ಶಿವಮೊಗ್ಗ: ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಮಳೆಯ ಆರ್ಭಟಕ್ಕೆ ನದಿ ಹಳ್ಳ ಕೊಳ್ಳಗಳಲ್ಲಿ ಹೊಸ ನೀರು ಹರಿಯತೊಡಗಿದೆ. ಜಲಾಶಗಳ ಒಡಲು ಮಂದಗತಿಯಲ್ಲಿ ಏರತೊಡಗಿದೆ. ಹೊಸನಗರ ಹಾಗೂ ತೀರ್ಥಹಳ್ಳಿ ತಾಲೂಕು ಭಾಗಗಳಲ್ಲಿ ವ್ಯಾಪಕ ಮಳೆ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಜನರು ಮನೆಯಿಂದ ಹೊರಬಾರದ ಪರಿಸ್ಥಿತಿ ನಿರ್ಮಾಣವಾಗಿದೆ.

ಹುಲಿಕಲ್​​ನಲ್ಲಿ 126 ಮಿಲಿಮೀಟರ್, ಮಾಣಿಯಲ್ಲಿ 91 ಮಿ.ಮೀ, ಮಾಸ್ತಿಕಟ್ಟೆಯಲ್ಲಿ 111 ಮಿ.ಮೀ, ಚಕ್ರ 92 ಮಿ.ಮೀ ಹಾಗೂ ಸಾವೆಹಕ್ಲುವಿನಲ್ಲಿ 96 ಮಿಲಿಮೀಟರ್ ಮಳೆಯಾಗಿದೆ. ಲಿಂಗನಮಕ್ಕಿ ಯೋಜನಾ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಕ್ಕೆ 13173 ಕ್ಯೂಸೆಕ್ ನೀರು ಹರಿದುಬರುತ್ತಿದೆ. ಗರಿಷ್ಠ 1819 ಅಡಿ ನೀರಿನ ಮಟ್ಟ ಹೊಂದಿರುವ ಲಿಂಗನಮಕ್ಕಿ ಡ್ಯಾಂನ ನೀರಿನ ಮಟ್ಟ ಇಂದು 1776.6 ಅಡಿಗೆ ತಲುಪಿದೆ. ಕಳೆದ ವರ್ಷ ಇದೇ ದಿನ ಡ್ಯಾಂನಲ್ಲಿ 1759.60 ಅಡಿ ನೀರು ಸಂಗ್ರಹಗೊಂಡಿತ್ತು.

ಇನ್ನು ಭದ್ರಾ ಹಿನ್ನೀರಿನ ಪ್ರದೇಶದಲ್ಲೂ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು, ಜಲಾಶಯಕ್ಕೆ 6075 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಗರಿಷ್ಟ186 ಅಡಿ ನೀರಿನ ಮಟ್ಟ ಹೊಂದಿರುವ ಭದ್ರಾ ಡ್ಯಾ ನಲ್ಲಿ 141.2 ಅಡಿ ನೀರು ಸಂಗ್ರಹಗೊಂಡಿದೆ. ಶೃಂಗೇರಿ ತೀರ್ಥಹಳ್ಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಗಾಜನೂರಿನ ತುಂಗಾ ಡ್ಯಾಂ ಭರ್ತಿಯಾಗುವತ್ತ ಸಾಗಿದೆ. ಡ್ಯಾನಿಂದ 7000 ಕ್ಯೂಸೆಕ್ ನೀರು ಹೊರಬಿಡಲಾಗಿದೆ.

The post ಶಿವಮೊಗ್ಗದಲ್ಲಿ ಭರ್ಜರಿ ಮಳೆ, ಭರ್ತಿಯಾಗುತ್ತಿರುವ ಜಲಾಶಯಗಳು appeared first on News First Kannada.

Source: newsfirstlive.com

Source link