ಶಿಲ್ಪಾ ಹೆಸರಿಗೆ ಮಸಿ ಬಳೆಯೋಕೆ ಕಾಶಿಫ್ ಖಾನ್ ನಡೆಸಿದ್ರು ಕುತಂತ್ರ? ಅಸಲಿ ವಿಚಾರ ತೆರೆದಿಟ್ಟ ನಟಿ | Shilpa Shetty Reacts On One and Half Crore Scam case and Fir Against her


ಶಿಲ್ಪಾ ಹೆಸರಿಗೆ ಮಸಿ ಬಳೆಯೋಕೆ ಕಾಶಿಫ್ ಖಾನ್ ನಡೆಸಿದ್ರು ಕುತಂತ್ರ? ಅಸಲಿ ವಿಚಾರ ತೆರೆದಿಟ್ಟ ನಟಿ

ರಾಜ್​ ಕುಂದ್ರಾ, ಶಿಲ್ಪಾ ಶೆಟ್ಟಿ

ಶಿಲ್ಪಾ ಶೆಟ್ಟಿ (Shilpa Shetty) ತಾವು ಮಾಡದೇ ಇರುವ ತಪ್ಪಿಗೆ ಹಿಂಸೆ ಅನುಭವಿಸುತ್ತಿದ್ದಾರೆ. ಪತಿ ರಾಜ್​ ಕುಂದ್ರಾ (Raj Kundra) ಡ್ರಗ್ಸ್​ ಕೇಸ್​ನಲ್ಲಿ ಸಿಕ್ಕಿ ಬಿದ್ದಿದ್ದರು. ಇದರಿಂದ ಅವರು ಕಿರಿಕಿರಿ ಅನುಭವಿಸುವಂತಾಯಿತು. ತಲೆ ಎತ್ತಿಕೊಂಡು ಓಡಾಡದೆ ಇರುವ ಪರಿಸ್ಥಿತಿ ಬಂದೊದಗಿತ್ತು. ಈಗ ಶಿಲ್ಪಾ ಹೆಸರಿಗೆ ಮಸಿ ಬಳಿಯೋಕೆ ದೊಡ್ಡ ಕುತಂತ್ರ ನಡೆದಿದೆಯೇ ಎನ್ನುವ ಅನುಮಾನ ಮೂಡುವಂತಾಗಿದೆ. ಶಿಲ್ಪಾ ವಿರುದ್ಧ ಕೇಳಿ ಬಂದ ಒಂದೂವರೆ ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಈ ಬಗ್ಗೆ ಶಿಲ್ಪಾ ಎಲ್ಲವನ್ನೂ ಬರೆದುಕೊಂಡಿದ್ದಾರೆ.

ಶಿಲ್ಪಾ ಶೆಟ್ಟಿ ಅವರು ಫಿಟ್ನೆಸ್​ ವಿಚಾರದಲ್ಲಿ ತಜ್ಞರಾಗಿದ್ದಾರೆ. ಇತರರಿಗೂ ಅವರು ಯೋಗ ಹೇಳಿಕೊಡುತ್ತಾರೆ. ಬೇರೆ ಬೇರೆ ನಗರದಲ್ಲಿ ಫಿಟ್​​ನೆಸ್​ ಕೇಂದ್ರ ಆರಂಭಿಸಲು ಆಸಕ್ತಿ ತೋರಿಸಿದ್ದರು ಎನ್ನಲಾಗಿತ್ತು. ಅದಕ್ಕಾಗಿ ಕೆಲವು ಉದ್ಯಮಿಗಳಿಂದ 1.5 ಕೋಟಿ ರೂ. ಹಣ ಪಡೆದು, ಫಿಟ್ನೆಸ್​ ಕೇಂದ್ರವನ್ನೂ ಆರಂಭಿಸಿಲ್ಲ, ಹಣವನ್ನೂ ವಾಪಸ್​ ನೀಡಿಲ್ಲ ಎಂಬ ಆರೋಪ ಇತ್ತು. ಈ ಸಂಬಂಧ ಶಿಲ್ಪಾ ಶೆಟ್ಟಿ ಮತ್ತು ರಾಜ್​ ಕುಂದ್ರಾ ವಿರುದ್ಧ ಕೇಸ್​ ದಾಖಲಿಸಿದ್ದಾರೆ. ಆದರೆ ಇದರ ಅಸಲಿಯತ್ತನ್ನು ನಟಿ ತೆರೆದಿಟ್ಟಿದ್ದಾರೆ.

ಈ ಬಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಅವರು ಮಾಹಿತಿ ನೀಡಿದ್ದಾರೆ. ಅಸಲಿಗೆ ಶಿಲ್ಪಾ ಶೆಟ್ಟಿ ಅವರದ್ದು ಎನ್ನಲಾದ SFL ಫಿಟ್​ನೆಸ್​ ಕೇಂದ್ರಕ್ಕೂ ಶಿಲ್ಪಾಗೂ ಸಂಬಂಧವೇ ಇಲ್ಲವಂತೆ. ‘SFL ಫಿಟ್ನೆಸ್ ಇದು ಕಾಶಿಫ್ ಖಾನ್ ನಡೆಸುತ್ತಿರುವ ಉದ್ಯಮ. ಅವರು ದೇಶಾದ್ಯಂತ SFL ಫಿಟ್‌ನೆಸ್ ಜಿಮ್‌ಗಳನ್ನು ತೆರೆಯಲು SFL ಬ್ರಾಂಡ್‌ನ ಹಕ್ಕುಗಳನ್ನು ತೆಗೆದುಕೊಂಡಿದ್ದರು. ಎಲ್ಲಾ ವ್ಯವಹಾರಗಳು ಅವರಿಂದ ನಡೆಯುತ್ತಿವೆ. ಅವರ ಯಾವುದೇ ವಹಿವಾಟಿನ ಬಗ್ಗೆ ನಮಗೆ ತಿಳಿದಿಲ್ಲ. ಈ ವ್ಯವಹಾರದಲ್ಲಿ ನಾವು ಅವರಿಂದ ಒಂದು ರೂಪಾಯಿಯನ್ನು ಪಡೆದಿಲ್ಲ. ಎಲ್ಲಾ ಫ್ರಾಂಚೈಸಿಗಳ ವ್ಯವಹಾರವನ್ನು ಕಾಶಿಫ್ ನೋಡಿಕೊಳ್ಳುತ್ತಿದ್ದಾರೆ. ಕಂಪನಿಯು 2014 ರಲ್ಲಿ ಮುಚ್ಚಿದೆ. ಈಗ ಅದರ ಸಂಪೂರ್ಣ ಜವಾಬ್ದಾರಿ ಕಾಶಿಫ್ ಖಾನ್ ನಿರ್ವಹಿಸುತ್ತಿದ್ದಾರೆ’ ಎಂದಿದ್ದಾರೆ ಶಿಲ್ಪಾ.

‘ಕಳೆದ 28 ವರ್ಷಗಳಿಂದ ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದೇನೆ. ಈಗ ನನ್ನ ಹೆಸರು ಮತ್ತು ಖ್ಯಾತಿಗೆ ಹಾನಿಯಾಗುತ್ತಿದೆ. ಭಾರತದಲ್ಲಿ ಕಾನೂನು ಪಾಲಿಸುವ ಹೆಮ್ಮೆಯ ಪ್ರಜೆಯಾಗಿ ನನ್ನ ಹಕ್ಕುಗಳನ್ನು ರಕ್ಷಿಸಬೇಕು. ಕೃತಜ್ಞತೆಯೊಂದಿಗೆ, ಶಿಲ್ಪಾ ಶೆಟ್ಟಿ ಕುಂದ್ರಾ,’ ಎಂದು ಅವರು ಪತ್ರ ಮುಗಿಸಿದ್ದಾರೆ. ಅಂದಹಾಗೆ, ಶಿಲ್ಪಾ ಹೆಸರಿಗೆ ಮಸಿ ಬಳಿಯಬೇಕು ಎನ್ನುವ ಕಾರಣಕ್ಕೆ ಈ ರೀತಿಯ ಕುತಂತ್ರ ನಡೆದಿದೆಯೇ ಎನ್ನುವ ಅನುಮಾನ ಮೂಡಿದ್ದು, ತನಿಖೆಯಿಂದ ಅಸಲಿ ವಿಚಾರ ಹೊರಬರಬೇಕಿದೆ.

ಇದನ್ನೂ ಓದಿ: Shilpa Shetty:​ ಖ್ಯಾತ ನಟನನ್ನು ಅನುಕರಿಸಿ ಸುದ್ದಿಯಾದ ಶಿಲ್ಪಾ ಶೆಟ್ಟಿ; ಏನಿದು ಸಮಾಚಾರ? ವಿಡಿಯೋ ನೋಡಿ

ಫಿಟ್ನೆಸ್​ ಹೇಳಿಕೊಡ್ತೀವಿ ಅಂತ 1.5 ಕೋಟಿ ರೂ. ಮೋಸ ಮಾಡಿದ ಶಿಲ್ಪಾ ಶೆಟ್ಟಿ, ರಾಜ್​ ಕುಂದ್ರಾ? ಕೇಸ್​ ದಾಖಲು

TV9 Kannada


Leave a Reply

Your email address will not be published. Required fields are marked *