ನಮ್ಮ ದೇಶದಲ್ಲಿ ಕಲಾರಾಧಕರಿಗೇನು ಕಡಿಮೆ ಇಲ್ಲ.. ಅದ್ರಲ್ಲೂ ದಕ್ಷಿಣ ಭಾರತದಲ್ಲಿ ಜನ ಪ್ರಿಯ ನಾಯಕ ನಟರೆಂದರಂತೂ ದೇವರಂತೆ ನೋಡೋರಿಗೆ ಕಡಿಮೆ ಇಲ್ಲ.. ಆದ್ರೆ ಇದನ್ನೇ ದುರಪಯೋಗ ಮಾಡಿಕೊಳ್ಳೋ ಎಷ್ಟೋ ನಾಯಕ ನಟರು ಜಾಹಿರಾತಿನ ಮೂಲಕ ತಾವು ಹಣ ಗಳಿಸೋ ಭರದಲ್ಲಿ ಫ್ಯಾನ್ಸ್ಗಳನ್ನ ತಪ್ಪು ದಾರಿಗೆ ಎಳೆಯುವಂಥ ಸಾಕಷ್ಟು ಉದಾಹರಣೆಗಳು ಕಂಡು ಬರುತ್ತವೆ. ಆನ್ಲೈನ್ ಜೂಜು, ಮದ್ಯದ ಹೆಸರಿನ ಸೋಡಾ, ಪಾನ್ ಮಸಾಲಾ ಮುಂತಾದವುಗಳನ್ನ ಪ್ರಚಾರ ಮಾಡಿ ಜನರನ್ನು ನಂಬಿಸೋದು ಕೂಡ ಸಾಕಷ್ಟು ಕಂಡು ಬರುತ್ತವೆ. ಆದ್ರೆ, ಅದೇ ನಾಯಕ ನಟ ಉತ್ತಮವಾದದ್ದನ್ನು ಮಾಡಿದಾಗ ತಾನು ಇದ್ದಾಗ ಮಾತ್ರವಲ್ಲ ಸಾವನ್ನಪ್ಪಿದ ಬಳಿಕವೂ ಸಮಾಜಕ್ಕೆ ಎಷ್ಟು ದೊಡ್ಡ ಕೊಡುಗೆ ನೀಡಬಹುದು ಅನ್ನೋದಕ್ಕೆ ಡಾ.ರಾಜ್ಕುಮಾರ್ ಅವರ ಕುಟುಂಬವೇ ಸಾಕ್ಷಿ.
ಇದ್ದಾಗ ದೈವೀ ಪುರಷನಂತೆ ಬದುಕಿದ ಡಾ.ರಾಜ್ಕುಮಾರ್ ತಾವು ಸಾವನ್ನಪ್ಪಿದ ಬಳಿಕ ಕೂಡ ನೇತ್ರದಾನ ಮಾಡಿದರು. ಈ ಮೂಲಕವಾಗಿ ಸಾವಿರಾರು ಜನರು ನೇತ್ರದಾನ ಮಾಡಿ ದೃಷ್ಟಿ ಹೀನರಿಗೆ ದೃಷ್ಟಿ ತರುವಂಥ ಮಹತ್ತರವಾದ ಕೆಲಸಕ್ಕೆ ಪ್ರೇರೇಪಣೆ ನೀಡಿದ್ರು. ಅವರ ದಾರಿಯಲ್ಲೇ ಸಾಗಿದ ನೆಚ್ಚಿನ ಪುನೀತ್ ರಾಜ್ಕುಮಾರ್ ಸಹ ತಮ್ಮ ತಂದೆಯಂತೆ ನೇತ್ರದಾನ ಮಾಡಿದ್ದರಿಂದ ಬರೋಬ್ಬರಿ ನಾಲ್ವರಿಗೆ ದೃಷ್ಟಿ ಬಂತು. ಜೊತೆಗೆ ಇನ್ನೂ 10 ಜನರಿಗೆ ಅವರ ನೇತ್ರದ ಅಂಶಗಳನ್ನು ನೀಡಲು ಶೇಖರಿಸಿಡಲಾಗಿದೆ.
ಇಷ್ಟೇ ಅಲ್ಲ.. ಪುನೀತ್ ಅವರನ್ನು ನೋಡಿ ಪ್ರೇರೇಪಣೆ ಕೊಂಡ ಸಾವಿರಾರು ಅಭಿಮಾನಿಗಳು ಇಂದು ಕರ್ನಾಟಕ ರಾಜ್ಯಾದ್ಯಂತ ಸ್ವ ಇಚ್ಛೆಯಿಂದ ಕಣ್ಣಿನ ಆಸ್ಪತ್ರೆಗೆ ತೆರಳಿ ತಮ್ಮ ಸಾವಿನ ನಂತರ ನೇತ್ರ ಪಡೆದುಕೊಳ್ಳುವಂತೆ ದಾನ ಪತ್ರಕ್ಕೆ ಸಹಿ ಹಾಕುತ್ತಿದ್ದಾರೆ. ಇದಕ್ಕೆ ಜನಪ್ರತಿನಿಧಿಗಳು ಕೂಡ ಹೊರತಲ್ಲ.. ಮೊನ್ನೆ ತಾನೆ ಪುನೀತ್ ರಾಜ್ಕುಮಾರ್ ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ, ತಾವು ಮತ್ತು ತಮ್ಮ ಕುಟುಂಬಸ್ಥರು ನೇತ್ರದಾನ ಮಾಡುವುದಾಗಿ ಘೊಷಿಸಿದ್ರು.
68 ಜನರಿಂದ ನೇತ್ರದಾನ
ಮೊನ್ನೆ ಬೆಂಗಳೂರಿನಲ್ಲಿ ತಾವು, ತಮ್ಮ ಪತ್ನಿ ಮತ್ತು ಮಕ್ಕಳು ನೇತ್ರದಾನ ಮಾಡುವುದಾಗಿ ರೇಣುಕಾಚಾರ್ಯ ಘೋಷಿಸಿದ್ರೂ ಅವರ ಪತ್ನಿ ಇಷ್ಟಕ್ಕೇ ಅಷ್ಟಕ್ಕೇ ಸುಮ್ಮನಾಗಿಲ್ಲ. ಇಂದು ದಾವಣಗೆರೆಯ ಹೊನ್ನಾಳಿಯಲ್ಲಿ ನಡೆದ ಪುನೀತ್ ರಾಜ್ಕುಮಾರ್ ಭಾವಪೂರ್ಣ ಶ್ರದ್ಧಾಂಜಲಿ ಮತ್ತು ಸಂಗೀತ ನುಡಿ ನಮನ ಕಾರ್ಯಕ್ರಮದ ವೇಳೆ ಮಾತನಾಡುತ್ತಿದ್ದ ಶಾಸಕರ ಪತ್ನಿ ಸುಮಾ, ನಮ್ಮ ನೇತ್ರ ದಾನಕ್ಕೆ ಕುಟುಂಬದ 68 ಸದಸ್ಯರು ಸಿದ್ಧರಾಗಿದ್ದೀವಿ ಎಂದು ಹೇಳಿದ್ದಾರೆ. ನಟ ಪುನೀತ್ ರಾಜ್ ಕುಮಾರಿಂದ ಪ್ರೇರಣೆಗೊಂಡು ಕಣ್ಣುದಾನ ಮಾಡಲು ನಮ್ಮ ಕುಟುಂಬಸ್ಥರು ಸಿದ್ಧರಾಗಿದ್ದು, ದೇಹ ಮಣ್ಣಲ್ಲಿ ಸೇರುವ ಬದಲು ಅದು ನಾಲ್ಕು ಜನರಿಗೆ ಉಪಯೋಗವಾಗಬೇಕು ಎಂದು ಸುಮಾ ರೇಣುಕಾಚಾರ್ಯ ಹೇಳಿದ್ದಾರೆ.
ಅಷ್ಟೇ ಅಲ್ಲ, ನಮ್ಮದು ಅವಿಭಕ್ತ ಕುಟುಂಬ. ನಮ್ಮ ಕುಟುಂಬದ 68 ಸದಸ್ಯರು ಕಣ್ಣುದಾನ ಮಾಡ್ತೀವಿ ತುಂಬಿದ ಕಾರ್ಯಕ್ರಮದಲ್ಲಿ ಸುಮಾ ಅವರು ಘೋಷಿಸಿದ್ದು, ಮತ್ತಷ್ಟು ಜನರಿಗೆ ಪ್ರೇರಣೆ ಕೊಟ್ಟಿರೋದ್ರಲ್ಲಿ ಸಂಶಯವಿಲ್ಲ.