ಶಾಸಕ ಎಸ್​ಆರ್ ವಿಶ್ವನಾಥ್ ಹತ್ಯೆಗೆ ಸಂಚು: ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣಗೆ ಬಂಧನ ಭೀತಿ | Conspiracy to kill yelahanka mla vishwanath sp vamshi krishna in rajanukunte police station for enquiry dmg


ಶಾಸಕ ಎಸ್​ಆರ್ ವಿಶ್ವನಾಥ್ ಹತ್ಯೆಗೆ ಸಂಚು: ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣಗೆ ಬಂಧನ ಭೀತಿ

ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಮತ್ತು ಗೋಪಾಲಕೃಷ್ಣ

ಬೆಂಗಳೂರು: ಯಲಹಂಕ ಶಾಸಕ ಎಸ್​.ಆರ್​.ವಿಶ್ವನಾಥ್ ಹತ್ಯೆಗೆ ಸಂಚು ರೂಪಿಸಿದ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣಗೆ ಬಂಧನದ ಭೀತಿ ಎದುರಾಗಿದೆ. ವಿಶ್ವನಾಥ್ ಕೊಟ್ಟ ದೂರಿನ ಅನ್ವಯ ದಾಖಲಾಗಿರುವ ಎಫ್​ಐಆರ್​ನಲ್ಲಿ ಮೊದಲ ಆರೋಪಿಯ ಹೆಸರು ಗೋಪಾಲಕೃಷ್ಣ ಎಂದು ಇದೆ. ವಿಚಾರಣೆಗೆ ಗುರುವಾರ (ಡಿ.2) ಹಾಜರಾಗಬೇಕು ಎಂದು ಪೊಲೀಸರು ನೊಟೀಸ್ ಜಾರಿ ಮಾಡಿದ್ದರು. ಆದರೆ ಗೋಪಾಲಕೃಷ್ಣ ಈವರೆಗೆ ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಕುಳ್ಳ ದೇವರಾಜ್ ಮೊಬೈಲ್​ನಲ್ಲಿರುವ ಮಾಹಿತಿಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ದೇವರಾಜ್ ಮತ್ತು ಗೋಪಾಲಕೃಷ್ಣ ಅವರ ಕರೆ ವಿವರಗಳನ್ನು (ಕಾಲ್​ ರೆಕಾರ್ಡ್) ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ. ಕುಳ್ಳ ದೇವರಾಜ್​ ಮೇಲೆ ದಾಖಲಾಗಿರುವ ಹಿಂದಿನ ಪ್ರಕರಣಗಳ ಬಗ್ಗೆಯೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಂಶಿ ಕೃಷ್ಣ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಏನಿದು ಪ್ರಕರಣ?
ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್‌ ಹತ್ಯೆಗೆ ಸಂಚು ರೂಪಿಸಿರುವ ಆರೋಪಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ರಾಜಾನುಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣವನ್ನು ಉನ್ನತ ಮಟ್ಟದಲ್ಲಿ ತನಿಖೆ ಮಾಡಬೇಕು. ಈ ಬೆಳವಣಿಗೆಗಳು ಸರಿಯಾದದ್ದಲ್ಲ ಎಂದು ವಿಶ್ವನಾಥ್ ಹೇಳಿದ್ದರು. ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪಕ್ಕೆ ಸಂಬಂಧಿಸಿ ರಾಜಾನುಕುಂಟೆ ಠಾಣೆಗೆ ಶಾಸಕ ಲಿಖಿತ ದೂರು ನೀಡಿದ್ದಾರೆ. ವಿಡಿಯೋ ಆಧರಿಸಿ ಕೊಲೆಗೆ ಸಂಚು ಎಂದು ದೂರು ನೀಡಲಾಗಿದೆ. ಕೇಸ್ ದಾಖಲಿಸಿ ತನಿಖೆ ನಡೆಸಲಾಗುವುದು. ಪ್ರಕರಣದ ಬಗ್ಗೆ ಕಾನೂನು ಪ್ರಕಾರ ತನಿಖೆ ನಡೆಸುತ್ತೇವೆ ಎಂದು ಟಿವಿ9ಗೆ ಬೆಂಗಳೂರು ಗ್ರಾಮಾಂತರ ಎಸ್‌ಪಿ ಕೆ.ವಂಶಿಕೃಷ್ಣ ಹೇಳಿಕೆ ನೀಡಿದ್ದಾರೆ.

ಯಲಹಂಕ ಕ್ಷೇತ್ರದ ಕಾಂಗ್ರೆಸ್‌ನ ಭದ್ರಕೋಟೆಯಾಗಿತ್ತು. ಪ್ರಬಲ ನಾಯಕರ ಮುಂದೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದೇನೆ. ಸಜ್ಜನಿಕೆಯಿಂದ ರಾಜಕಾರಣ ಮಾಡಿಕೊಂಡು ಬಂದಿದ್ದೇವೆ. ಚುನಾವಣೆಗಳಲ್ಲಿ ಸೋಲು-ಗೆಲವು ಸಹಜವಾಗಿ ಇರುತ್ತದೆ. ಕಳೆದ 2 ಬಾರಿ ನನ್ನ ವಿರುದ್ಧ ಗೋಪಾಲಕೃಷ್ಣ ಸ್ಪರ್ಧಿಸಿದ್ದರು. ಅವರು ನನ್ನ ವಿರುದ್ಧ ಸ್ಪರ್ಧಿಸಿ 3ನೇ ಸ್ಥಾನ ಪಡೆದಿದ್ದರು ಎಂದು ಗೋಪಾಲಕೃಷ್ಣ ಬಗ್ಗೆ ಹೇಳಿದ್ದಾರೆ.

ನನಗೆ ಕ್ಷಮಾಪಣ ಪತ್ರ ಬಂದಿತ್ತು. ಹತ್ಯೆಗೆ ಪ್ಲ್ಯಾನ್ ಮಾಡಿದ್ದ ಬಗ್ಗೆ ಸ್ಕೆಚ್ ಹಾಕಿದ್ದರು. ಇದು ತಪ್ಪೆಂದು ತಿಳಿದು ನಾನು ಕ್ಷಮೆಯಾಚಿಸುತ್ತಿದ್ದೇನೆ ಎಂದು ಕುಳ್ಳ ದೇವರಾಜ್ ನನಗೆ ಕ್ಷಮಾಪಣಾ ಪತ್ರ ಬರೆದಿದ್ದರು. ಕೂಡಲೇ ನಾನು ಗೃಹ ಸಚಿವರಿಗೆ ಕರೆ ಮಾಡಿ ಮಾತಾಡಿದ್ದೆ. ರಾಜಾನುಕುಂಟೆ ಪೊಲೀಸ್ ಠಾಣೆಗೂ ದೂರು ನೀಡಿದ್ದೇನೆ. ಸಿಎಂ ಬೊಮ್ಮಾಯಿ ಜೊತೆಯೂ ನಾನು ಮಾತಾಡಿದ್ದೇನೆ. ಸುಪಾರಿ ಕೊಟ್ಟು ಕೊಲೆಗೆ ಯತ್ನಿಸಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.

15 ದಿನದ ಹಿಂದೆ ಈ ಬಗ್ಗೆ ವಾಸನೆ ಬರುತ್ತಿತ್ತು. ಕುಳ್ಳ ದೇವರಾಜ್-ಗೋಪಾಲಕೃಷ್ಣ ಆಡಿಯೋ ಬಗ್ಗೆ ಹೇಳಿಕೆ, ಇಡೀ ಸಂಭಾಷಣೆ ನನ್ನ ಮೇಲೆ ದ್ವೇಷ ಕಾರುವಂತೆ ಇದೆ. ಆಂಧ್ರದಿಂದ ಸುಪಾರಿ ಕಿಲ್ಲರ್ಸ್‌ ಕರೆಸುವುದಾಗಿ ಚರ್ಚಿಸಿದ್ದಾರೆ. ಕಡಬಗೆರೆ ಶ್ರೀನಿವಾಸ್ ನನ್ನ ಜೊತೆಗೆ ಇದ್ದವರು. ಅವರನ್ನು ಎಪಿಎಂಸಿ ಅಧ್ಯಕ್ಷನಾಗಿ ಮಾಡಿದ್ದು ನಾನೇ. ಕಡಬಗೆರೆ ಶ್ರೀನಿವಾಸ್ ಮೇಲೆ ಶೂಟೌಟ್ ಆಗಿತ್ತು. ನನ್ನ ಏರಿಯಾದಲ್ಲಿ ಶೂಟೌಟ್ ನಡೆದಿತ್ತು. ಈ ಬಗ್ಗೆ ತನಿಖೆ ಮಾಡುವಂತೆ ನಾನು ಕೂಡ ಒತ್ತಾಯಿಸಿದ್ದೆ. ಆದರೆ ಈವರೆಗೆ ಇದರ ಹಿಂದೆ ಯಾರಿದ್ದಾರೆಂದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *