ಬೆಂಗಳೂರು: ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಮುಖ್ಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ, ಮೈಸೂರು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಶಿಲ್ಪಾನಾಗ್ ರಾಜೀನಾಮೆ ಯಾವುದೇ ಕಾರಣಕ್ಕೂ ಸ್ವೀಕಾರ ಮಾಡುವುದಿಲ್ಲ ಎಂದಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಎಸ್.ಟಿ ಸೋಮಶೇಖರ್, ಮೈಸೂರು ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಉತ್ತಮವಾಗಿ ಪಾಲಿಕೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ದಕ್ಷ ಅಧಿಕಾರಿ, ಮಾನಸಿಕವಾಗಿ ಕಿರುಕುಳದಿಂದ ರಾಜೀನಾಮೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಆದರೆ ನಾವು ಯಾವುದೇ ಕಾರಣಕ್ಕೂ ಅವರ ರಾಜೀನಾಮೆ ಸ್ವೀಕಾರ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ರೋಹಿಣಿ ಸಿಂಧೂರಿ ನನ್ನನ್ನ ಟಾರ್ಗೆಟ್ ಮಾಡ್ತಿದ್ದಾರೆ: ರಾಜೀನಾಮೆ ನೀಡಿ ಕಣ್ಣೀರಿಟ್ಟ ಶಿಲ್ಪಾನಾಗ್

ನಾನು ಈ ವಿಚಾರವಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ನಾಳೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಮೈಸೂರು ರಿವ್ಯೂಗೆ ಹೋಗುತ್ತಿದ್ದಾರೆ ಬಳಿಕ ಈ ಕುರಿತು ನಿರ್ಧಾರ ಮಾಡಲಾಗುವುದು. ಡಿಸಿ ಕಿರುಕುಳ ವಿಚಾರ ಕಳೆದ ವಾರ ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಮುಖ್ಯ ಕಾರ್ಯದರ್ಶಿಗಳಾದ ರಮಣರೆಡ್ಡಿ ಅವರ ಗಮನಕ್ಕೆ ತರಲಾಗಿದೆ. ನಾಳೆ ನಾನೇ ಮೈಸೂರಿಗೆ ತೆರಳಿ ಎಲ್ಲವನ್ನು ಸರಿ ಮಾಡುವ ಕೆಲಸ ಮಾಡುತ್ತೇನೆ. ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದರು.  ಇದನ್ನೂ ಓದಿ:ಮೇಡಂ ರಾಜೀನಾಮೆ ನೀಡಬೇಡಿ ಎಂದು ಶಿಲ್ಪಾ ನಾಗ್ ಕಾಲು ಹಿಡಿದ ಭದ್ರತಾ ಸಿಬ್ಬಂದಿ

ಏನು ಆರೋಪ?:

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಶಿಲ್ಪಾನಾಗ್ ಆರೋಪಗಳ ಸುರಿಮಳೆ ಗೈದರು.

ಇಂದು ತುರ್ತು ಸುದ್ದಿಗೋಷ್ಠಿ ನಡೆಸಿದ ಶಿಲ್ಪಾನಾಗ್, ಜಿಲ್ಲಾಧಿಕಾರಿಗಳು ಸಿಟಿಗೆ ಒಂದು ಮಾನದಂಡ, ಗ್ರಾಮಾಂತರಕ್ಕೆ ಒಂದು ಮಾನದಂಡ ಮಾಡಿದ್ದಾರೆ. ಸಿಟಿಯಲ್ಲಿ ಕಮಿಷನರ್ ವಿಫಲವಾಗಿದ್ದಾರೆ ಎಂದು ಬಣ್ಣ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಡಳಿತದಿಂದ ನಮಗೆ ಯಾವುದೇ ಸಹಕಾರ ದೊರೆತಿಲ್ಲ. ಸಿಎಸ್‍ಆರ್ ಫಂಡ್‍ನಿಂದ ನಾವು ಕೆಲಸ ಮಾಡುತ್ತಿದ್ದೇವೆ. ಎಲ್ಲರಿಗೂ ಒಂದು ಸಹನೆ ಇರುತ್ತೆ, ಸಹನೆ ಒಡೆದಾಗ ಏನು ಮಾಡಬೇಕು. ಒಬ್ಬರು ಐಎಎಸ್ ಅಧಿಕಾರಿಯಾಗಿ ಮತ್ತೊಬ್ಬ ಅಧಿಕಾರಿ ಮೇಲೆ ದಬ್ಬಾಳಿಕೆ ಮಾಡೋದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು.

ಮಾಧ್ಯಮಗಳಲ್ಲಿ ಪಾಲಿಕೆ ಚೆನ್ನಾಗಿ ಕೆಲಸ ಮಾಡುತ್ತಿದೆ ಎಂಬ ವರದಿ ಬಂದ ಹಿನ್ನೆಲೆಯಲ್ಲಿ ನನ್ನನ್ನ ಟಾರ್ಗೆಟ್ ಮಾಡಲಾಗಿದೆ. ನನ್ನನ್ನ ತುಳಿಯುವ ವ್ಯವಸ್ಥಿತ ಪಿತೂರಿ ನಡೆದಿದ್ದು, ಅವರ ಇಗೋಯಿಂದ ನಮ್ಮ ಕೆಲಸಕ್ಕೆ ಮನ್ನಣೆ ಸಿಗುತ್ತಿಲ್ಲ ಎಂದು ರೋಹಿಣಿ ಸಿಂಧೂರಿ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದರು. ನನಗೆ ಕೆಲಸ ಮಾಡುವ ಆಸಕ್ತಿಯೇ ಇಲ್ಲದಂತಾಗಿದ್ದು, ಚೀಫ್ ಸೆಕ್ರಟರಿ ಸ್ಥಾನ ರಾಜೀನಾಮೆ ನೀಡುತ್ತಿರುವ ವಿಷಯವನ್ನ ತಿಳಿಸಿ ಭಾವುಕರಾದರು.

The post ಶಿಲ್ಪಾನಾಗ್ ರಾಜೀನಾಮೆ ಯಾವುದೇ ಕಾರಣಕ್ಕೂ ಸ್ವೀಕಾರ ಮಾಡಲ್ಲ: ಎಸ್.ಟಿ ಸೋಮಶೇಖರ್ appeared first on Public TV.

Source: publictv.in

Source link