ನವದೆಹಲಿ: ಕೊರೊನಾ ಸೋಂಕಿನ ವಿರುದ್ಧದ ಯುದ್ಧದಲ್ಲಿ ಲಸಿಕೆ ರಕ್ಷಾ ಕವಚವಾಗಿದ್ದು, ಶೀಘ್ರವೇ ದೇಶದ ಶಸ್ತ್ರಾಸ್ತ್ರ ಪಡೆ ಶೇ.100 ರಷ್ಟು ಲಸಿಕೆ ಪಡೆದ ಸಾಧನೆಯನ್ನು ಮಾಡಲಿದ್ದಾರೆ ಎಂದು ಇಂಟಿಗ್ರೇಟೆಡ್ ಡಿಫೆನ್ಸ್ ಸ್ಟಾಫ್ ಡೆಪ್ಯೂಟಿ ಚೀಫ್ ಮೆಡಿಕಲ್ ಲೆಫ್ಟಿನೆಂಟ್ ಜನರಲ್ ಮಾಧುರಿ ಕಾನಿಟ್ಕರ್ ತಿಳಿಸಿದ್ದಾರೆ.

ಶಸ್ತ್ರಾಸ್ತ್ರ ಪಡೆಗೆ ಲಸಿಕೆ ಪೂರೈಕೆ ಮಾಡಿದ ಪ್ರಧಾನಿ ಮೋದಿ ಹಾಗೂ ಕೇಂದ್ರ ಸರ್ಕಾರಕ್ಕೆ ಇದೇ ವೇಳೆ ಧನ್ಯವಾದ ತಿಳಿಸಿರುವ ಮಾಧುರಿ ಕಾನಿಟ್ಕರ್ ಅವರು, ಕೊರೊನಾ ವಿರುದ್ಧ ಹೋರಾಡಲು ಶೇ.100 ರಷ್ಟು ಲಸಿಕೆ ಹಾಕುವ ಗುರಿಯನ್ನು ಸಾಧಿಸಲು ಸಶಸ್ತ್ರ ಪಡೆಯನ್ನು ಸಜ್ಜುಗೊಳಿಸಲಾಗಿದೆ. ಲಸಿಕೆ ಸುರಕ್ಷಿತವಾಗಿದ್ದು, ನಾವು ಈಗಾಗಲೇ ಪಡೆದುಕೊಂಡಿದ್ದೇವೆ. ಸದ್ಯ ಲಸಿಕೆಯನ್ನು ಎಲ್ಲಾ ವಯೋಮಾನದವರಿಗೆ ನೀಡಲು ಸಮ್ಮತಿಸಲಾಗಿದೆ ಎಂದು ತಿಳಿಸಿದ್ದಾರೆ.

ವಾಯು ಪಡೆ ಹಾಗೂ ನೌಕಾ ದಳದಲ್ಲಿ ಶೇ.95ರಷ್ಟು ಮಂದಿ ತಮ್ಮ ಮೊದಲ ಡೋಸ್​ ಲಸಿಕೆಯನ್ನು ಪಡೆದುಕೊಂಡಿದ್ದಾರೆ. ಇನ್ನು ಸೇನೆಯಲ್ಲಿ ಬಹುತೇಕ ಮಂದಿ ಮೊದಲ ಡೋಸ್​ ಹಾಗೂ ಹಲವರು ಎರಡನೇ ಡೋಸ್​ ಸ್ವೀಕರಿಸಿದ್ದಾರೆ. ಆದ್ದರಿಂದ ಸಣ್ಣ ಪ್ರಮಾಣದಲ್ಲಿ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದೆ. ಸೋಂಕಿತರಿಗೂ ಕೂಡ ಯಾವುದೇ ಲಕ್ಷಣಗಳು ಕಂಡು ಬರುತ್ತಿಲ್ಲ ಎಂದು ಅವರು ವಿವರಿಸಿದರು.

ಅಂದಹಾಗೇ ಧಾರವಾಡ ಮೂಲದ ಕನ್ನಡತಿ ಮಾಧುರಿ ಅವರು ತ್ರಿ ಸ್ಟಾರ್​ ಱಂಕ್ ಪಡೆದ ದೇಶದ ಮೂರನೇ ಮಹಿಳೆ ಎಂಬ ಹೆಗ್ಗಳಿಕೆ ಗಳಿಸಿದ್ದಾರೆ.

The post ಶೇ.100ರಷ್ಟು ಲಸಿಕೆ ಪಡೆದ ಸಾಧನೆಯ ಸನಿಹದಲ್ಲಿ ಶಸ್ತ್ರಾಸ್ತ್ರ ಪಡೆ appeared first on News First Kannada.

Source: newsfirstlive.com

Source link