ನವದೆಹಲಿ: ಸೈನಿಕರೊಂದಿಗೆ ದೀಪಾವಳಿ ಆಚರಿಸಲು ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ಗೆ ಆಗಮಿಸಿದ್ದು, ಈ ವೇಳೆ ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಬಳಿಕ ಸೈನಿಕರಿಗೆ ಉಡುಗೊರೆ ನೀಡಿ, ಸಿಹಿ ಹಂಚಿ ಬೆಳಕಿನ ಹಬ್ಬವನ್ನ ಆಚರಿಸಿದರು.
ಈ ವೇಳೆ ಮಾತನಾಡಿದ ಅವರು.. ದೇಶದ ರಕ್ಷಣೆ ವಿಚಾರ ಬಂದಾಗ ನೌಶೇರಾ ಸಿಂಹಗಳು (ಯೋಧರು) ತಕ್ಕ ಉತ್ತರ ನೀಡುತ್ತವೆ. ಸರ್ಜಿಕಲ್ ಸ್ಟ್ರೈಕ್‌ನಲ್ಲಿ ನೌಶೇರಾ ಬ್ರಿಗೇಡ್ ಪ್ರಮುಖ ಪಾತ್ರ ವಹಿಸಿದೆ. ನಾನು ನಿಮ್ಮಿಂದ ಹೊಸ ಶಕ್ತಿಯನ್ನು ಪಡೆದಿದ್ದೇನೆ. ದೇಶ ಸೇವೆ ಮಾಡುವ ಸೌಭಾಗ್ಯ ಎಲ್ಲರಿಗೂ ಸಿಗುವುದಿಲ್ಲ ಎಂದರು.
ನಾನು ನೌಶೇರಾ ಭೂಮಿಗೆ ಬಂದಿಳಿದಾಗ ನನ್ನೆದೆಯಲ್ಲಿ ರೋಮಾಂಚನ ಉಂಟಾಯಿತು. ನಿಮ್ಮಂತಹ ವೀರ ಸೈನಿಕರ ಪರಾಕ್ರಮಕ್ಕೆ ಇಲ್ಲಿಯ ವರ್ತಮಾನವೇ ಜೀವಂತ ಉದಾಹರಣೆ. ನೌಶೇರಾ ಭೂಮಿಯಲ್ಲಿ ಅದೆಷ್ಟೋ ವೀರ ಯೋಧರು ತಮ್ಮ ಶೌರ್ಯದ ಸಾಹಸಗಾಥೆಯನ್ನು ಬರೆದಿದ್ದಾರೆ.
ಸರ್ಜಿಕಲ್ ಸ್ಟ್ರೈಕ್‌ನಲ್ಲಿ ಇಲ್ಲಿನ ಬ್ರಿಗೇಡ್ ವಹಿಸಿದ್ದ ಪಾತ್ರದ ಬಗ್ಗೆ ದೇಶವಾಸಿಗಳಿಗೆ ಹೆಮ್ಮೆ ಇದೆ. ಸರ್ಜಿಕಲ್ ಸ್ಟ್ರೈಕ್ ನಂತರ ಇಲ್ಲಿ ಅಶಾಂತಿ ಸೃಷ್ಟಿಸಲು ಹಲವು ಪ್ರಯತ್ನಗಳು ನಡೆದಿದ್ದವು. ಆದರೆ ಪ್ರತಿ ಬಾರಿಯೂ ಭಯೋತ್ಪಾದನೆಗೆ ತಕ್ಕ ಉತ್ತರ ನೀಡಲಾಗುತ್ತಿದೆ. ಇಲ್ಲಿ ಪಾಂಡವರೂ ಕೆಲಕಾಲ ಕಳೆದರು ಎಂಬ ಪ್ರತೀತಿ ಇದೆ. ಈ ಸಮಯದಲ್ಲಿ ದೇಶವು 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುತ್ತಿದೆ ಎಂದರು. ಅಸಂಖ್ಯಾತ ತ್ಯಾಗದಿಂದ ನಾವು ಸ್ವಾತಂತ್ರ್ಯವನ್ನು ಪಡೆದಿದ್ದೇವೆ. ಇಂದು ನಮ್ಮ ಮುಂದೆ ಹೊಸ ಗುರಿಗಳು ಮತ್ತು ಹೊಸ ಸವಾಲುಗಳಿವೆ.
ಇಂದು ದೇಶದೊಳಗೆ ಅರ್ಜುನ್ ಟ್ಯಾಂಕ್‌ಗಳನ್ನು ನಿರ್ಮಿಸಲಾಗುತ್ತಿದೆ. ತೇಜಸ್‌ನಂತಹ ವಿಮಾನಗಳನ್ನು ತಯಾರಿಸಲಾಗುತ್ತಿದೆ. ವಿಜಯದಶಮಿಯಂದು 7 ರಕ್ಷಣಾ ಕಂಪನಿಗಳನ್ನು ದೇಶಕ್ಕೆ ಸಮರ್ಪಿಸಲಾಗಿದೆ. ದೇಶೀಯ ಪ್ರಾಡೆಕ್ಟ್ಗಳಿಗೆ ರಕ್ಷಣಾ ಬಜೆಟ್ನಲ್ಲಿ ಶೇಕಡಾ 65 ರಷ್ಟು ಮೀಸಲಿಡಲಾಗಿದೆ ಎಂದರು. ಗಡಿಗೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ಸುಧಾರಣೆ ಕಂಡಿದೆ. ಲಡಾಕ್ನಿಂದ ಅರುಣಾಚಲ ಪ್ರದೇಶ, ಜೈಸಲ್ಮೇರ್ ನಿಂದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಇರಲಿ. ಸೇನಾ ನಿಯೋಜನೆಯ ಸಾಮರ್ಥ್ಯ ಹೆಚ್ಚಾಗಿದೆ. ದೇಶದ ಭದ್ರತೆಯಲ್ಲಿ ಮಹಿಳೆಯರ ಪಾತ್ರ ಹೊಸ ಆಯಾಮಗಳನ್ನು ಮುಟ್ಟುತ್ತಿದೆ.