ಮುಂಬೈ: ಬಹುಭಾಷಾ ನಟಿ ಪ್ರಿಯಾಮಣಿ ಬಾಲಿವುಡ್ ಬಾದ್‍ಷಾ ಶಾರೂಕ್ ಬಳಿ 300ರೂ. ಹಣ ಪಡೆದಿರುವುದಾಗಿ ಹೇಳಿಕೊಂಡಿದ್ದಾರೆ.

ಯಾವುದೇ ಪಾತ್ರ ನೀಡಿದರೂ ಲೀಲಾಜಾಲವಾಗಿ ಅಭಿನಯಿಸುವ ನಟಿ ಪ್ರಿಯಾಮಣಿ ಹಲವಾರು ಭಾಷೆಯ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೇ 2007ರಲ್ಲಿ ಕಾಲಿವುಡ್‍ನ ಪರುತಿವೀರನ್ ಸಿನಿಮಾಕ್ಕಾಗಿ ರಾಷ್ಟ್ರ ಪ್ರಶಸ್ತಿ ಗಳಿಸಿ ಸೈ ಎನಿಸಿಕೊಂಡಿದ್ದಾರೆ. ಖ್ಯಾತಿ ಪಡೆದುಕೊಂಡಿರುವ ಪ್ರಿಯಾಮಣಿಯವರಿಗೆ ಶಾರೂಖ್ ಖಾನ್‍ರವರು 300 ರೂ. ನೀಡಿದ್ದರು ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಹಲವಾರು ಸ್ಟಾರ್ ನಟರೊಂದಿಗೆ ಅಭಿನಯಿಸಿದ್ದ ಪ್ರಿಯಾಮಣಿಯವರು ಬಾಲಿವುಡ್ ನಟ ಶಾರೂಖ್ ಖಾನ್ ಜೊತೆಯಲ್ಲೂ ಅಭಿನಯಿಸಿದ್ದಾರೆ. 2013 ರಲ್ಲಿ ಬಿಟೌನ್‍ನಲ್ಲಿ ತೆರೆ ಕಂಡ ಚೆನ್ನೈ ಎಕ್ಸ್‌ಪ್ರೆಸ್ ಸಿನಿಮಾದಲ್ಲಿ ಶಾರೂಖ್ ಜೊತೆಗೆ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದರು. ಈ ಹಾಡು ಆಗ ಸಖತ್ ಫೇಮಸ್ ಕೂಡ ಆಗಿತ್ತು.

ಈ ಹಾಡನ್ನು ಮಹಾರಾಷ್ಟ್ರದ ವಾಯಿನಲ್ಲಿ 5 ರಾತ್ರಿಗಳ ಕಾಲ ಚಿತ್ರೀಕರಿಸಿದ್ದೇವು. ಈ ಹಾಡಿನ ಚಿತ್ರೀಕರಣ ಆರಂಭವಾಗುವುದಕ್ಕೆ ಒಂದು ದಿನ ಮುಂಚಿತವಾಗಿ ನಾನು ಅಲ್ಲಿಗೆ ಹೋಗಿದ್ದೆ. ಸಮಯ ಸಿಕ್ಕಾಗಲೆಲ್ಲಾ ನಾವು ಕೌನ್ ಬನೇಗ ಕರೋಡ್ ಪತಿ ಆಡುತ್ತಿದ್ದೇವು. ಈ ವೇಳೆ ಕೇಳಿದ ಕೆಲವು ಪ್ರಶ್ನೆಗಳಿಗೆ ನಾನು ಸರಿಯಾಗಿ ಉತ್ತರ ನೀಡಿದ್ದೆ. ಹೀಗಾಗಿ ಶಾರೂಖ್ ಖಾನ್‍ರವರು ನನಗೆ 300 ರೂ. ನೀಡಿದ್ದರು ಎಂದು ತಿಳಿಸಿದ್ದಾರೆ.

ಶಾರೂಖ್‍ರವರು ಎಷ್ಟೇ ದೊಡ್ಡ ನಟರಾಗಿದ್ದರೂ, ಎಲ್ಲರೊಂದಿಗೆ ಬಹಳ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದರು, ಜೊತೆಗೆ ಎಲ್ಲರ ಬಗ್ಗೆ ಕಾಳಜಿಯನ್ನು ವಹಿಸುತ್ತಿದ್ದರು. ಅವರೊಟ್ಟಿಗೆ ಕಳೆದ ಕ್ಷಣಗಳು ಬಹಳ ಅದ್ಭುತವಾಗಿತ್ತು. ಅಷ್ಟಿಲ್ಲದೇ ಅವರನ್ನು ಬಾಲಿವುಡ್ ಬಾದ್ ಷಾ ಎಂದು ಕರೆಯುವುದಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

2009ರಲ್ಲಿ ನಟ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಜೊತೆ ರಾಮ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟ ಪ್ರಿಯಾಮಣಿ ನಂತರ ಅಣ್ಣಾಬಾಂಡ್, ಅಂಬರೀಶ, ಕಲ್ಪನಾ, ದನಕಾಯೋನು, ಕೋ, ಚಾರುಲತಾ, ವಿಷ್ಣುವರ್ಧನ, ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯ ಪ್ರತಿಭಟನಾ ದಿನಕ್ಕೆ ಬೆಂಬಲ ಸೂಚಿಸಿದ ನಟಿ ಆಶಿಕಾ ರಂಗನಾಥ್

The post ಶಾರೂಖ್ ಬಳಿ 300 ರೂ. ಪಡೆದಿದ್ದ ಪ್ರಿಯಾಮಣಿ appeared first on Public TV.

Source: publictv.in

Source link