ಕಲಬುರಗಿ/ಶಿವಮೊಗ್ಗ: ಪೆಟ್ರೋಲ್, ಡೀಸೆಲ್​, ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್​ ಪಕ್ಷದ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳು ರಾಜ್ಯದ ವಿವಿಧ ಭಾಗಗಳಲ್ಲಿ ಇಂದು ರಸ್ತೆಗಳಿದು ಪ್ರತಿಭಟನೆ ನಡೆಸಿದ್ದಾರೆ. ಕೊರೊನಾದಂತಹ ಸಂಕಷ್ಟದ ಸಮಯದಲ್ಲೂ ಬೆಲೆ ಹೆಚ್ಚಳವನ್ನು ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಚ್ಛೇ ದಿನ್ ಕಬ್ ಆಯೇಗಾ ಎಂದು ಪ್ರಶ್ನಿಸುವ ಫ್ಲೆಕ್ಸ್ ಹಿಡಿದು ಶಿವಮೊಗ್ಗದಲ್ಲಿ ಕಾಂಗ್ರೆಸ್​ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಮುಖಕ್ಕೆ ಪ್ರಧಾನಿ ನರೇಂದ್ರ ಮೋದಿ ಮುಖವಾಡ ಧರಿಸಿ ಕ್ರಿಕೆಟ್ ಆಟಗಾರನ ರೀತಿ ವೇಷ ಧರಿಸಿ ‘100 ನಾಟ್​ಔಟ್’, ಕೂಡಲೇ ಇಂಧನ ದರ ಇಳಿಕೆಗೆ ಕ್ರಮ ತೆಗೆದುಕೊಳ್ಳಬೇಕು ಆಗ್ರಹಿಸಿದರು.

ಇಂಧನ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ರಾಷ್ಟ್ರಾದ್ಯಂತ ಜೂನ್ 11ರಂದು ಪೆಟ್ರೋಲ್ ಬಂಕ್ ಗಳ ಮುಂದೆ ಪ್ರತಿಭಟನೆ ನಡೆಸಲು ಮುಂದಾಗಿದೆ. ಇತ್ತೀಚೆಗೆ ದೇಶದ ಅನೇಕ ನಗರಗಳಲ್ಲಿ, ಜಿಲ್ಲೆಗಳಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 100 ರೂಪಾಯಿ ದಾಟಿದೆ. ಕೊರೊನಾ ಆರ್ಥಿಕ ಸಂಕಷ್ಟದ ಮಧ್ಯೆ ಇಂಧನ ಬೆಲೆ ಏರಿಕೆ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.

ಕಲಬುರಗಿಯಲ್ಲಿ ಅಹಿಂದ ಚಿಂತಕರ ವೇದಿಕೆ ಕಾರ್ಯಕರ್ತರು ಸರ್ಕಾರದ ವಿರುದ್ಧ ವಿಭಿನ್ನ ಪ್ರತಿಭಟನೆ ನಡೆಸಿದ್ದಾರೆ. ಬೆಲೆ ಏರಿಕೆ ಖಂಡಿಸಿ ನಗರದ ಜಿಮ್ಸ್ ಆಸ್ಪತ್ರೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಕಾರ್ಯಕರ್ತರು ಭಿಕ್ಷೆ ಬೇಡುವ ಮೂಲಕ ಪ್ರತಿಭಟನೆ ನಡೆಸಿದರು. ಬೆಲೆ ಏರಿಕೆಯಿಂದ ಬಡವರ್ಗದವರು ಬದುಕೋದೆ ಕಷ್ಟವಾಗಿದೆ. ಕೋವಿಡ್ ನಿರ್ವಹಣೆಯಲ್ಲೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕೋವಿಡ್ ನಿಂದ ಮೃತಪಟ್ಟವರ ಸಾವಿಗೆ ಕೇಂದ್ರ ಸರ್ಕಾರವೇ ಹೊಣೆ. ನೈತಿಕ ಹೊಣೆ ಗೊತ್ತು ಮೋದಿ ರಾಜೀನಾಮೆ ನೀಡಬೇಕು ಎಂದು ವೇದಿಕೆ ಅಧ್ಯಕ್ಷ ಸಾಯಬಣ್ಣಾ ಜಮಾದಾರ್ ಆಗ್ರಹಿಸಿದರು. ಬಳಿಕ ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.

ಇದನ್ನೂ ಓದಿ: ‘100 ನಾಟ್​ಔಟ್’ ಹೆಸರಲ್ಲಿ 5 ದಿನಗಳ ಪ್ರತಿಭಟನೆಗೆ ಕರೆ ಕೊಟ್ಟ ಡಿಕೆಎಸ್​ 

The post ಶತಕ ದಾಟಿದ ಪೆಟ್ರೋಲ್ ರೇಟ್; ಮೋದಿ ಮುಖವಾಡ ಧರಿಸಿ ಪ್ರತಿಭಟನೆಗಿಳಿದ ಕೈ ಕಾರ್ಯಕರ್ತರು appeared first on News First Kannada.

Source: newsfirstlive.com

Source link