ವಿಜಯನಗರ: ಹೂವಿನ ಹಡಗಲಿ ಶಾಸಕ ಪಿ.ಟಿ ಪರಮೇಶ್ವರ್ ನಾಯ್ಕ್ ಸಹೋದರ ಮತ್ತು ಬಿಜೆಪಿ ಮುಖಂಡ ಪಿ.ಟಿ ಶಿವಾಜಿ ನಾಯ್ಕ್​​​ ನಡುವೆ ಮತ್ತೆಗೂಂಡಾಗಿರಿ ಮುಂದುವರಿದಿದೆ ಎನ್ನಲಾಗಿದೆ. ನನ್ನ ಮೇಲೆಯೇ ಕೇಸ್ ಮಾಡ್ತೀಯಾ? ಎಂದು ಶಿವಾಜಿ ನಾಯ್ಕ್​​ ತನ್ನ ವಿರುದ್ಧ ಎಫ್​ಐಆರ್​​ ದಾಖಲಿಸಿದ್ದ ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರಂತೆ. ಇಂದು ಬೆಳಿಗ್ಗೆಯೇ ಜೈಲಿನಿಂದ ಬೇಲ್​ ಮೇಲೆ ಹೊರ ಬಂದ ಶಿವಾಜಿ ನಾಯ್ಕ್​​, ದೂರುದಾರರ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಹರಪನಹಳ್ಳಿ ತಾಲೂಕಿನ ಲಕ್ಷ್ಮಿಪುರ ತಾಂಡಾದಲ್ಲಿ ಶರಣಾ ನಾಯ್ಕ್ ಮತ್ತವರ ಕುಟುಂಬಸ್ಥರ ಮೇಲೆ ಹಲ್ಲೆಯಾಗಿದೆ. ಮನೆಗೆ ನುಗ್ಗಿದ್ದ ಶಿವಾಜಿ ನಾಯ್ಕ್​ ಮೊದಲು ಶರಣಾ ನಾಯ್ಕ್​​ ಮತ್ತವರ ಮಗ ಜಗದೀಶ್​ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರಂತೆ. ಶರಣಾ ನಾಯ್ಕ್​​ ಹೆಂಡತಿಗೆ ಚಾಕುವಿನಿಂದ ಇರಿಯಾಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧ ಮತ್ತೆ ದೂರು ನೀಡಲು ಕುಟುಂಬ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ಠಾಣೆಯಲ್ಲೇ ಇಡೀ ಕುಟುಂಬ ವಿಷ ಕುಡಿದು ಆತ್ಮಹತ್ಯೆಗೆ ಮುಂದಾದಾಗ ಪೊಲೀಸರು ತಡೆದಿದ್ದಾರೆ.

ಪೊಲೀಸರಿಂದಲೇ ನಮಗೆ ಯಾವುದೇ ರಕ್ಷಣೆಯಿಲ್ಲ. ನಾವು ಬದುಕಲು ಹೇಗೆ ಸಾಧ್ಯ, ಸಾಯುತ್ತೇವೆ ಎಂದು ಶರಣಾ ನಾಯ್ಕ್​​ ಕುಟುಂಬ ವಿಷ ಕುಡಿಯಲು ಮುಂದಾಗಿದೆ ಎಂದು ಹೇಳಲಾಗಿದೆ. ಆಗ ಇವರ ಬಳಿಯಿದ್ದ ವಿಷದ ಬಾಟಲ್​ ಕಿತ್ತುಕೊಂಡು ಪೊಲೀಸರು ಸಮಾಧಾನ ಮಾಡಿದ್ದಾರೆ. ಇನ್ನು, ಶಿವಾಜಿ ನಾಯ್ಕ್​​ ಗೂಂಡಾಗಿರಿ ಹಿಂದೆ ಹರಪನಹಳ್ಳಿ ಶಾಸಕ ಕರುಣಾಕರ್ ರೆಡ್ಡಿ ಕುಮ್ಮಕ್ಕಿದೆ. ನಮಗೆ ನ್ಯಾಯ ಸಿಗೋವರೆಗೂ ಎಲ್ಲಿಗೂ ಹೋಗಲ್ಲ ಎಂದು ಶರಣಾ ನಾಯ್ಕ್​​ ಕುಟುಂಬ ಪೊಲೀಸ್​ ಠಾಣೆಯ ಮುಂದೆಯೇ ಕುಳಿತಿದ್ದಾರೆ.

ಇತ್ತೀಚೆಗೆ ಮನೆ ಜಾಗದ ಸಲುವಾಗಿ ಕಬ್ಬಿಣದ ಹಾರೆಯಿಂದ ಪಿ ಟಿ ಶಿವಾಜಿ.. ಶರಣ ನಾಯ್ಕನ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿತ್ತು. ಈ ಘಟನೆ ವೀಡಿಯೋದಲ್ಲಿ ಸೆರೆಯಾಗಿದ್ದು, ಭಾರೀ ವೈರಲ್ ಆಗಿತ್ತು. ಈ ಸಂಬಂಧ ಶಿವಾಜಿ ವಿರುದ್ಧ ಸ್ಥಳೀಯ ಪೊಲೀಸ್​ ಠಾಣೆಯಲ್ಲಿ ಎಫ್​​ಐಆರ್​ ದಾಖಲಾಗಿತ್ತು.

The post ಶಾಸಕ ಪಿ.ಟಿ. ಪರಮೇಶ್ವರ್ ನಾಯ್ಕ್ ಸೋದರನಿಂದ ಮತ್ತೆ ಗೂಂಡಾಗಿರಿ ಆರೋಪ appeared first on News First Kannada.

Source: newsfirstlive.com

Source link