ಉತ್ತರ ಕನ್ನಡ: ಜಿಲ್ಲೆಯ ಯಲ್ಲಾಪುರ ಪಟ್ಟಣದ ಗಣಪತಿ ಗಲ್ಲಿಯಲ್ಲಿ ಮಗುವೊಂದರ ಗಂಟಲಲ್ಲಿ ಶೇಂಗಾ ಬೀಜ ಸಿಲುಕಿಕೊಂಡು ಉಸಿರುಕಟ್ಟಿ ಮೃತಪಟ್ಟಿತು. ಇದರಿಂದ ದಿಕ್ಕೇ ತೋಚದ ಮಗುವಿನ ಅಜ್ಜಿ, ಸಮೀಪದ ದೇವಸ್ಥಾನಕ್ಕೆ ಮೃತದೇಹವನ್ನು ತೆಗೆದುಕೊಂಡು ಹೋಗಿ ದೇವರ ಗುಡಿಯೆದುರು ಇಟ್ಟು ಬದುಕಿಸಿಕೊಡುವಂತೆ ಅಂಗಲಾಚಿದ ಮನಕಲಕುವ ಘಟನೆ ನಡೆದಿದೆ.

ಯಲ್ಲಾಪುರದ ರಾಮನಾಥ ಆಚಾರಿ ಎನ್ನುವವರ ಎರಡೂವರೆ ವರ್ಷದ ಮಗು ಸಾತ್ವಿಕ್ ಮೃತ  ಬಾಲಕ. ಮನೆಯಲ್ಲಿ ನಿನ್ನೆ ಸಂಜೆ ಸಾತ್ವಿಕ್ ಶೇಂಗಾ ಬೀಜಗಳನ್ನು ತಿನ್ನುತ್ತಿದ್ದ. ಅಚಾನಕ್ ಆಗಿ ಅದು ಗಂಟಲಲ್ಲಿ ಸಿಲುಕಿಕೊಂಡಿತು. ಇದರಿಂದ ಉಸಿರಾಟದಲ್ಲಿ ತೊಂದರೆ ಕಾಣಿಸಿಕೊಂಡಿತು. ಮನೆಯವರು ತಕ್ಷಣವೇ ಹೇಗೋ ಪ್ರಯತ್ನ ಮಾಡಿ ಗಂಟಲಿನಿಂದ ಎರಡು ಶೇಂಗಾ ಬೀಜಗಳನ್ನು ಹೊರತೆಗೆದರು. ಆದರೂ ಉಸಿರಾಟ ಸುಧಾರಿಸದ ಕಾರಣ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು. ತಕ್ಷಣ ವೈದ್ಯರು ಗಂಟಲಲ್ಲಿದ್ದ ಮತ್ತೊಂದು ಶೇಂಗಾ ಬೀಜವನ್ನು ಹೊರತೆಗೆದರು. ಆದರೆ, ಅಷ್ಟರಲ್ಲಿ ಮಗುವಿನ ಉಸಿರು ನಿಂತಿತ್ತು. ವೈದ್ಯರು ಮಗು ಮೃತಪಟ್ಟಿದೆ ಎಂದು ತಿಳಿಸುತ್ತಿದ್ದಂತೆ ತಾಯಿ ಮತ್ತು ಅಜ್ಜಿಯ ಆಕ್ರಂದನ ಮುಗಿಲು ಮುಟ್ಟಿತ್ತು.

ಅಜ್ಜಿ ಮೊಮ್ಮಗನ ಮೃತದೇಹವನ್ನು ಸಮೀಪದಲ್ಲಿರುವ ಲೋಕೋಪಯೋಗಿ ಇಲಾಖೆ ಕಚೇರಿಯ ಆವರಣದಲ್ಲಿರುವ ಗಣಪತಿ ಮಂದಿರಕ್ಕೆ ತೆಗೆದುಕೊಂಡು ಹೋದರು. ಗರ್ಭಗುಡಿಯೆದುರು ಮಗುವನ್ನ ಮಲಗಿಸಿದ ಅಜ್ಜಿ, ದೇವಸ್ಥಾನದ ಗಂಟೆಯನ್ನು ಬಾರಿಸುತ್ತಾ, ಮಗುವನ್ನು ಬದುಕಿಸು ಎಂದು ಮೊರೆಯಿಟ್ಟರು. ಈ ಸನ್ನಿವೇಶಗಳನ್ನು ಅಸಹಾಯಕರಾಗಿ ನೋಡುತ್ತಿದ್ದವರೂ ಭಾವುಕರಾಗಿ ಅವರ ಕಣ್ಣುಗಳಲ್ಲಿ ಹನಿಗೂಡಿದ್ದವು.

ನಂತರ ಕುಟುಂಬದವರು ಅಜ್ಜಿಯನ್ನು ಸಮಾಧಾ ಪಡಿಸಿ ಅಲ್ಲಿಂದ ಕರೆದುಕೊಂಡು ಹೋದರು. ಅಜ್ಜಿ ಮೊಮ್ಮಗನ ಬದುಕಿಸುವಂತೆ ದೇವರ ಮುಂದೆ ಶವವಿಟ್ಟು ರೋಧಿಸುತಿದ್ದುದ್ದು ಎಂತವರಲ್ಲೂ ಕಣ್ಣು ತೇವವಾಗಿಸುತಿತ್ತು. ಆದರೇ ಕಲ್ಲಿನ ದೇವರು ಮಾತ್ರ ಕಲ್ಲಾಗಿದ್ದ.

The post ಶೇಂಗಾಬೀಜ ಗಂಟಲಲ್ಲಿ ಸಿಲುಕಿ ಮಗು ಸಾವು: ದೇವರ ಮುಂದೆ ಶವವಿಟ್ಟು ರೋಧಿಸಿದ ಅಜ್ಜಿ! appeared first on News First Kannada.

Source: newsfirstlive.com

Source link