ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ದುಷ್ಕರ್ಮಿಗಳು; ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಮಕ್ಕಳು ಕ್ಷೇಮ | Miscreants mixed poison to school water tank in madikeri


ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ದುಷ್ಕರ್ಮಿಗಳು; ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಮಕ್ಕಳು ಕ್ಷೇಮ

ಸಾಂದರ್ಭಿಕ ಚಿತ್ರ

ಮಡಿಕೇರಿ: ದುಷ್ಕರ್ಮಿಗಳು ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ಘಟನೆ ನಡೆದಿದೆ. ಮಡಿಕೇರಿ ತಾಲೂಕಿನ ಸುಂಟಿಕೊಪ್ಪದ ಸರ್ಕಾರಿ ಶಾಲೆಯ ನೀರಿನ ಟ್ಯಾಂಕ್‌ಗೆ ದುಷ್ಕರ್ಮಿಗಳು ವಿಷಕಾರಿ ರಾಸಾಯನಿಕ ಬೆರೆಸಿದ್ದು, ಶಾಲೆಯ ಸಿಬ್ಬಂದಿಯ ಸಮಯ ಪ್ರಜ್ಞೆಯಿಂದ ಎಲ್ಲಾ ಮಕ್ಕಳು ಸುರಕ್ಷತವಾಗಿದ್ದಾರೆ. ಈ ಸಂಬಂಧ ಶಾಲಾ ಆಡಳಿತ ಮಂಡಳಿ ಪೊಲೀಸರಿಗೆ ದೂರು ನೀಡಿದ್ದು ಸುಂಟಿಕೊಪ್ಪ ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.

ಬೆಳಗ್ಗೆ ಶೌಚಾಲಯ ಸ್ವಚ್ಛಗೊಳಿಸುವಾಗ ಪ್ರಕರಣ ಬೆಳಕಿಗೆ ಬಂದಿದೆ. ಲತಾ, ಶೌಚಾಲಯ ಸ್ವಚ್ಚಗೊಳಿಸಲು ಹೋದಾಗ ನೀರಿನ ಓವರ್‌ಟ್ಯಾಂಕ್‌ನ ಮುಚ್ಚಳ ತೆರೆದಿದ್ದು, ಟ್ಯಾಂಕ್‌ನಿಂದ ದುರ್ವಾಸನೆ ಬರುತ್ತಿರುವುದು ಕಂಡು ಬಂದಿದೆ. ಸದ್ಯ ಲತಾ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದೆ. ಇದಾದ ಬಳಿಕ ಶಾಲಾ ಸಿಬ್ಬಂದಿಯಿಂದ ಸುಂಟಿಕೊಪ್ಪ ಪೊಲೀಸ್ ಠಾಣೆಗೆ ಮೌಖಿಕ ದೂರು ಸಲ್ಲಿಸಲಾಗಿದೆ.

ಕೂಡಲೇ ಆಡಳಿತ ಮಂಡಳಿಯವರು ತಾಲೂಕು ಶಿಕ್ಷಣಾಧಿಕಾರಿ ಹಾಗೂ ಸುಂಟಿಕೊಪ್ಪ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಟ್ಯಾಂಕ್ ನೀರಿನಲ್ಲಿ ದುಷ್ಕರ್ಮಿಗಳು ವಿಷಕಾರಿ ರಾಸಾಯನಿಕ ಬೆರೆಸಿರುವುದು ಪತ್ತೆಯಾಗಿದೆ. ಈ ನೀರನ್ನು ಅದೃಷ್ಟವಶಾತ್ ಶೌಚಾಲಯದ ಉದ್ದೇಶಕ್ಕೆ ಮಾತ್ರ ಬಳಸಲಾಗಿದ್ದು, ಯಾವ ವಿದ್ಯಾರ್ಥಿಯೂ ಸೇವಿಸಿಲ್ಲ. ಇದರಿಂದ ಶಾಲೆಯಲ್ಲಿ ಕಲಿಯುತ್ತಿರುವ ಸುಮಾರು 115 ವಿದ್ಯಾರ್ಥಿಗಳ ಅಪಾಯದಿಂದ ಪಾರಾಗಿದ್ದಾರೆ. ಈ ಹಿಂದೆ ಕೆಲ ಕಿಡಿಗೇಡಿಗಳು ಶಾಲೆಯ ಆವರಣದಲ್ಲಿ ಇಟ್ಟಿದ್ದ ಪುಸ್ತಕಗಳನ್ನು ಸುಟ್ಟು ಹಾಕಿದ್ದರು ಎಂದು ತಿಳಿದುಬಂದಿದೆ.

ಕಿಡಿಗೇಡಿಗಳ‌ ಅಡ್ಡೆಯಾಗಿರೋ ಶಾಲಾ ವಠಾರ
ಸುಂಟಿಕೊಪ್ಪದ ಸರ್ಕಾರಿ ಶಾಲೆಯ ಆವರಣವನ್ನು ಗಾಂಜಾ, ಮದ್ಯ ವ್ಯಸನಿಗಳು ತಮ್ಮ ಅಡ್ಡೆಯನ್ನಾಗಿ ಮಾಡಿಕೊಂಡಿದ್ದಾರೆ. ಕಿಡಿಗೇಡಿಗಳ ನಿಯಂತ್ರಣಕ್ಕೆ ಹಲವು ಬಾರಿ ಸಿಬ್ಬಂದಿ ದೂರು ನೀಡಿದ್ದರು ಪೊಲೀಸರು ಮಾತ್ರ ಯಾವುದೇ ಕ್ರಮ‌ಕೈಗೊಂಡಿಲಿಲ್ಲ. ಪೊಲೀಸ್ ಇಲಾಖೆ ವೈಫಲ್ಯ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರ ಹಾಕಿದ್ರು. ಸದ್ಯ ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ ಬೆರೆಸಿದ ಘಟನೆ ಬಳಿಕ ಎಚ್ಚೆತ್ತ ಪೊಲೀಸರು ದುಷ್ಕರ್ಮಿಗಳಿಗಾಗಿ ಬಲೆ ಬೀಸಿದ್ದಾರೆ.

TV9 Kannada


Leave a Reply

Your email address will not be published. Required fields are marked *