ಮೈಸೂರು: ಶಾಲೆಯಲ್ಲಿ ಹಾಲು ಸೇವನೆ ಮಾಡಿದ್ದ 14 ಮಂದಿ ಮಕ್ಕಳು ಅಸ್ವಸ್ಥಗೊಂಡ ಘಟನೆ ಹೆಚ್.ಡಿ.ಕೋಟೆ ತಾಲೂಕಿನ ಮಹದೇಶ್ವರ ಕಾಲೋನಿಯಲ್ಲಿ ನಡೆದಿದೆ.
ನಿನ್ನೆ ಗ್ರಾಮದ ಶಾಲೆಯಲ್ಲಿ ಹಾಲು ಸೇವಿಸಿದ ಪರಿಣಾಮ ಮಕ್ಕಳು ಅಸ್ವಸ್ಥಗೊಂಡಿರುವುದಾಗಿ ಗ್ರಾಮಸ್ಥರ ಆರೋಪ ಮಾಡಿದ್ದಾರೆ. ಸದ್ಯ ಮಕ್ಕಳನ್ನು ಹೆಚ್.ಡಿ.ಕೋಟೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಸಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ಬಗ್ಗೆ ತಿಳಿಯುತ್ತಿದಂತೆ ಸ್ಥಳಕ್ಕೆ ತಾಲೂಕು ಆರೋಗ್ಯ ಅಧಿಕಾರಿ ಭೇಟಿ ನೀಡಿ ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ಆರೋಗ್ಯ ಇಲಾಖೆ ಗ್ರಾಮದ ನೀರಿನ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದೆ. ಕಲುಷಿತ ನೀರು ಅಥವಾ ಆಹಾರ ಸೇವಿಸಿರುವ ಶಂಕೆಯನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.
ಕಳೆದ ರಾತ್ರಿಯಿಂದ ಮಕ್ಕಳು ವಾಂತಿ ಜ್ವರದಿಂದ ಬಳಲುತ್ತಿದ್ದರು. ಈ ಕುರಿತು ಮಾಹಿತಿ ಪಡೆದು ಕೂಡಲೇ ಕಾರ್ಯಪ್ರವೃತ್ತರಾದ ಆರೋಗ್ಯಾಧಿಕಾರಿ ಡಾ.ರವಿಕುಮಾರ್, ತುರ್ತು ವಾಹನದಲ್ಲಿ ಅಸ್ವಸ್ಥ ಮಕ್ಕಳನ್ನು ಆಸ್ಪತ್ರೆಗೆ ಸ್ಥಳಾಂತರ ಮಾಡಿದ್ದಾರೆ. ಇತ್ತ ಮಕ್ಕಳಿಗೆ ಚಿಕಿತ್ಸೆ ನೀಡಿರೋ ವೈದ್ಯರು, ಆತಂಕಗೊಂಡಿದ್ದ ಪೋಷಕರಿಗೆ ಧೈರ್ಯ ತುಂಬಿದ್ದಾರೆ. ಈ ನಡುವೆ ಮಕ್ಕಳು ಅಸ್ವಸ್ಥರಾಗಿದ್ದಕ್ಕೆ ಗ್ರಾಮಸ್ಥರು ಶಾಲೆಯ ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದ ಘಟನೆಯೂ ನಡೆದಿದೆ.
ಇದನ್ನೂ ಓದಿ: ಉಪ್ಪಿಟ್ಟಿನಲ್ಲಿ ಸತ್ತ ಹಾವಿನ ಮರಿ; ಉಪಹಾರ ಸೇವಿಸಿದ್ದ 56 ಹಾಸ್ಟೆಲ್ ವಿದ್ಯಾರ್ಥಿಗಳು ಅಸ್ವಸ್ಥ