ಬೆಂಗಳೂರು: ಯಲಹಂಕ ಬಿಜೆಪಿ ಶಾಸಕ ವಿಶ್ವನಾಥ್ ಕೊಲೆ ಸಂಚು ಆರೋಪ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದ್ದು, ಈ ಕುರಿತಂತೆ ಶಾಸಕ ವಿಶ್ವನಾಥ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಕೊಲೆ ಸಂಚಿನ ಆಡಿಯೋ ಮತ್ತು ವಿಡಿಯೋ ವೈರಲ್ ಆಗುತ್ತಿದಂತೆ ಕಾರ್ಯ ಪ್ರವೃತ್ತರಾದ ಪೊಲೀಸರು ಕಾಂಗ್ರೆಸ್ ಪಕ್ಷದ ಮುಖಂಡ ಗೋಪಾಲ ಕೃಷ್ಣನನ್ನು ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಈ ನಡುವೆ ಇಡೀ ಸಂಚಿನ ಹಿಂದಿನ ಮಾಸ್ಟರ್ ಪ್ಲಾನ್ ಕುಳ್ಳ ದೇವರಾಜ್ನದ್ದೆ ಎಂಬ ಶಂಕೆ ಸದ್ಯ ಪೊಲೀಸರಿಗೆ ಎದುರಾಗಿದೆ.
ಯಲಹಂಕ ಭಾಗದಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಗುರುತಿಸಿಕೊಂಡಿದ್ದ ಕುಳ್ಳ ದೇವರಾಜ್ ಮೇಲೆ ಸಾಕಷ್ಟು ಜನರಿಗೆ ಸೈಟ್ ವಿಚಾರದಲ್ಲಿ ವಂಚನೆ ಮಾಡಿದ ಆರೋಪಗಳು ಕೇಳಿ ಬಂದಿದೆ. ಈ ರೀತಿ ಮೋಸ ಹೋದವರು ಶಾಸಕ ವಿಶ್ವನಾಥ್ ಬಳಿ ಹೋಗಿ ಆತನ ವಿರುದ್ಧ ಕ್ರಮಕ್ಕೆ ಮನವಿ ಮಾಡಿ ನ್ಯಾಯ ಕೊಡಿಸಲು ಮನವಿ ಮಾಡಿದ್ದರಂತೆ..
ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಠಾಣೆ ಬಳಿ ತೆರಳಿದ್ದ ಶಾಸಕ ವಿಶ್ವನಾಥ್ ಅವರು, ಕುಳ್ಳ ದೇವರಾಜ್ ವಿರುದ್ಧ ದೂರು ನೀಡಿದ್ರೂ ಕೂಡ ಏಕೆ ಕ್ರಮ ಕೈಗೊಂಡಿಲ್ಲ ಅಂತಾ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದರಂತೆ. ಜನರಿಗೆ ಈತನಿಂದ ಸಾಕಷ್ಟು ಅನ್ಯಾಯವಾಗ್ತಿದ್ರೂ ಕೂಡ ಯಾಕೆ ಸುಮ್ನಿದ್ದೀರಿ ಎಂದು ಯಲಹಂಕ ನ್ಯೂಟೌನ್ ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದರಂತೆ.
ಇದಾದ ಬಳಿಕ ಶಾಸಕ ವಿಶ್ವನಾಥ್ ಅವರಿಗೆ ಹತ್ತಿರ ಆಗೋಕೆ ಕುಳ್ಳ ದೇವರಾಜ್ ಮುಂದಾಗಿದ್ದನಂತೆ. ಶಾಸಕನಿಗೆ ಹತ್ತಿರವಾದರೆ ಅವರ ಸಪೋರ್ಟ್ ಇರುತ್ತೆ ಮತ್ತೊಂದ್ ಕಡೆ ಪೊಲೀಸರೂ ಏನೂ ಮಾಡಲ್ಲ.. ಅಲ್ಲದೇ ರಾಜಕೀಯ ಮುಖಂಡನೊಬ್ಬನ ಫುಲ್ ಸಪೋರ್ಟ್ ನಿಂದ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಎತ್ತರಕ್ಕೆ ಬೆಳೆಯಬಹುದು ಎಂದ ಪ್ಲಾನ್ ಕುಳ್ಳ ದೇವರಾಜ್ನದಾಗಿತ್ತು ಎನ್ನಲಾಗಿದೆ.
ಇದನ್ನೂ ಓದಿ: ವಿಶ್ವನಾಥ್ ವಿರುದ್ಧ ಸುಪಾರಿ ಸಂಚಿನ ಮಾತುಕತೆ ಹೇಗಿತ್ತು? ವೈರಲ್ ವಿಡಿಯೋ ಕಂಪ್ಲೀಟ್ ಸಂಭಾಷಣೆ
ಇದರಂತೆ ಹೇಗಾದ್ರು ಮಾಡಿ ಶಾಸಕ ವಿಶ್ವನಾಥ್ ಅವರಿಗೆ ಹತ್ತಿರವಾಗುಬೇಕು ಎಂದು ಯೋಚಿಸುತ್ತಿದ್ದ ಕುಳ್ಳ ದೇವರಾಜ್ಗೆ ಕಾಣಿಸಿದ್ದು, ವಿಶ್ವನಾಥ್ರ ರಾಜಕೀಯ ಎದುರಾಳಿ ಗೋಪಾಲಕೃಷ್ಣ. ಇಬ್ಬರ ನಡುವೆ ರಾಜಕೀಯ ವಿಚಾರದಲ್ಲಿ ಮೈಮನಸ್ಸು ಇರೋ ಬಗ್ಗೆ ತಿಳಿದಿದ್ದ ಆತ ಇದನ್ನೇ ಉಪಯೋಗಿಸಿಕೊಂಡು ವಿಶ್ವನಾಥ್ಗೆ ಹತ್ತಿರವಾಗಲು ಮುಂದಾಗಿದ್ದನಂತೆ. ಇದೇ ಚಿಂತನೆಯಲ್ಲಿ ಗೋಪಾಲ ಕೃಷ್ಣನನ್ನ ವಿಶ್ವನಾಥ್ ಮುಂದೆ ವಿಲನ್ ಮಾಡೋಕೆ ಪ್ಲಾನ್ ಮಾಡಿ, ಗೋಪಾಲಕೃಷ್ಣ ಪರಿಚಯ ಮಾಡ್ಕೊಂಡು, ಸ್ಕೆಚ್ ಬಗ್ಗೆ ಮಾತನಾಡಿ ವಿಡಿಯೋ ರೆಕಾರ್ಡ್ ಮಾಡಿದ್ದಾನೆ ಎನ್ನಲಾಗಿದೆ. ಇದೇ ವಿಡಿಯೋ ರೆಕಾರ್ಡ್ ಇಟ್ಟುಕೊಂಡು ಶಾಸಕರಿಗೆ ಮತ್ತಷ್ಟು ಹತ್ತಿರ ಆದರೇ ಸಾಕು ಅನ್ನೋ ಚಿಂತನೆಯಲ್ಲಿ ಯೋಜನೆ ಯಶಸ್ವಿಗೊಳಿಸಿದ್ದಾನೆ ಎಂಬ ಶಂಕೆ ಸದ್ಯ ಎದುರಾಗಿದೆ. ಆದರೆ ಸದ್ಯ ತನ್ನ ಪ್ಲಾನ್ನಿಂದನೇ ಕುಳ್ಳ ದೇವರಾಜ್ ಪೊಲೀಸರ ಬಲೆಗೆ ಬಿದ್ದಿದ್ದಾನೆ ಎಂಬ ಮಾತು ಕೇಳಿ ಬಂದಿದೆ.
ಇದನ್ನೂ ಓದಿ: S.R.ವಿಶ್ವನಾಥ್ ಹತ್ಯೆಗೆ ಸ್ಕೆಚ್ ಆರೋಪ; ಕುಳ್ಳ ದೇವರಾಜ್ ವಿರುದ್ಧ ಕೇಳಿಬಂದಿರುವ ಆರೋಪವೇನು..?