ಶಾಲೆ ನಿರ್ಮಾಣಕ್ಕೆ 1ಕೋಟಿ ರೂ. ದೇಣಿಗೆ ಕೊಟ್ಟ ನಟ ಅಕ್ಷಯ್ ಕುಮಾರ್

ಮುಂಬೈ: ಬಾಲಿವುಡ್ ನಟ ಅಕ್ಷಯ್ ಕುಮಾರ್ ಸೈನಿಕರ ಜೊತೆಗೆ ಹಾಡಿ ಕುಣಿದು, ಶಾಲೆ ನಿರ್ಮಾಣಕ್ಕೆ ಒಂದು ಕೋಟಿ ರೂ. ದೇಣಿಗೆಯನ್ನು ನೀಡಿದ್ದಾರೆ.

ಅಕ್ಷಯ್ ಕುಮಾರ್ ಇತ್ತೀಚೆಗೆ ಜಮ್ಮು ಕಾಶ್ಮೀರ ಪ್ರದೇಶಕ್ಕೆ ಭೇಟಿ ನೀಡಿದ್ದರು. ಅಲ್ಲಿನ ಜನರೊಂದಿಗೆ ಕೆಲ ಕಾಲ ಬೆರೆತರು. ನಂತರ ಸೈನಿಕರ ಜೊತೆ ಸಂವಾದ ನಡೆಸಿದರು. ಅವರಿಗೆ ಉತ್ಸಾಹ ತುಂಬಲು ಹಾಡಿ, ಕುಣಿದರು. ಬಿಎಸ್‍ಎಫ್ ಸೈನಿಕರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡರು. ಬಾಲಿವುಡ್ ನಟನನ್ನು ನೋಡಲು ಸುತ್ತಮುತ್ತಲಿನ ಹಳ್ಳಿಯ ಜನರು ಮುಗಿಬಿದ್ದಿದ್ದರು. ಈ ವೇಳೆ ಅಲ್ಲಿನ ನೀರೂ ಗ್ರಾಮದಲ್ಲಿ ಶಾಲೆ ನಿರ್ಮಾಣಕ್ಕಾಗಿ 1 ಕೋಟಿ ರೂ. ದೇಣಿಗೆ ನೀಡುವ ಮೂಲಕವಾಗಿ ಅಕ್ಷಯ್ ಕುಮಾರ್ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ಬ್ಯುಸಿ ಆಗಿದ್ದಾರೆ. ರೋಹಿತ್ ಶೆಟ್ಟಿ ನಿರ್ದೇಶನದಲ್ಲಿ ಅವರು ನಟಿಸಿರುವ ಸೂರ್ಯವಂಶಿ ಚಿತ್ರದ ಬಿಡುಗಡೆಯು ಲಾಕ್‍ಡೌನ್ ಕಾರಣದಿಂದ ತಡವಾಗಿದೆ. ಬಹುನಿರೀಕ್ಷಿತ ಬೆಲ್ ಬಾಟಂ ಸಿನಿಮಾ ಜುಲೈ 27ರಂದು ಚಿತ್ರಮಂದಿರದಲ್ಲಿಯೇ ರಿಲೀಸ್ ಆಗಲಿದೆ ಎಂದು ಅವರು ಇತ್ತೀಚೆಗೆ ಸುದ್ದಿ ನೀಡಿದ್ದಾರೆ. ಇದಲ್ಲದೆ ಅತರಂಗಿರೇ, ಬಚ್ಚನ್ ಪಾಂಡೆ, ರಾಮ್ ಸೇತು ಮುಂತಾದ ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್ ತೊಡಗಿಕೊಂಡಿದ್ದಾರೆ.

ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂದಿರುತ್ತಾರೆ. ಕಳೆದ ವರ್ಷ ಲಾಕ್‍ಡೌನ್ ಆರಂಭ ಆದಾಗ ಬರೋಬ್ಬರಿ 25 ಕೋಟಿ ರೂ.ಗಳನ್ನು ದೇಣಿಗೆಯಾಗಿ ನೀಡುವ ಮೂಲಕ ಅಕ್ಷಯ್ ಕುಮಾರ್ ಎಲ್ಲರಿಗೂ ಮಾದರಿ ಆಗಿದ್ದರು. ಈಗ ಶಾಲೆ ನಿರ್ಮಾಣಕ್ಕಾಗಿ ಒಂದು ಕೋಟಿ ರೂ. ದೇಣಿಗೆ ನೀಡಿದ್ದಾರೆ.

The post ಶಾಲೆ ನಿರ್ಮಾಣಕ್ಕೆ 1ಕೋಟಿ ರೂ. ದೇಣಿಗೆ ಕೊಟ್ಟ ನಟ ಅಕ್ಷಯ್ ಕುಮಾರ್ appeared first on Public TV.

Source: publictv.in

Source link