ಶಾಸಕ ಮಹಾದೇವಪ್ಪ ಯಾದವಾಡ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಬಲವಂತವಾಗಿ ರೈತರಿಂದ ಬಾಂಡ್​ಗೆ ಸಹಿ; ರೈತರ ಆರೋಪ | Farmers Accuses MLA Mahadevappa Yadawad Ownership Parry Sugar Factory Forcing Farmers to Sign Bonds


ಶಾಸಕ ಮಹಾದೇವಪ್ಪ ಯಾದವಾಡ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಬಲವಂತವಾಗಿ ರೈತರಿಂದ ಬಾಂಡ್​ಗೆ ಸಹಿ; ರೈತರ ಆರೋಪ

ಸಕ್ಕರೆ ಕಾರ್ಖಾನೆ (ಸಾಂದರ್ಭಿಕ ಚಿತ್ರ)

ಬೆಳಗಾವಿ: ಒಂದೆಡೆ ಬೆಳಗಾವಿಯ ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಆರಂಭಿಸದಂತೆ ರೈತರು, ಕಾರ್ಖಾನೆಯ ಮಾಜಿ ನಿರ್ದೇಶಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಶಾಸಕ ಮಹಾದೇವಪ್ಪ ಯಾದವಾಡ ಒಡೆತನದ ಸಕ್ಕರೆ ಕಾರ್ಖಾನೆಯಲ್ಲಿ ಅಂಧ ದರ್ಬಾರ್ ನಡೆಯುತ್ತಿದೆ. ಕಬ್ಬಿನ ಬೆಳೆಗೆ ಟನ್‌ಗೆ 2,500 ರೂ. ಕೊಡುತ್ತೇನೆ ಎಂದು ಕಾರ್ಖಾನೆ ಬಾಂಡ್ ಪೇಪರ್ ಬರೆಸಿಕೊಳ್ಳುತ್ತಿದೆ. ರೈತರು ಮುಂದೆ ಹಣ ಕೇಳದಂತೆ ಬಾಂಡ್ ಬರೆಸಿಕೊಳ್ಳುತ್ತಿದ್ದಾರೆ ಎಂದು ರೈತರು ಆರೋಪ ಮಾಡುತ್ತಿದ್ದಾರೆ.

ರಾಮದುರ್ಗ ಶಾಸಕರ ಮಹಾದೇವಪ್ಪ ಯಾದವಾಡ ಅವರ ಸಹೋದರ ಮಲ್ಲಪ್ಪ ಯಾದವಾಡ ಅಧ್ಯಕ್ಷರಾಗಿರುವ ಕಾರ್ಖಾನೆ ಇದಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿರುವ ಪ್ಯಾರಿ (ಧನಲಕ್ಷ್ಮಿ) ಸಕ್ಕರೆ ಕಾರ್ಖಾನೆಯಿಂದ ಎರಡೂವರೆ ಸಾವಿರ ಕೊಡುತ್ತೇವೆ ಎಂದು ಬಾಂಡ್ ಬರೆಸಿಕೊಳ್ತಿದ್ದಾರೆ. ಕಡಿಮೆ ಇಳುವರಿ ಇರುವ ಕಬ್ಬನ್ನು ವಾಪಾಸ್ ಕಳುಹಿಸುತ್ತಿದ್ದಾರೆ. ಈ ರೀತಿ ಆದರೆ ರೈತರು ಎಲ್ಲಿಗೆ ಹೋಗಬೇಕು? ಬಾಂಡ್ ಬರೆಯಿಸಿಕೊಳ್ಳುತ್ತಿರುವುದಕ್ಕೆ ರೈತರೆಲ್ಲರೂ ವಿರೋಧ ಮಾಡುತ್ತೇವೆ. ಅಧಿವೇಶನದ ವೇಳೆ ಈ ಬಗ್ಗೆ ಪ್ರತಿಭಟನೆ ಮಾಡುತ್ತೇವೆ ಎಂದು ರೈತ ಮುಖಂಡ ಈರಣ್ಣ ಶಾಸಕರ ವಿರುದ್ಧ ಆರೋಪಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಸಕ್ಕರೆ ಕಾರ್ಖಾನೆಯಲ್ಲಿ ಟನ್‌ಗೆ 2,700 ರೂ. ನೀಡುತ್ತಿದ್ದಾರೆ. ಶಾಸಕರ ಒಡೆತನದ ಪ್ಯಾರಿ ಶುಗರ್ಸ್​ನಲ್ಲಿ ಮಾತ್ರ 2,500 ನೀಡುತ್ತಿದ್ದಾರೆ. ರಾಮದುರ್ಗ ಪಟ್ಟಣದಲ್ಲಿ ಶಿವಸಾಗರ ಮತ್ತು ಪ್ಯಾರಿ ಶುಗರ್ಸ್ ಎರಡೇ ಇವೆ. ಇದೀಗ ಶಿವಸಾಗರ ಸಕ್ಕರೆ ಕಾರ್ಖಾನೆ ಬಂದ್ ಆಗಿದ್ದು, ಅದನ್ನು ಆರಂಭಿಸಲು ಅರಿಹಂತ್ ಸಕ್ಕರೆ ಕಾರ್ಖಾನೆಯವರು ಮುಂದೆ ಬಂದಿದ್ದಾರೆ. ಶಿವಸಾಗರ ಸಕ್ಕರೆ ಕಾರ್ಖಾನೆ ಆರಂಭದಿಂದ ಶಾಸಕರ ಸಕ್ಕರೆ ಕಾರ್ಖಾನೆಗೆ ಎಫೆಕ್ಟ್ ಆಗುತ್ತದೆ ಎಂಬ ಕಾರಣಕ್ಕೆ ವಿರೋಧ ಮಾಡ್ತಿದ್ದಾರೆ ಎಂದು ರೈತ ಮುಖಂಡ ಈರಣ್ಣ ಆರೋಪ ಮಾಡಿದ್ದಾರೆ.

21 ಕೋಟಿ ರೂ. ರೈತರ ಕಬ್ಬಿನ ಬಾಕಿ ಬಿಲ್ ನೀಡಬೇಕು. ಷೇರುದಾರರಿಗೆ ಹಣ ವಾಪಸ್ ನೀಡುವಂತೆ ಒತ್ತಾಯ ಮಾಡಲಾಗಿದೆ. ಬೇಡಿಕೆ ಈಡೇರಿಸುವವರೆಗೆ ಕಾರ್ಖಾನೆ ಆರಂಭಿಸಬಾರದು ಎಂದು ಪ್ರತಿಭಟನೆ ವ್ಯಕ್ತವಾಗಿದೆ. ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾರ್ಖಾನೆ ಅವ್ಯವಹಾರದ ಬಗ್ಗೆ ಸಿಐಡಿಯಿಂದ ತನಿಖೆ ನಡೆಸಬೇಕು. ರೈತರ ಬಾಕಿ ಬಿಲ್ ಕೊಡುವುದಾಗಿ ಭರವಸೆ ನೀಡಲಾಗಿತ್ತು. ಬಾಕಿ ಹಣ ನೀಡಿ ಕಾರ್ಖಾನೆ ಆರಂಭಿಸಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ, ಬಾಕಿ ಬಿಲ್ ನೀಡಲು ಸ್ಥಳೀಯ ಶಾಸಕರ ವಿರೋಧ ಎಂಬ ಆರೋಪ ಕೇಳಿಬಂದಿದೆ. ಶಾಸಕ ಮಹಾದೇವಪ್ಪ ಯಾದವಾಡ ಇದನ್ನು ವಿರೋಧಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

TV9 Kannada


Leave a Reply

Your email address will not be published. Required fields are marked *