ಶಿವಮೊಗ್ಗ: ಹಸುಗಳು ಹಾಲು ಕೊಡುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ರೈತ | Man filed case aginst his cow for not giving milk


ಶಿವಮೊಗ್ಗ: ಹಸುಗಳು ಹಾಲು ಕೊಡುತ್ತಿಲ್ಲ ಎಂದು ಪೊಲೀಸರಿಗೆ ದೂರು ನೀಡಿದ ರೈತ

ಸಾಂದರಭಿಕಕ ಚಿತ್ರ

ಶಿವಮೊಗ್ಗ: ವ್ಯಕ್ತಿಗಳ ನಡುವೆ ಅಥವಾ ಗುಂಪುಗಳ ನಡುವೆ ಜಗಳವಾದರೆ ಪೊಲೀಸರಿಗೆ ದೂರು ನೀಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ರೈತ ತನ್ನ ಹಸುಗಳು ಹಾಲು ಕೊಡುತ್ತಿಲ್ಲ ಅವುಗಳಿಗೆ ನೀವೇ ಬುದ್ದಿ ಹೇಳಿ ಎಂದು  ತನ್ನ ನಾಲ್ಕು ಹಸುಗಳ ವಿರುದ್ಧವೇ  ಪೊಲೀಸರಿಗೆ ದೂರು ನೀಡಿದ ವಿಚಿತ್ರ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಬಾಳೆಹೊನ್ನೂರು ಬಳಿ ಈ ಘಟನೆ ನಡೆದಿದೆ. ಬಾಳೆಹೊನ್ನೂರು ಬಳಿಯ ಸಿದ್ದೀಪುರ ಗ್ರಾಮದ 40 ವರ್ಷದ ರೈತ ರಾಮಯ್ಯ ಎನ್ನುವವರು ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ನಮ್ಮ ಮನೆಯಲ್ಲಿರುವ ನಾಲ್ಕು ಹಸುಗಳನ್ನು ಸರಿಯಾಗಿ ಮೇಯಲು ಕರೆದುಕೊಂಡು ಹೋದರೂ ಹಾಲು ಕೊಡುತ್ತಿಲ್ಲ. ಹಸುಗಳನ್ನು ಠಾಣೆಗೆ ಕರೆಸಿ ಬುದ್ಧಿ ಹೇಳಿ ನ್ಯಾಯ ಕೊಡಿಸಬೇಕು ಎಂದು ದೂರು ನೀಡಿದ್ದಾರೆ.

ದೂರಿನಲ್ಲಿ ರಾಮಯ್ಯ ಅವರು ಸಿದ್ದೀಪುರ ಗ್ರಾಮದಲ್ಲಿ ನನ್ನ ಜಮೀನಿನಲ್ಲಿ ವ್ಯವಸಾಯ ಮಾಡಿಕೊಂಡು ವಾಸವಾಗಿದ್ದೇನೆ. ವ್ಯವಸಾಯದ ಜತೆಗೆ ಜೀವನೋಪಾಯಕ್ಕಾಗಿ ನಾಲ್ಕು ಹಸುಗಳನ್ನು ಸಾಕಿಕೊಂಡಿದ್ದೇನೆ. ಅವುಗಳನ್ನು ಪ್ರತಿದಿನ ಬೆಳಗ್ಗೆ 8 ಗಂಟೆಯಿಂದ 11 ಗಂಟೆಯವರೆಗೆ ಮೇಯಿಸಲು ಹಸಿರು ಹುಲ್ಲುಗಳಿರುವ ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ. ಬೆಳಗ್ಗೆ ಮಾತ್ರವಲ್ಲದೆ ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಮೇಯಿಸಲು ಕರೆದೊಯ್ಯುತ್ತೇನೆ. ಹೀಗಿದ್ದರೂ ಪ್ರತಿದಿನ ಹಸುಗಳು ನನಗೆ ಹಾಗೂ ನನ್ನ ಹೆಂಡತಿ ರತ್ನಮ್ಮಗೆ ಹಾಲು ಕರೆಯಲು ಕೊಡದೆ ಒದೆಯುತ್ತಿವೆ.

ಹೀಗಾಗಿ ತಾವು ತನ್ನ ನಾಲ್ಕು ಹಸುಗಳನ್ನು ಪೊಲೀಸ್ ಠಾಣೆಗೆ ಕರೆಸಿ ನಾಲ್ಕು ಬುದ್ದಿ ಮಾತು ಹೇಳಿ ನ್ಯಾಯ ಒದಗಿಸಿಕೊಡಬೇಕು. ಅದೇ ರೀತಿ ತನ್ನ ಹಸುಗಳಿಗೆ ಸೂಕ್ತ ಬಂದೋಬಸ್ತ್ ಒದಗಿಸಿಕೊಡಬೇಕು ಎಂದು ಬಾಳೆಹೊನ್ನೂರಿನ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ರೈತನ ದೂರು ನೋಡಿ ಪೊಲೀಸರೇ ಆಶ್ಚರ್ಯಚಕಿತರಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ತನ್ನ ಹಸುಗಳು ಹಾಲು ಕೊಡುತ್ತಿಲ್ಲ ಎಂದು ರೈತ ಪೊಲೀಸರಿಗೆ ದೂರು ನೀಡಿದ ಪ್ರತಿ ವೈರಲ್ ಆಗಿದ್ದು, ನೆಟ್ಟಿಗರು ಇದೆಂಥಾ ರೀತಿಯ ದೂರು? ಎನ್ನುತ್ತಿದ್ದಾರೆ.

case against cow

ರೈತ ಬರೆದ ಪತ್ರದ ಪ್ರತಿ

TV9 Kannada


Leave a Reply

Your email address will not be published. Required fields are marked *