ಮೈಸೂರು: ಅಧಿವೇಶನಕ್ಕೂ ಮುನ್ನ ಸಂಪುಟ ವಿಸ್ತರಣೆಯಾದರೆ ಉತ್ತಮ, ಆರೋಗ್ಯ ಕಾರಣದಿಂದ ನಾನು ಸಚಿವನಾಗಲು ಆಗಲ್ಲ, ಉಮೇಶ್​ ಜಾಧವ್​ಗೆ ಕೇಂದ್ರ ಸಚಿವ ಸ್ಥಾನ ನೀಡಬೇಕು, ಅದರಂತೆ ಶಿವಕುಮಾರ್ ಉದಾಸಿ, ಶೋಭಾ ಕರಂದ್ಲಾಜೆಗೂ ಸಚಿವ ಸ್ಥಾನ ನೀಡಬೇಕೆಂದು ತಮ್ಮ ಆಪ್ತರ ಪರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಬ್ಯಾಟ್​ ಬೀಸಿದ್ದಾರೆ.

ಇನ್ನು ಯೋಗೇಶ್ವರ್​ ಜೊತೆ ಭೇಟಿಯ ಕುರಿತು ಮೈಸೂರಿನಲ್ಲಿ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು.. ಹಿರಿಯ ರಾಜಕಾರಣಿ ಅನ್ನೋ ಗೌರವಕ್ಕೆ ಬಹಳಷ್ಟು ಮಂದಿ ಬರ್ತಾರೆ. ಅವರು ಮೈಸೂರಿಗೆ ಬಂದಾಗಲೆಲ್ಲಾ ನನ್ನನ್ನು ಭೇಟಿ ಮಾಡ್ತಾರೆ. ಅದರಲ್ಲೇನು ಹೊಸತಿಲ್ಲ, ಬಿಜೆಪಿಯಲ್ಲಿ ಅವರಿಗೆ ಉಸಿರುಗಟ್ಟಿಸುವ ವಾತಾವರಣ ಇರುವ ಬಗ್ಗೆ ನನಗೇನೂ ಹೇಳಿಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ಬಿಜೆಪಿ ನಾಯಕತ್ವ ವಿಚಾರದ ಕುರಿತು ಮಾತನಾಡಿದ ಅವರು ಉಸ್ತುವಾರಿ ಅರುಣ್ ಸಿಂಗ್ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್​ಗೆ ತಿಳಿಸಿದ್ದಾರೆ. ಯಡಿಯೂರಪ್ಪನವರು ಕೂಡ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಿದ್ದೇನೆ ಎಂದಿದ್ದಾರೆ. ಆದರೆ ಈಗ ಎಲ್ಲವೂ ಸರಿಯಾಗಿದ್ದು ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ವಿಚಾರ ಮುಗಿದ ಅಧ್ಯಾಯ ಎಂದಿದ್ದಾರೆ.

ರಮೇಶ್​ ಜಾರಕಿಹೊಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು.. ಎಸ್.ಐ.ಟಿ ಮುಂದೆ ಪ್ರಕರಣ ನಡೆಯುತ್ತಿದೆ, ತನಿಖಾ ವರದಿ ನಂತರ ಅವರಿಗೆ ಮಂತ್ರಿ ಸ್ಥಾನ ಸಿಗಬಹುದು ಎಂದಿದ್ದಾರೆ. ಹಿಂದೆ ಸಿದ್ದರಾಮಯ್ಯ ಅವರನ್ನು ಸೋಲಿಸೋಕೆ ನಮ್ಮ ಮನೆಯಲ್ಲೇ ಕಾರ್ಯತಂತ್ರ ನಡೆದಿದ್ದು ಎಲ್ಲರಿಗೂ ಗೊತ್ತಿರೋ ಸಂಗತಿ. ಈಗಲೂ ನಮ್ಮ ಮನೆಯಲ್ಲೇ ಎಲ್ಲಾ ಕಾರ್ಯ ತಂತ್ರ ನಡೆಯುತ್ತೆ ಅನ್ನೋ ಆರೋಪಗಳನ್ನ ನಿರಾಕರಿಸಿದ್ದಾರೆ.

The post ‘ಶೋಭಾ ಕರಂದ್ಲಾಜೆ ಸೇರಿದಂತೆ ಮೂವರಿಗೆ ಸಚಿವ ಸ್ಥಾನ ನೀಡಲಿ’ ಎಂದ ಶ್ರೀನಿವಾಸ್ ಪ್ರಸಾದ್ appeared first on News First Kannada.

Source: newsfirstlive.com

Source link