ಬೆಳಗಾವಿ: ಕುಡಚಿ ಕ್ಷೇತ್ರದ ಕ್ಷೇತ್ರದ ಶಾಸಕ ಪಿ. ರಾಜೀವ್ ಅವರ ತಾಯಿ ಶಾಂತಮ್ಮ ಅವರು ಕೊರೊನಾ ಸೋಂಕಿನಿಂದಾಗಿ ಇಂದು ವಿಧಿವಶರಾಗಿದ್ದಾರೆ. ಈ ಕುರಿತು ಶಾಸಕ ಪಿ. ರಾಜೀವ್ ಫೇಸ್​​ಬುಕ್​ ಮೂಲಕ ಮಾಹಿತಿ ನೀಡಿದ್ದು ಭಾವಪೂರ್ಣ ವಿದಾಯ ಹೇಳಿದ್ದಾರೆ.

ಜನ್ಮನೀಡಿ, ಎದೆ ಹಾಲುಣಿಸಿ, ಕೈತುತ್ತು ನೀಡಿ, ಸೆರಗಿನಿಂದ ಮೈ ಒರೆಸಿ, ಅಕ್ಕರೆಯಿಂದ ಬದುಕಿನ ಮೌಲ್ಯಗಳನ್ನು ತಿಳಿಸಿ ಬೆಳೆಸಿದ ನನ್ನವ್ವ ಕೊರೊನಾಗೆ ಬಲಿಯಾಗಿ ಇಂದು ನನ್ನನ್ನು ಅನಾಥವಾಗಿಸಿದಳು. ಆಕೆಯ ಅಗಲಿಕೆ ನನ್ನ ಹೃದಯವನ್ನು ಅಲುಗಾಡಿಸಿದೆ. ನಾನು, ನನ್ನ ಹೆಂಡತಿ, ಎರಡು ಮಕ್ಕಳು, ಇಬ್ಬರು ಆಪ್ತ ಸಹಾಯಕರು ಕೊರೊನಾದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ತಾಯಿಯವರು ಸೋಂಕಿಗೆ ಒಳಗಾಗಿದ್ದರಿಂದ ಅವರ ಆರೈಕೆಯಲ್ಲಿ ನಾನೇ ತೊಡಗಿದ್ದರಿಂದ ಮತ್ತು ನನ್ನಕ್ಕ ಹಾಗೂ ಅಕ್ಕನ ಮಗ ಚಿಕಿತ್ಸೆಯನ್ನು ಮನೆಯಲ್ಲಿಯೇ ಪಡೆಯುತ್ತಿರುವುದರಿಂದ ಯಾರಿಗೂ ತಿಳಿಸದೆ ಮಾರ್ಗಸೂಚಿಯನ್ವಯ ಅಂತ್ಯಸಂಸ್ಕಾರವನ್ನು ನೆರವೇರಿಸಿರುತ್ತೇನೆ. ನನ್ನ ಮನೆಯ ವಾತಾವರಣ ಸದ್ಯಕ್ಕೆ ಹೆಚ್ಚು ಸೋಂಕುಪೀಡಿತವಾಗಿರುವುದರಿಂದ ಯಾರೂ ಸಹ ಸಾಂತ್ವನ ಹೇಳುವುದಕ್ಕಾಗಿ ಆಗಮಿಸಬಾರದೆಂದು ವಿನಂತಿಸುತ್ತೇನೆ. ಆದಷ್ಟು ಬೇಗ ನನ್ನ ಸಾಮಾಜಿಕ ಕರ್ತವ್ಯಕ್ಕೆ ಹಾಜರಾಗುತ್ತೇನೆಂದು ತಮ್ಮಲ್ಲಿ ಕೋರಿಕೊಳ್ಳುತ್ತೇನೆ. –ಪಿ.ರಾಜೀವ್, ಬಿಜೆಪಿ ಶಾಸಕ

The post ಶಾಸಕ ರಾಜೀವ್ ತಾಯಿ ಕೊರೊನಾದಿಂದ ವಿಧಿವಶ.. ಪುತ್ರನಿಂದ ಭಾವಪೂರ್ಣ ವಿದಾಯ appeared first on News First Kannada.

Source: newsfirstlive.com

Source link