
ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿದ ಸೇತುವೆ ಕುಸಿದುಬಿದ್ದಿರುವುದು
ರಾಯಚೂರು ತಾಲ್ಲೂಕಿನ ನಾಲ್ಕೈದು ಗ್ರಾಮಗಳು ಈಗಲೂ ಕೃಷ್ಣಾ ನದಿ ದಾಟಲು ಸೇತುವೆ ಇಲ್ಲದೆ ತೆಪ್ಪಗಳ ಮೂಲಕ ಜೀವಭಯದಲ್ಲಿ ಸಾಗುತ್ತಾರೆ. 20 ವರ್ಷಗಳಿಂದ ಸೇತುವೆ ನಿರ್ಮಾಣಕ್ಕೆ ಹೋರಾಟ ನಡೆಸಿದರೂ ಪ್ರಯೋಜನವಾಗದೆ ಇದೀಗ ಸರ್ಕಾರಕ್ಕೆ ಹೋರಾಟದ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.
ರಾಯಚೂರು: ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ರಾಯಚೂರು ತಾಲ್ಲೂಕಿನ ನಾಲ್ಕೈದು ಗ್ರಾಮಗಳು ಕೆಲವೊಂದು ಮೂಲಭೂತ ಸೌಕರ್ಯ (Infrastructure)ಗಳಿಂದ ವಂಚಿತವಾಗಿದೆ. ತೆಲಂಗಾಣ ರಾಜ್ಯದ ಗಡಿಯಲ್ಲಿರುವ ನಡುಗಡ್ಡೆಯಲ್ಲಿರೊ ಕುರುವಕುಲ, ಕುರುವಕುರದ, ನಾರದಗಡ್ಡೆ ಸೇರಿ ನಾಲ್ಕೈದು ಹಳ್ಳಿ ಜನರು ಒಂದು ಕಡೆಯಿಂದ ಇನ್ನೊಂದು ಕಡೆ ಹೋಗಬೇಕಾದರೆ, ಕೃಷ್ಣಾ ನದಿಯನ್ನು ದಾಟಿಯೇ ಹೋಗಬೇಕು. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳು ಕಳೆದರೂ ನದಿಗೆ ಸೇತುವೆ (Bridge) ಇಲ್ಲ. ತೆಪ್ಪಗಳ ಮೂಲಕವೇ ಹೋಗಬೇಕು. ನಾಲ್ಕೈದು ಹಳ್ಳಿಗಳ ಸುಮಾರು 3 ಸಾವಿರಕ್ಕೂ ಹೆಚ್ಚು ಜನರ ಗೋಳು ಕೇಳುವವರು ಯಾರು ಎಂಬಂತಾಗಿದೆ.
ಶಾಲೆ ಆರಂಭವಾಯಿತು ಅಂದರೆ ಸಾಕು ಮಕ್ಕಳಿಗೆ ಹಾಗೂ ಪೋಷಕರಿಗೆ ಜೀವಭಯ ಕಾಡಲು ಆರಂಭವಾಗುತ್ತದೆ. ಮೊಸಳೆಗಳು, ಪ್ರವಾಹ, ಬಿರುಗಾಳಿ ಎಂಬ ಭಯದ ನಡುವೆ ತೆಪ್ಪಗಳ ಮೂಲಕ ಸಾಗುತ್ತಾರೆ. ಸದ್ಯ ಶಾಲಾ ಕಾಲೇಜುಗಳು ಅರಂಭವಾಗಿದ್ದು, ಮತ್ತೆ ಮಕ್ಕಳ ಸ್ಥಿತಿ ಕರಾಳತೆಗೆ ಜಾರಿದೆ. ತೆಪ್ಪಗಳ ಮೂಲಕವೇ ಶಾಲಾ ಕಾಲೇಜುಗಳಿಗೆ ಮಕ್ಕಳು ಓಡಾಡುತ್ತಿದ್ದಾರೆ. ಒಂದೆಡೆ ಸುರಕ್ಷಿತವಾಗಿ ಶಾಲಾ ಕಾಲೇಜುಗಳಿಗೆ, ಮನೆಗಳಿಗೆ ತಲುಪುತ್ತೇವೋ ಎಂಬ ಭಯ, ಇನ್ನೊಂದೆಡೆ ಐದು ನಿಮಿಷ ವಿಳಂಬವಾದರೂ ತರಗತಿಗಳು ತಪ್ಪಿಹೋಗುತ್ತವೆ. ಇವರ ಸ್ಥಿತಿ ಕೇಳುವವರು ಯಾರು?