ಬೆಂಗಳೂರು: ಕನ್ನಡತಿ ಧಾರಾವಾಹಿ ಖ್ಯಾತಿಯ ನಟಿ ರಂಜಿನಿ ರಾಘವನ್‍ರವರು ಶೂಟಿಂಗ್ ಮುಗಿಸಿ ಬರುತ್ತಿದ್ದ ವೇಳೆ ನಿನ್ನೆ ರಾತ್ರಿ ತಮಗಾದ ಅನುಭವವನ್ನು ವೀಡಿಯೋ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವೀಡಿಯೋದಲ್ಲಿ ನಟಿ ರಂಜಿನಿ ಶಂಕರ್ ಕತ್ತಲಿನಲ್ಲಿ ಗೂಡ್ಸ್ ಗಾಡಿ ಹತ್ತಿ, ಸುಂದರವಾಗಿ ಕಾಣಿಸುತ್ತಿದ್ದ ಲೈಟಿಂಗ್‍ನನ್ನು ತೋರಿಸುತ್ತಾ, ಈ ವೀಡಿಯೋವನ್ನು ನೋಡುತ್ತಿರುವವರಿಗೆ ನನ್ನ ತಲೆಯಲ್ಲಿ ಏನು ಓಡುತ್ತಿದೆ ಎಂಬುವುದನ್ನು ಲೇಟಾಗಿ ಹೇಳುತ್ತೇನೆ. ನಾನು ಒಳಗೆ ಭಯದಿಂದ ಒದ್ದಾಡುತ್ತಿದ್ದೇನೆ. ಆದರೆ ಮೇಲ್ನೋಟಕ್ಕೆ ಹೊರಗಡೆ ನಗುತ್ತಿದ್ದೇನೆ ಎಂದು ಹೇಳಿದ್ದಾರೆ.

ನಂತರ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಈ ವೀಡಿಯೋವನ್ನು ಶೇರ್ ಮಾಡಿಕೊಂಡಿದ್ದು, ಇದು ನೈಜ ಘಟನೆ ಆಧರಿತ ಥ್ರಿಲ್ಲರ್ ಕತೆ! ಇದರಲ್ಲಿ ಬರುವ ಎಲ್ಲಾ ಪಾತ್ರಗಳು ಕಾಲ್ಪನಿಕವಲ್ಲ, ನಮ್ಮ ಅನುಭವ. ಇದಕ್ಕೆ ಈ ವೀಡಿಯೋ ಸಾಕ್ಷಿ ಎಂದು ನಟಿ ರಂಜಿನಿ ಕ್ಯಾಪ್ಷನ್‍ನಲ್ಲಿ ಬರೆಯುವ ಮೂಲಕ ಕಥೆ ಹೇಳಲು ಆರಂಭಿಸಿದ್ದಾರೆ. ಇದನ್ನು ಓದಿ: ಕ್ರೇಜಿಸ್ಟಾರ್‌ಗೆ 59ನೇ ಜನ್ಮದಿನದ ಸಂಭ್ರಮ – ಪ್ರೀತಿಯ ಅಪ್ಪನಿಗೆ ಮನೋರಂಜನ್‍ನಿಂದ ವಿಶ್

ರಂಜಿನಿ ಹೇಳಿದ್ದು ಏನು?
ಜೊತೇಲಿದ್ದೋನಿಗೆ ನನ್ನ ಭಯ ಗೊತ್ತಾಗ್ದೇ ಇರ್ಲಿ ಅಂತ ಇಂಗ್ಲೀಶ್‍ನಲ್ಲಿ ಮಾತಾಡಿರೋದು, ಬೈಕೋಬೇಡಿ!

ಏನಾಯ್ತು ಗೊತ್ತಾ? ಇವತ್ತು ರಾಮೋಜಿ ಫಿಲ್ಮ್ ಸಿಟಿಯಲ್ಲಿ ಶೂಟಿಂಗ್ ಬೇಗ ಮುಗಿದಿತ್ತು. ನಮ್ ಟೀಮ್ ದಿನ್ನೂ ಶೂಟ್ ಮುಗ್ದಿರ್ಲಿಲ್ಲ (ಅಂದ್ರೆ ನಮ್ ಸೀನ್ಸ್ ಮುಗ್ದಿತ್ತು ಪ್ಯಾಕ್ ಅಪ್ ಆಗಿರ್ಲಿಲ್ಲ) ಎಲ್ಲಾರೂ ಬರುವುದಕ್ಕೆ ಇನ್ನೂ ಸಮಯ ಇತ್ತು, ಒಟ್ಟಿಗೆ ವಾಪಸ್ ಹೋಟೆಲ್‍ಗೆ ಹೋಗೋಕೆ ಕಾಯ್ತಾ ಹಾಗೇ ಏನೋ ಮಾತಾಡ್ತಾ ಕೂತಿದ್ದೆ. “ಹೇ ಗಾಡಿ ಇದೆ ಬರ್ತೀರಾ?” ಎಂದು ಕೃಷ್ಣರಾಜ್ ಕೇಳಿದರು. ನೋಡಿದರೆ ಒಂದು ಲಗೇಜ್ ಗಾಡಿ ನಿಂತಿತ್ತು, ಇದರಲ್ಲಿ ಹೋಗೋಣ ಮಜಾ ಇರುತ್ತೆ ಅಂತ ನಾನು ಏನೂ ಯೋಚನೆ ಮಾಡದೇ ಗಾಡಿ ಹತ್ತಿದೆ.

ಅಣ್ಣಾಯ್ಯ ಕೂಡ ಆಲ್ ರೆಡಿ ಗಾಡಿ ಹತ್ತಿದ್ರು. ಬೇಗ ರೂಮ್ ತಲುಪುತ್ತೇವೆ, ಸುತ್ತ ಮುತ್ತ ಜಾಗನ ಓಪನ್ ಗಾಡೀಲಿ ಎಕ್ಸ್ಪ್ಲೋರ್ ಮಾಡ್ಬೋದು ಅಂತ ಜೋಶ್ ಅಲ್ಲಿ ಹೊರಟ್ವಿ. ಗಾಡಿ ಗಡ ಗಡ ಅಂತ ಶಬ್ದ ಮಾಡ್ತಾ ಸೆಟ್ ಇಂದ ಒಂದೆರಡು ಕಿಲೋ ಮೀಟರ್ ದೂರ ಬಂತು. “ಏನ್ ಗೊತ್ತಾ? ಇವ್ರು ಎಲ್ಲಿಗ್ ಕಕೊರ್ಂಡ್ ಹೋಗ್ತಿದ್ದಾರೆ? ನನ್ ಮೈಮೇಲೇ ಮಿನಿಮಮ್ ಮೂರು ಲಕ್ಷ ಚಿನ್ನ ಇದೆ” ಕಿರಣ್ ಗುಟ್ಟಾಗಿ ಹೇಳಿದ್ ತಕ್ಷಣ ನನ್ ಎದೆ ಧಸಕ್ ಅನಿಸಿತು. ನೋಡಿದರೆ ಗಾಡಿ ಎಲ್ಲೋ ಆಫ್ ರೋಡ್ ಹೋಗ್ತಿದೆ. ಗಾಡಿಯಲ್ಲಿ ಒಬ್ಬ ಕನ್ನಡ ಮಾತಾಡೋನಿದ್ದ ಅಂತ ಅವನ ಹತ್ತಿರ ಮಾತಾಡಿಕೊಂಡು ಹೊರಟಿದ್ವಿ ನೋಡಿದ್ರೆ ಸ್ವಲ್ಪ ಹೊತ್ತಿನ ಮೇಲೆ ಗೊತ್ತಾಯ್ತು ಅವನು ಕುಡಿದಿದ್ದ ಅಂತ. ಇದನ್ನು ಓದಿ: ಶಿವರಾಜ್‍ಕುಮಾರ್ ಬಳಿ ಸಹಾಯಕ್ಕೆ ಅಂಗಲಾಚಿದ ನಟಿ ವಿಜಯಲಕ್ಷ್ಮಿ

ರಾಮೋಜಿ ಫಿಲ್ಮ್ ಸಿಟಿಯ ಮಾಮೂಲಿ ರೋಡ್ ಬಿಟ್ಟು ಕತ್ತಲೇಲಿ ನಮ್ಮನ್ನ ಎಲ್ಲಿಗೆ ಕಕೊರ್ಂಡ್ ಹೋಗ್ತಿದ್ದಾರೆ? ಮುಂದೆ ಕೂತಿರೋ ಡ್ರೈವರ್ ಗೊತ್ತಿರೀದಿರ್ಲಿ ಅವರ ಮುಖಾನೂ ನೋಡಿಲ್ಲ! ನಮೆಗೇನಾದ್ರು ಮಾಡ್ಬಿಡ್ತಾರಾ? ಹೊರ ರಾಜ್ಯದಲ್ಲಿ, ಗೊತ್ತಿಲ್ದೇರೋ ಗಾಡೀಲಿ ಗೊತ್ತೂ ಗುರಿ ಇಲ್ದೇ ಹೊರಟಿದ್ದೀವಿ, ಏನಪ್ಪಾ ಗತಿ ಅಂತ ಹೆದರಿಕೊಂಡು ಈ ವಿಡಿಯೋ ಮಾಡಿದ್ದು, ಕ್ರೈಮ್ ಇನ್ವೆಸ್ಟಿಗೇಶನ್ ನಡೀವಾಗ ಪ್ರೂಫ್‍ಗೇ ಅಂತ ವೀಡೀಯೋ ಸಿಗುತ್ತಲ್ಲ? ಆತರ! ಟೈಟಲ್ ಕಾರ್ಡ್ ಚೇಂಜ್ ಮಾಡಿ ಅಂತ ಎಲ್ರೂ ಕೇಳ್ತಿದ್ರು, ಟೈಟಲ್ ಕಾರ್ಡ್ ಅಲ್ಲಿರೋರನ್ನ ಚೇಂಜ್ ಮಾಡೋ ಪರಿಸ್ಥಿತಿ ತಂದುಕೊಂಡು ಬಿಟ್ವಾ ಗುರು ಅಂತ ಹೆವೀ ಭಯ ಆಯ್ತು. ಮುಂದೇನಾಯ್ತು? ಭಾಗ ಎರಡರಲ್ಲಿ ನಿರೀಕ್ಷಿಸಿ! ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

ಒಟ್ಟಾರೆ ಈ ಸಸ್ಪೆನ್ಸ್ ಥ್ರಿಲ್ಲರ್ ಸ್ಟೋರಿ ಇಲ್ಲಿಗೆ ಮುಗಿದಿಲ್ಲ ಇದರ ಮುಂದುವರೆದ ಭಾಗ ಇನ್ನೂ ಇದೆ ಎಂದು ರಂಜಿನಿ ರಾಘವನ್ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದಾರೆ. ಸದ್ಯ ಈ ಕಥೆಯ ಮುಂದುವರೆದ ಭಾಗದಲ್ಲಿ ಏನು ಹೇಳಬಹುದು ಎಂದು ಕಾದುನೋಡಬೇಕಾಗಿದೆ.

The post ಶೂಟಿಂಗ್ ಮುಗಿಸಿ ಬರ್ತಿದ್ದ ರಂಜಿನಿ ರಾಘವನ್‍ಗೆ ರಾತ್ರಿ ಏನಾಯ್ತಂತೆ ಗೊತ್ತಾ? appeared first on Public TV.

Source: publictv.in

Source link