರದಿ ನೀಡುತ್ತಾರೆ. ಅದೇ ವರದಿ ಸತ್ಯವೆಂದು ಸಚಿವರು ಪ್ರಕಟಿಸುತ್ತಾರೆ. ಸಂಕಷ್ಟದಲ್ಲಿರುವ ರೈತರು, ಗ್ರಾಹಕರ ನೆರವಿಗೆ ಧಾವಿಸಬೇಕು ಎಂದು ಮಾಜಿ ಸಿಎಂ ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ನಿರಂತರ ಮಳೆಯಿಂದ ರಾಜ್ಯದ ಜನ ತತ್ತರಿಸಿ ಹೋಗಿದ್ದಾರೆ. ರಾಜ್ಯ ಸರ್ಕಾರ ಜನರ ನೆರವಿಗೆ ಬಾರದೆ ಕಾಲಹರಣ ಮಾಡುತ್ತಿದ್ದಾರೆ. ಜನಸ್ವರಾಜ್​ ಹೆಸರಿನಲ್ಲಿ ಬಿಜೆಪಿ ಕಾಲಹರಣ ಮಾಡುತ್ತಿದೆ. ಪರಿಷತ್​ ಚುನಾವಣೆ ಹೇಗೆ ನಡೆಯುತ್ತದೆ ಎಂದು ಗೊತ್ತಿದೆ. ಎಲ್ಲೇ ಕೂತಿದ್ದರೂ ಆಡಳಿತ ಪಕ್ಷ ಗೆಲ್ಲುವುದು ಸಾಮಾನ್ಯ. ಹಾಗಾಗಿ ಶಂಖ ಊದುವುದರ ಬದಲು ಜನರಿಗೆ ನೆರವಾಗಿ ಎಂದು ಕುಮಾರಸ್ವಾಮಿ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಉತ್ತರ ಕರ್ನಾಟಕದ ಹಲವೆಡೆ ಭಾರಿ ಮಳೆ ಸಾಧ್ಯತೆ; ಕೆಲ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಣೆ

ಇದನ್ನೂ ಓದಿ: ಚಿಕ್ಕಬಳ್ಳಾಪುರ: 360 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ, ಬೆಳೆ ಹಾನಿ; 48 ಮನೆ ಸಂಪೂರ್ಣ ಕುಸಿತ

TV9 Kannada


Leave a Reply

Your email address will not be published. Required fields are marked *