ಶಿವಮೊಗ್ಗ ಏರ್​​ಪೋರ್ಟ್​​ಗೆ ಬಿಎಸ್​ವೈ ಹೆಸರಿಡುವ ವಿಚಾರವಾಗಿ ಮುಖ್ಯಮಂತ್ರಿ ಬೊಮ್ಮಾಯಿಗೆ ಪತ್ರ ಬರೆದ ಯಡಿಯೂರಪ್ಪ | Yeddyurappa writes to Chief Minister Bommai on naming BSY as Shimoga Airport


ಶಿವಮೊಗ್ಗ ಏರ್​​ಪೋರ್ಟ್​​ಗೆ ಬಿಎಸ್​ವೈ ಹೆಸರಿಡುವ ವಿಚಾರವಾಗಿ ಮುಖ್ಯಮಂತ್ರಿ ಬೊಮ್ಮಾಯಿಗೆ ಪತ್ರ ಬರೆದ ಯಡಿಯೂರಪ್ಪ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ರಾಜ್ಯ ಸರ್ಕಾರ ಶಿವಮೊಗ್ಗದಲ್ಲಿನ ವಿಮಾನ (Airport) ನಿಲ್ದಾಣಕ್ಕೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಹೆಸರನ್ನು ನಾಮಕರಣ ಮಾಡಲು ನಿರ್ಧಿಸಿದ ಬೆನ್ನಲೇ ಸ್ವತಃ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಂದ ವಿರೋಧ ವ್ಯಕ್ತವಾಗಿದೆ. ಈ ಕುರಿತಾಗಿ ಅವರು ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ. ಶಿವಮೊಗ್ಗ ಜಿಲ್ಲೆಯ ಬಹುದಿನದ ಕನಸಾದ ವಿಮಾನ ನಿಲ್ದಾಣ ನನಸಾಗುತ್ತಿದೆ. ಸೋಗಾನೆಯಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ವಿಮಾನ ನಿಲ್ದಾಣದ ಕಾಮಗಾರಿಯನ್ನು ಇತ್ತೀಚೆಗೆ ತಾವು ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಲು ಅಗತ್ಯವಾದ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವುದಾಗಿ ತಿಳಿಸಿರುವುದಕ್ಕೆ ತಮಗೆ ಧನ್ಯವಾದಗಳು. ಈ ಹೊಸ ವಿಮಾನ ನಿಲ್ದಾಣಕ್ಕೆ ನನ್ನ ಹೆಸರನ್ನಿಡುವುದಾಗಿ ತಾವು ಘೋಷಿಸಿರುತ್ತೀರಿ. ತಮ್ಮ ಈ ವಿಶೇಷವಾದ ಪ್ರೀತಿ, ಅಭಿಮಾನಕ್ಕೆ ಧನ್ಯವಾದಗಳು. ಇದಕ್ಕಾಗಿ ಜಿಲ್ಲೆಯ ಎಲ್ಲ ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಸಂಘಸಂಸ್ಥೆಗಳು ಹಾಗೂ ಎಲ್ಲ ಮುಖಂಡರುಗಳಿಗೆ ನನ್ನ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.

ರಾಷ್ಟ್ರದ ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಅನೇಕ ಮಹನೀಯರು ಹಾಗೂ ದೇಶಭಕ್ತರಿದ್ದಾರೆ. ಅವರು ನೀಡಿರುವ ಕೊಡುಗೆಗೆ ಹೋಲಿಸಿದಾಗ ನನ್ನದೊಂದು ಅಳಿಲು ಸೇವೆ ಮಾತ್ರ ಹಾಗೂ ನನ್ನನ್ನು ಸತತವಾಗಿ ಬೆಂಬಲಿಸಿ ಸಲುಹಿದ ಜಿಲ್ಲೆಯ ಜನತೆಗೆ ಸೇವೆ ಮಾಡಿದ್ದೇನೆಂಬ ಧನ್ಯತಾಭಾವ ನನ್ನದು. ಈ ಹಿನ್ನೆಲೆಯಲ್ಲಿ ನೂತನ ವಿಮಾನ ನಿಲ್ದಾಣಕ್ಕೆ ನನ್ನ ಹೆಸರು ಸೂಕ್ತವಲ್ಲವೆಂದು ಭಾವಿಸುತ್ತೇನೆ. ಆದುದರಿಂದ, ತಮ್ಮ ಈ ನಿರ್ಧಾರವನ್ನು ಪುನರ್‌ ಪರಿಶೀಲಿಸಿ, ಸೂಕ್ತ ವೇದಿಕೆಯಲ್ಲಿ ಚರ್ಚಿಸಿ, ರಾಷ್ಟ್ರದ, ನಾಡಿನ ಅಭಿವೃದ್ಧಿಗೆ ಹಾಗೂ ಇತಿಹಾಸಕ್ಕೆ ಕೊಡುಗೆ ನೀಡಿದಂತಹ ಮಹನೀಯರ ಹೆಸರನ್ನು ಈ ಹೊಸ ವಿಮಾನ ನಿಲ್ದಾಣಕ್ಕೆ ನಾಮಕರಣ ಮಾಡಬೇಕೆಂದು ಕೋರುತ್ತೇನೆ ಎಂದು ಸಿಎಂಗೆ ಪತ್ರದ ಮೂಲಕ ಮಾಜಿ ಸಿಎಂ ಯಡಿಯೂರಪ್ಪ ಮನವಿ ಮಾಡಿದ್ದಾರೆ.

TV9 Kannada


Leave a Reply

Your email address will not be published. Required fields are marked *