ಬೆಂಗಳೂರು: ಶಾಲೆ ಆರಂಭಕ್ಕೆ ತಜ್ಞರು ಗ್ರೀನ್​ ಸಿಗ್ನಲ್​ ನೀಡಿರುವ ಬೆನ್ನಲ್ಲೇ ಖಾಸಗಿ ಶಾಲೆಗಳು ಇದೀಗ ಸರ್ಕಾರದ ಬಳಿ ಲಾಬಿ ಶುರುಮಾಡಿವೆ. ತಜ್ಞರು ವರದಿಯನ್ನ ಸರ್ಕಾರ ಕೂಡಲೇ ಪರಿಗಣಿಸುವಂತೆ ಒತ್ತಾಯಿಸಿ ಶಿಕ್ಷಣ ಸಚಿವರಿಗೆ ಖಾಸಗಿ ಶಾಲಾ ಆಡಳಿತ ಮಂಡಳಿಗಳು ಪತ್ರ ಬರೆದಿವೆ.

ಶಾಲೆ ಪ್ರಾರಂಭಿಸಲು ಡಾ.ದೇವಿ ಪ್ರಸಾದ್ ಶೆಟ್ಟಿ ಸಮಿತಿ ಕೊಟ್ಟಿರುವ ವರದಿಯನ್ನ ಸ್ವಾಗತಿಸಿರುವ ಕ್ಯಾಮ್ಸ್, ರುಪ್ಸಾ ಕರ್ನಾಟಕ, ಮಾಸ್, ಕಿಸಾ, ಮಿಸ್ಕಾ, ಸೇರಿದಂತೆ ಒಟ್ಟು 15ಕ್ಕೂ ಹೆಚ್ಚು ಖಾಸಗಿ ಶಾಲಾ ಸಂಘಟನೆಗಳು ಇದೀಗ ಸರ್ಕಾರಕ್ಕೆ ಪತ್ರವನ್ನ ಬರೆದಿವೆ. ಪಾಸಿಟಿವಿಟಿ ರೇಟ್ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ಪ್ರಾರಂಭಿಸುವಂತೆ ಒತ್ತಾಯ ಮಾಡಿವೆ.

ಖಾಸಗಿ ಶಾಲೆಗಳು ಹೇಳ್ತಿರೋದೇನು?
ಕಳೆದ 15 ತಿಂಗಳಿನಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ನಗರ ಪ್ರದೇಶದ ಮಕ್ಕಳಿಗೆ ‌ಮಾತ್ರ ಆನ್​ಲೈನ್ ಶಿಕ್ಷಣ ಸಿಕ್ಕಿದೆ. ಆದರೆ ಗ್ರಾಮೀಣ ಭಾಗದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ದೇಶದ ಅಭಿವೃದ್ಧಿಗೆ ಶಿಕ್ಷಣ ಬಹಳ ಮುಖ್ಯ. ಆದರೆ ಕಳೆದ 15 ತಿಂಗಳಲ್ಲಿ ಕೊರೊನಾ ಲಕ್ಷಾಂತರ ಮಕ್ಕಳ ‌ಶಿಕ್ಷಣ ಕಸಿದುಕೊಂಡಿದೆ. ಶಾಲೆ ಪ್ರಾರಂಭವಾದರೂ ಶೇಕಡಾ 30ರಷ್ಟು ಮಕ್ಕಳು ಶಾಲೆಗೆ ಬರೋದು ಬಹುತೇಕ ಡೌಟ್.

ಶಿಕ್ಷಣ ಇಲ್ಲದೇ ಅನೇಕ‌ ಮಕ್ಕಳು ಬಾಲ್ಯ ವಿವಾಹ, ಬಾಲ ಕಾರ್ಮಿಕ, ಹಾಗೂ ಇತರೆ ‌ಕಾರಣಗಳಿಂದ‌ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವಂತಾಗಿದೆ. ಆರೋಗ್ಯದ ಜೊತೆ ಶಿಕ್ಷಣಕ್ಕೂ ಸರ್ಕಾರ ಹೆಚ್ಚು ಆದ್ಯತೆ ಕೊಡಬೇಕಿದೆ. ತಜ್ಞರು ‌ಕೂಡ ಕೆಲ ಸಲಹೆಗಳನ್ನು ನೀಡಿ ಶಾಲೆ ಪ್ರಾರಂಭಕ್ಕೆ ಸಲಹೆ ನೀಡಿದ್ದಾರೆ. ಸದ್ಯ ವಿದ್ಯಾಗಮ ಅಥವಾ ಪಾಳಿ ಪದ್ಧತಿಯಲ್ಲಿ ಶಾಲೆ ಪ್ರಾರಂಭಕ್ಕೆ ಮನವಿ ಮಾಡಿವೆ.

ಖಾಸಗಿ ಶಾಲೆಗಳ ಪಟ್ಟು ಯಾಕೆ?
ಮಕ್ಕಳು ಭೌತಿಕವಾಗಿ ಶಾಲೆಗೆ ಬಂದರೆ ಸುಲಭವಾಗಿ ಪೂರ್ಣ ಶುಲ್ಕವನ್ನ ಪೋಷಕರು ಸ್ವೀಕರಿಸಬಹುದು. ಫಿಸಿಕಲ್ ತರಗತಿಗೆ ಮಕ್ಕಳು ಬಂದರೆ ಶುಲ್ಕ ಕಡಿತದ ಪ್ರಶ್ನೆಯೇ ಬರಲ್ಲ. ನಾವು ನಿಗದಿ ಮಾಡಿದಷ್ಟು ಶುಲ್ಕವನ್ನು ಪೋಷಕರು ಕಟ್ಟಲೇಬೇಕು. ಆನ್​ಲೈನ್ ಶಿಕ್ಷಣ ನಂಬಿಕೊಂಡ್ರೆ ಶುಲ್ಕ ಕಡಿತ ಮಾಡುವ ವಾದಗಳು ಶುರುವಾಗುತ್ತವೆ. ಆನ್​ಲೈನ್ ಶಿಕ್ಷಣ ಮುಂದುವರೆದಷ್ಟೂ ಶುಲ್ಕಕ್ಕೆ ಕತ್ತರಿ ಬೀಳುತ್ತದೆ. ವಿದ್ಯುತ್ ಶುಲ್ಕ, ನೀರು, ಟ್ಯೂಷನ್ ಫೀಸ್, ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಹೆಸರಲ್ಲಿ ಹಣ ಪೀಕಲು ಸಹಾಯವಾಗುತ್ತದೆ ಅನ್ನೋದು ಖಾಸಗಿ ಶಾಲೆಗಳ ಲೆಕ್ಕಾಚಾರ ಎನ್ನಲಾಗಿದೆ.

ಪೋಷಕರು ಹೇಳ್ತಿರೋದೇನು?
ಗ್ರಾಮೀಣ ಭಾಗದಲ್ಲಿ ತರಗತಿ ಪ್ರಾರಂಭಿಸಲಿ, ಆದರೆ ಸಿಟಿಗಳಲ್ಲಿ ಬೇಡ. ಗ್ರಾಮೀಣ ಪ್ರದೇಶದಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುತ್ತೆ ಹಾಗೆಯೇ ಶಾಲೆಯ ಸುತ್ತಮುತ್ತಲಿನ ಜಾಗವು ಜಾಸ್ತಿ ಇರುತ್ತದೆ. ಆದರೆ ಸಿಟಿಗಳಲ್ಲಿ ಶಾಲಾ ಕೊಠಡಿ ಕೂಡ ಚಿಕ್ಕದಾಗಿರುತ್ತೆ. ಇಲ್ಲಿ ಕೊರೊನಾ ಹರಡುವ ಸಾಧ್ಯತೆ ಹೆಚ್ಚು ಅಂತಿದ್ದಾರೆ ಪೋಷಕರು. ಆದರೆ ಸರ್ಕಾರ ಸದ್ಯ ಶಾಲೆ ಪ್ರಾರಂಭ ಮಾಡೋದಿಲ್ಲ ಅಂತ ಹೇಳಿದೆ.

The post ಶಾಲೆ ಆರಂಭಕ್ಕೆ ತಜ್ಞರು ಗ್ರೀನ್​ ಸಿಗ್ನಲ್​ ಬೆನ್ನಲ್ಲೇ ಖಾಸಗಿ ಶಾಲೆಗಳಿಂದ ಲಾಬಿ; ಇಲ್ಲೂ ಇದ್ಯಾ ಲಾಭದ ಲೆಕ್ಕಾಚಾರ appeared first on News First Kannada.

Source: newsfirstlive.com

Source link