
ಸಚಿವ ಕೋಟ ಶ್ರೀನಿವಾಸ ಪೂಜಾರಿ
ಸಾರ್ವಜನಿಕರು ಸುಳ್ಳು ವದಂತಿಗಳನ್ನ ನಂಬಬಾರದು. ವಿರೋಧ ಪಕ್ಷಗಳು ಸಹ ಇಂತಹ ವದಂತಿ ಹರಡಬಾರದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಬೆಂಗಳೂರು: ಪಠ್ಯಪುಸ್ತಕ ಪರಿಶೀಲನಾ ಸಮಿತಿ 10ನೇ ತರಗತಿ ಪಠ್ಯಪುಸ್ತಕದಲ್ಲಿ ಹೆಡ್ಗೆವಾರ್ (Hedgewar) ಅವರ ಭಾಷಣ ಸೇರಿಸಿದ್ದಕ್ಕೆ ವಿವಾದ ಸೃಷ್ಟಿಯಾಗಿತ್ತು. ಅದೇ ರೀತಿಯಾಗಿ SSLC ಪಠ್ಯದಿಂದ ನಾರಾಯಣ ಗುರುಗಳ (Narayana Guru) ವಿಷಯವನ್ನು ಕೈಬಿಟ್ಟಿದೆ ಎನ್ನಲಾಗುತ್ತಿದ್ದು, ಈ ಕುರಿತಾಗಿ ವಿಧಾನಸೌಧದಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಪಷ್ಟನೆ ನೀಡಿದ್ದಾರೆ. ಶಾಲಾ ಪಠ್ಯಪುಸ್ತಕದಲ್ಲಿ ನಾರಾಯಣ ಗುರು ವಿಷಯ ಕೈಬಿಟ್ಟಿಲ್ಲ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಜೊತೆಗೆ ನಾನು ಮಾತಾಡಿದ್ದೇನೆ. ಅಂತಹ ಯಾವುದೇ ತೀರ್ಮಾನ ಕೈಗೊಂಡಿಲ್ಲವೆಂದು ಹೇಳಿದ್ದಾರೆ. ಹಾಗಾಗಿ ಸಾರ್ವಜನಿಕರು ಸುಳ್ಳು ವದಂತಿಗಳನ್ನ ನಂಬಬಾರದು. ವಿರೋಧ ಪಕ್ಷಗಳು ಸಹ ಇಂತಹ ವದಂತಿ ಹರಡಬಾರದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಹಿಂದಿನಿಂದಲೂ ನಾರಾಯಣಗುರುವನ್ನು ಬದಿಗೆ ಸರಿಸುತ್ತಿದ್ದಾರೆ: ಡಿಕೆ ಶಿವಕುಮಾರ್ ಆರೋಪ
ನಾರಾಯಣ ಗುರುಗಳಿಗೆ ಸಂಬಂಧಿಸಿದ ಪಾಠವನ್ನು ಯಾವುದೇ ಕಾರಣಕ್ಕೆ ಬದಲಿಸಬಾರದು. ಮೊದಲಿನಿಂದಲೂ ನಾರಾಯಣ ಗುರುಗಳನ್ನು ಬದಿಗೆ ಸರಿಸಲು ಯತ್ನಿಸುತ್ತಿದ್ದಾರೆ. ನಾರಾಯಣ ಗುರುಗಳ ಪಾಠ ತೆಗೆದಿಲ್ಲ ಎಂದು ಈಗ ಹೇಳುತ್ತಿದ್ದಾರೆ. ಆದರೆ ಹಿಂದೆ ಗುರುಗಳಿಗೆ ಸಂಬಂಧಿಸಿದ ಪಾಠ ಬದಲಿಸುವ ಚಿಂತನೆಯಿತ್ತು. ನಾರಾಯಣ ಗುರುಗಳ ಟ್ಯಾಬ್ಲೂ ತೆಗೆದಾಗಲೂ ಸುನಿಲ್ ಕುಮಾರ್ ಏನೂ ಮಾತನಾಡಲಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ನಗರದಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನಮಗೆ ನಮ್ಮ ಇತಿಹಾಸವನ್ನು ಸರಿಯಾದ ಕ್ರಮದಲ್ಲಿ ಕಲಿಸುವ ಪಠ್ಯಪುಸ್ತಕಗಳು ಬೇಕು. ಭಗತ್ ಸಿಂಗ್ ಬಗ್ಗೆ ಹಿಂದೆ ಏನೆಲ್ಲಾ ಇತ್ತೋ ಅದನ್ನೆಲ್ಲಾ ಉಳಿಸಿಕೊಳ್ಳಬೇಕು. ರಾಮಾಯಣ ಮತ್ತು ಮಹಾಭಾರತದ ಕಥೆಗಳ ಪಾಠವೂ ಬೇಕು. ನಾರಾಯಣ ಗುರುಗಳಿಗೆ ಸಂಬಂಧಿಸಿದ ಪಾಠ ತೆಗೆದಿಲ್ಲ ಎಂದು ಈಗ ಹೇಳುತ್ತಿದ್ದಾರೆ. ಆದರೆ ಅಂಥ ಚಿಂತನೆ ಇತ್ತು ಎಂದು ಶಂಕಿಸಿದರು.