ಶಿವಮೊಗ್ಗ: ಉದ್ಯಮಿಯೊಬ್ಬರ ಮನೆ ಮೇಲೆ ಪೆಟ್ರೋಲ್ ಬಾಂಬ್ ಹಾಕಿ, ಮನೆಯಲ್ಲಿದ್ದವರನ್ನು ಹತ್ಯೆ ಮಾಡುವ ಬೆದರಿಕೆ ಒಡ್ಡಿದ ಪ್ರಕರಣ ಸಂಬಂಧ ಪ್ರಮುಖ ಆರೋಪಿಯನ್ನು ಬಂಧಿಸಲಾಗಿದೆ.
ಆರೋಪಿ ವಿರುದ್ಧ ಶಿವಮೊಗ್ಗದ ವಿವಿಧ ಠಾಣೆಯಲ್ಲಿ 53 ಪ್ರಕರಣ ದಾಖಲಾಗಿವೆ. ಅಲ್ಲದೆ ರಾಜ್ಯದ ವಿವಿಧೆಡೆಯೂ ಈತನ ವಿರುದ್ಧ ಪ್ರಕರಣಗಳು ದಾಖಲಾಗಿದೆ.
ಏನಿದು ಪ್ರಕರಣ..? ಆರೋಪಿಯ ಹಿನ್ನೆಲೆ ಏನು..?
ಶಿವಮೊಗ್ಗದ ಶಾದ್ ನಗರದ ಉದ್ಯಮಿಯೊಬ್ಬರ ಮನೆ ಮೇಲೆ ಅಕ್ಟೋಬರ್ 20 ರ ರಾತ್ರಿ ಕಲ್ಲು ತೂರಾಟ ನಡೆಸಲಾಗಿತ್ತು. ಮನೆ ಗೇಟು, ಬಾಗಿಲಿಗೆ ಕಲ್ಲು ಬಿದ್ದಿದ್ದವು. ಇದಾಗಿ ಕೆಲವೇ ಹೊತ್ತಿನಲ್ಲಿ ಉದ್ಯಮಿಗೆ ವಾಟ್ಸಾಪ್ನಲ್ಲಿ ಕರೆ ಮಾಡಿದ್ದ ದುಷ್ಕರ್ಮಿಯೊಬ್ಬ, ಹಣಕ್ಕೆ ಬೇಡಿಕೆಯಿಟ್ಟಿದ್ದ. ಒಂದು ವೇಳೆ ಹಣ ಕೊಡದಿದ್ದರೆ ಮನೆ ಮೇಲೆ ಪಟ್ರೋಲ್ ಬಾಂಬ್ ದಾಳಿ ಮಾಡಲಾಗುತ್ತದೆ. ಮನೆಯಲ್ಲಿದ್ದವರ ಕೊಲೆ ಮಾಡುವುದಾಗಿ ಬೆದರಿಸಿದ್ದ.
ಮುಂಬೈನಲ್ಲಿ ಸಿಕ್ಕ ಆರೋಪಿ..
ಪ್ರಕರಣ ತನಿಖೆಗೆ ಶಿವಮೊಗ್ಗ ಗ್ರಾಮಾಂತರ ಠಾಣೆ ಇನ್ ಸ್ಪೆಕ್ಟರ್ ಸಂಜೀವ್ ಕುಮಾರ್ ಮತ್ತು ಕುಂಸಿ ಠಾಣೆ ಇನ್ ಸ್ಪೆಕ್ಟರ್ ಅಭಯ ಪ್ರಕಾಶ್ ಸೋಮನಾಳ್ ಅವರ ನೇತೃತ್ವದಲ್ಲಿ ಎರಡು ತಂಡ ರಚಿಸಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಮುಂಬೈನಲ್ಲಿ ಪ್ರಮುಖ ಆರೋಪಿ ಬಚ್ಚಾ ಅಲಿಯಾಸ್ ಬಚ್ಚನ್ ಅಲಿಯಾಸ್ ಜಮೀರ್ (29) ಎಂಬಾತನನ್ನು ಬಂಧಿಸಿದ್ದಾರೆ.
ಮತ್ತಿಬ್ಬರು ಆರೋಪಿಗಳಾದ ಶಿವಮೊಗ್ಗ ಬಸವನಗುಡಿಯ ಮಹಮದ್ ತೌಹಿದ್ (19), ಮೊಹಮದ್ ಬಿಲಾಲ್ (21) ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಮೂರು ಮೊಬೈಲ್, ಒಂದು ಕಾರು, ಮೂರು ಇಂಟರ್ ನೆಟ್ ಡಾಂಗಲ್ಅನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೊಲೆ ಬೆದರಿಕೆಯೊಡ್ಡಿ ಹಣ ವಸೂಲಿ ಮಾಡುವ ಕೃತ್ಯದಲ್ಲಿ ಬಚ್ಚನ್ ಹೆಸರು ಆಗಾಗ ಕೇಳಿ ಬರುತಿತ್ತು. ರಾಜ್ಯದ ವಿವಿಧೆಡೆ ಈತನ ವಿರುದ್ಧ ಕೊಲೆ ಬೆದರಿಕೆ, ಮಾರಣಾಂತಿಕ ಹಲ್ಲೆ, ವಂಚನೆ, ಶಸ್ತ್ರಾಸ್ತ್ರ ಕಾಯ್ದೆ, ದರೋಡೆ ಪ್ರಕರಣಗಳು ದಾಖಲಾಗಿವೆ. ಬಚ್ಚನ್ ಅಲಿಯಾಸ್ ಬಚ್ಚಾ ಅಲಿಯಾಸ್ ಜಮೀರ್ ವಿರುದ್ಧ ಶಿವಮೊಗ್ಗದ ವಿವಿಧ ಠಾಣೆಗಳಲ್ಲಿ 53 ಪ್ರಕರಣ ದಾಖಲಾಗಿವೆ.
ತುಂಗಾನಗರ ಠಾಣೆಯಲ್ಲಿ 50 ಪ್ರಕರಣ, ದೊಡ್ಡಪೇಟೆ ಠಾಣೆಯಲ್ಲಿ ಒಂದು ಪ್ರಕರಣ, ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿವೆ. ಬಚ್ಚನ್ ವಿಚಾರಣೆ ನಡೆಯುತ್ತಿದ್ದು, ವಿವಿಧ ಪ್ರಕರಣಗಳ ಕುರಿತು ಮಹತ್ವದ ವಿಚಾರಗಳು ತಿಳಿದು ಬರುವ ಸಾಧ್ಯತೆ ಇದೆ.