ಮಡಿಕೇರಿ: ಶಾಲೆಯ ನೀರಿನ ಟ್ಯಾಂಕ್ ಗೆ ಕಿಡಿಗೇಡಿಗಳು ವಿಷ ಬೆರೆಸಿದ ಘಟನೆ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸುಂಟಿಕೊಪ್ಪದಲ್ಲಿ ನಡೆದಿದೆ.
ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ನೀರಿನ ಟ್ಯಾಂಕ್ಗೆ ವಿಷ ಬೆರೆಸಲಾಗಿದ್ದು, ಇಂದು ಬೆಳಗ್ಗೆ ಶೌಚಾಲಯ ಸ್ವಚ್ಛಗೊಳಿಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.
ಶಾಲಾ ಸಿಬ್ಬಂದಿ ಲತಾ ಅವರಿಗೆ ವಿಷ ಬೆರೆತಿರುವ ಸಂಗತಿ ಗಮನಕ್ಕೆ ಬಂದಿದ್ದು, ಕೂಡಲೇ ಎಚ್ಚೆತ್ತ ಅವರು ಸಮಯ ಪ್ರಜ್ಞೆ ಮೆರೆದು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಶಾಲಾ ಆಡಳಿತ ಮಂಡಳಿಯಿಂದ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಮೌಖಿಕ ದೂರು ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಶಾಲಾ ಆವರಣ ಪುಂಡರ ಅಡ್ಡೆಯಾಗಿದ್ದು, ಮದ್ಯ ವ್ಯಸನಿಗಳು ಸಂಜೆಯಾದರೇ ಸಾಕು ಶಾಲೆ ಆವರಣವನ್ನೇ ಅಡ್ಡ ಮಾಡಿಕೊಂಡಿದ್ದಾರೆ ಎಂಬ ಅರೋಪ ಕೇಳಿ ಬಂದಿದೆ. ಈ ಹಿಂದೆಯೂ ಕೂಡ ಕಿಡಿಗೇಡಿಗಳ ನಿಯಂತ್ರಣಕ್ಕೆ ಹಲವು ಬಾರಿ ಶಿಕ್ಷಕರು ಸ್ಥಳೀಯ ಪಂಚಾಯ್ತಿ ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಘಟನೆ ಸಂಬಂಧ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕೆ ಶಿಕ್ಷಕರು, ಗ್ರಾಮಸ್ಥರು ಆಗ್ರಹಿಸಿದ್ದಾರೆ.