ಸಚಿವ ಬಿ.ಸಿ.ನಾಗೇಶ್
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಇಂದಿನ ಸಭೆಯಲ್ಲಿ ಶಾಲೆ ಆರಂಭಿಸಲು ಅನುಮತಿ ಸಿಕ್ಕಿದರೆ ತಕ್ಷಣವೇ ಶಾಲೆಗಳನ್ನು ಆರಂಭಿಸಲಾಗುವುದು ಎಂದು ಪ್ರಾಥಮಿಕ & ಪ್ರೌಢಶಿಕ್ಷಣ ಸಚಿವ ಬಿಸಿ ನಾಗೇಶ್ ಟಿವಿ9ಗೆ ಮಾಹಿತಿ ನೀಡಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ ಕೊರೊನಾ ಏರಿಕೆಯ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿದೆ. ಮಕ್ಕಳ ಶೈಕ್ಷಣಿಕ ಬೆಳವಣಿಗೆಯ ದೃಷ್ಟಿಕೋನದಿಂದ ಕೊರೊನಾ ಏರಿಕೆ ಇದ್ದರೂ ಶಾಲೆ ಪುನರಾರಂಭಿಸಬೇಕು ಎಂಬ ಚಿಂತನೆಗಳು ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ ಇಂದು ಸಿಎಂ ಬಸವರಾಜ ಬೊಮ್ಮಾಯಿ (CM Basavaraj Bommai) ನೇತೃತ್ವದಲ್ಲಿ ನಡೆಯಲಿರುವ ಸಭೆ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಶಾಲೆಗಳ ಕುರಿತು ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳಬಹುದು, ಸರ್ಕಾರ ಚಿಂತನೆಗಳೇನು ಎಂಬುದನ್ನು ಸಚಿವ ಬಿಸಿ ನಾಗೇಶ್ (BC Nagesh) ಮಾತನಾಡಿದ್ದಾರೆ. ಪ್ರಸ್ತುತದ ಸ್ಥಿತಿಗತಿ ವಿವರಿಸಿದ ಸಚಿವರು, ಆಯಾ ಪ್ರದೇಶಗಳಿಗೆ ತಕ್ಕಂತೆ ನಿರ್ಧಾರ ಕೈಗೊಳ್ಳಲು ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ. ನಗರ- ಮಹಾನಗರಗಳಲ್ಲಿ ಪ್ರಕರಣ ಏರಿಕೆಯಿದೆ. ಆದರೆ ಗ್ರಾಮಾಂತರ ಹಾಗೂ ತಾಲೂಕು ಪ್ರದೇಶಗಳಲ್ಲಿ ಶಾಲೆಗಳನ್ನು ಬಂದ್ ಮಾಡಲಾಗಿಲ್ಲ. ಮಹಾನಗರಗಳನ್ನು ಹೊರತುಪಡಿಸಿ ಒಟ್ಟು 246 ಶಾಲೆಗಳನ್ನು ಮಾತ್ರ ಬಂದ್ ಮಾಡಲಾಗಿದೆ. ಅದೂ ಕೂಡ 3-5 ದಿನದ ಕಂಡೀಷನ್ ಮೇಲೆ ಕ್ಲೋಸ್ ಮಾಡಲಾಗಿದೆ ಎಂದು ಹೇಳಿದ್ದಾರೆ.
ಸಚಿವ ಬಿಸಿ ನಾಗೇಶ್ ಹೇಳಿದ್ದೇನು?
ಮುಖ್ಯಮಂತ್ರಿಯವರ ಸಲಹೆ ಮೇರೆಗೆ, ಜಿಲ್ಲಾಧಿಕಾರಿಗಳಿಗೆ ಶಾಲೆಗಳನ್ನು ಪುನಾರಂಭ ಮಾಡಲು ಅನುಮತಿ ಕೇಳುತ್ತೇವೆ. ಸಿಎಂ ಸಭೆಯಲ್ಲಿ ಅನುಮತಿ ಸಿಕ್ಕಿದರೆ ತಕ್ಷಣವೇ ಶಾಲೆ ಆರಂಭ ಮಾಡಲಾಗುವುದು ಎಂದು ನಾಗೇಶ್ ಹೇಳಿಕೆ ನೀಡಿದ್ದಾರೆ. 1-9ನೇ ತರಗತಿವರೆಗೆ ಶಾಲೆ ಆರಂಭಕ್ಕೆ ಅನುಮತಿ ನೀಡದಿದ್ದರೆ, 5ರಿಂದ 9ನೇ ತರಗತಿವರೆಗೆ ಶಾಲೆ ಆರಂಭಕ್ಕೆ ಪರ್ಯಾಯ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಶಾಲೆ ಆರಂಭವಿಲ್ಲ ಎಂದಾದರೆ ವಿದ್ಯಾಗಮ ಆರಂಭಕ್ಕೆ ಅನುಮತಿ ನೀಡುವಂತೆ ಕೇಳುತ್ತೇವೆ. ಸಿಎಂ ಸಭೆಯಲ್ಲಿ ಅನುಮತಿ ನೀಡಿದರೆ ಶಾಲೆ ಆರಂಭಿಸುತ್ತೇವೆ ಎಂದು ಸಚಿವರು ಹೇಳಿದ್ದಾರೆ.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಂತೆ ಇಲಾಖೆ ಎಂದಿಗೂ ಶ್ರಮಿಸಲಿದೆ. ತಜ್ಞರ ಸಲಹೆ ಮೇರೆಗೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು. ಒಂದು ವೇಳೆ ತಜ್ಞರು ಶಾಲೆ ಆರಂಭಿಸಲು ಸಲಹೆ ನೀಡಿದರೆ ಆರಂಭಿಸಲಾಗುತ್ತದೆ. ಒಂದು ವೇಳೆ ಶಾಲೆ ಆರಂಭವಿಲ್ಲ ಎಂದಾದರೆ ವಿದ್ಯಾಗಮಕ್ಕೆ ಅನುಮತಿ ನೀಡುವಂತೆ ಕೇಳುತ್ತೇವೆ ಎಂದು ಸಚಿವರು ನುಡಿದಿದ್ದಾರೆ.
ಬೆಂಗಳೂರು ಮಹಾನಗರದ ದೃಷ್ಟಿಯಿಂದ ತಾಂತ್ರಿಕ ಸಲಹಾ ಸಮಿತಿ ಇಂದಿನ ಸಭೆಯಲ್ಲಿ ನೀಡುವ ಸಲಹೆಯನ್ನು ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ.