‘ಶ್ರೀಕಿ ಕೋಟಿ ಕೋಟಿ ಹಣ ಲಪಟಾಯಿಸಿದ್ದು ಹೀಗೆ..’ ಸುನೀಷ್​ ಹೆಗ್ಡೆ ಬಾಯಿಬಿಟ್ಟ ರೋಚಕ ಸತ್ಯ..! 


ಬೆಂಗಳೂರು: ರಾಜ್ಯದಲ್ಲಿ ಸಂಚಲನ ಸೃಷ್ಟಿಸಿರುವ ಬಿಟ್ ಕಾಯಿನ್ ಪ್ರಕರಣದ ತನಿಖೆಯನ್ನ ಸಿಸಿಬಿ ಸ್ಪೆಷಲ್ ಟೀಂ ನಡೆಸಿದೆ. ತನಿಖೆ ನಡೆಸಿರುವ ಅಧಿಕಾರಿಗಳು ಕೋರ್ಟ್​ಗೆ ಚಾರ್ಜ್​​ಶೀಟ್ ಕೂಡ ಸಲ್ಲಿಸಿದ್ದಾರೆ. ಇದೀಗ ಚಾರ್ಜ್​​ಶೀಟ್​ನಲ್ಲಿ ಉಲ್ಲೇಖಿಸಿರುವ ಸಂಪೂರ್ಣ ಮಾಹಿತಿ ನ್ಯೂಸ್​​​ಫಸ್ಟ್​ಗೆ ಎಕ್ಸ್​​ಕ್ಲೂಸೀವ್ ಆಗಿ ಲಭ್ಯವಾಗಿದೆ.

ಸುನೀಷ್ ಹೆಗ್ಡೆ ಮೇಲೆ ಚಾರ್ಜ್​ಶೀಟ್​..!
ಶ್ರೀಕಿ ಮೂಲಕ ಗೇಮಿಂಗ್ ವೆಬ್​​ಸೈಟ್ ಹ್ಯಾಕ್ ಮಾಡಿದ್ದ ಸುನೀಷ್ ಹೆಗ್ಡೆಗೆ ಸಂಬಂಧಿಸಿದ ಚಾರ್ಜ್​ಶೀಟ್​ ಲಭ್ಯವಾಗಿದೆ. ಚಾರ್ಜ್​​ಶೀಟ್​ನಲ್ಲಿ ಸಿಸಿಬಿ ಪೊಲೀಸರ ಮುಂದೆ ಸುನೀಷ್ ಹೆಗ್ಡೆ ಕೊಟ್ಟಿರುವ ಸ್ವ-ಇಚ್ಚಾ ಹೇಳಿಕೆಗಳನ್ನ ದಾಖಲಿಸಲಾಗಿದೆ. ‘ನಾನು ಬೆಂಗಳೂರಿನ ಸಂಜಯನಗರದ ನಿವಾಸಿಯಾಗಿದ್ದೇನೆ. ಬೆಂಗಳೂರಿನ ಬಿಬಿಎಂಪಿ ಮತ್ತು ಕೆಐಎಡಿಬಿಯ ಕ್ಲಾಸ್ 1 ಕಂಟ್ರಾಕ್ಟರ್ ಆಗಿದ್ದೆ. ನನಗೆ ಶ್ರೀಕಿ, 2018ರಲ್ಲಿ ನಲಪಾಡ್ ಕೇಸ್ ಆದ ಮೇಲೆ ಪರಿಚಯ ಆಗಿತ್ತು..’

ರಾಬಿನ್ ಖಂಡೇಲಾ ವಾಲ್ ಬ್ಲಾಕ್ ಟೂ ವೈಟ್ ಮಾಡ್ತಿದ್ದ..!
‘ಶ್ರೀಕಿ ದೊಡ್ಡ ಹ್ಯಾಕರ್ ಅನ್ನೋದು ಗೊತ್ತಾದ ಮೇಲೆ ಸ್ನೇಹಿತನಾದ. ಶ್ರೀ ಕೃಷ್ಣನ ಕಡೆಯಿಂದ 2019 ರಲ್ಲಿ ಸುನೀಷ್​ಗೆ ರಾಬಿನ್ ಖಂಡೇಲಾವಾಲ್ ಪರಿಚಯ ಆಗಿದೆ. ಶ್ರೀಕಿ ಹ್ಯಾಕ್ ಮಾಡಿದ ಬಿಟ್ ಕಾಯಿನ್ ಗಳನ್ನು ನನಗೆ ನೀಡುತ್ತಿದ್ದ. ಅದನ್ನು ರಾಬಿನ್ ಖಂಡೇಲಾ ವಾಲ್ ಬ್ಲಾಕ್ ಟೂ ವೈಟ್ ಮಾಡುತ್ತಿದ್ದ. ನಾನು, ಪ್ರಸೀದ್ ಶೆಟ್ಟಿ, ಹೇಮಂತ್, ಸುಜಯ್, ಸುರೇಶ್ & ಶ್ರೀಕಿ ಒಂದು ಗ್ಯಾಂಗ್ ಇತ್ತು. ನಾವೆಲ್ಲರೂ ಸೇರಿ ಐಷಾರಾಮಿ ಹೊಟೇಲ್​ನಲ್ಲಿ ಯಾವಾಗಲು ಪಾರ್ಟಿ ಮಾಡುತ್ತಿದ್ವಿ. ಐಟಿಸಿ ಗಾರ್ಡೇನಿಯಾ, ಸೀಜನ್, ಶಾಂಗ್ರಿಲಾ, ಗೋಕುಲಂ ಗ್ರಾಂಡ್ ನಲ್ಲಿ ಪಾರ್ಟಿ ಮಾಡುತ್ತಿದ್ವಿ. ಕೆಲವೊಮ್ಮೆ ನನ್ನ ಪ್ಲಾಟ್​​ನಲ್ಲಿ ಸೇರಿಕೊಂಡು ಪಾರ್ಟಿ ಮಾಡುತ್ತಿದ್ದೆವು ಎಂದು ತಿಳಿಸಿದ್ದಾನೆ’ ಅನ್ನೋ ಮಾಹಿತಿಯನ್ನ ಚಾರ್ಜ್​​ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ.

‘ಆನ್ ಲೈನ್ ಗೇಮ್ ಶೋ ಮುಂಚೆ ಹ್ಯಾಕ್ ಮಾಡಿದ್ರೆ ಗೊತ್ತಾಗುತ್ತೆ. ಯಾರು ಆಡುತ್ತಿದ್ದಾರೆ ಅನ್ನೋದು ಗೊತ್ತಾದರೆ ಗೆಲ್ಲಬಹುದು. ಶ್ರೀಕಿ ನನಗೆ ಈ ಬಗ್ಗೆ ಹೇಳಿದ್ದ. ಇದೇ ರೀತಿ ಯುನೋಕಾಯಿನ್ ಬಿಟ್ ಕಾಯಿನ್​​ಗಳನ್ನ ಹ್ಯಾಕ್ ಮಾಡಿದ್ದಾನೆ. ನನ್ನ ಜೊತೆ ಇದ್ದರೆ ನಿನಗೆ ಬಿಟ್ ಕಾಯಿನ್ ನೀಡುವೆ ಅಂತಾ ಹೇಳಿದ್ದ. ಅದರಿಂದ ಬಂದ ಹಣದಲ್ಲಿ ಪಾಲು ನೀಡುವೆ. ಹೀಗಾಗಿ ಆತನ ಎಲ್ಲಾ ಖರ್ಚುಗಳನ್ನು ನಾನು ನೋಡಿಕೊಳ್ಳುತ್ತಿದ್ದೆ. ಇಲ್ಲಿಯತನಕ ನಾನು ಶ್ರೀಕಿ @ ಶ್ರೀ ಕೃಷ್ಣನಿಗೆ 2 ಕೋಟಿ ಖರ್ಚು ಮಾಡಿದ್ದೇನೆ’ ಎಂದು ಸುನೀಷ್ ಹೆಗ್ಡೆ ತನಿಖಾಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನಂತೆ.

ಕಿರಿಕಿರಿ ಮಾಡಿದ್ದ ಶ್ರೀಕಿ
‘ಪೋಕರ್ ಬಾಜಿ ಗೇಮ್ ಹ್ಯಾಕ್ ಮಾಡಿ ಶ್ರೀಕಿ ಆಗ ಕಿರಿಕಿರಿ ಮಾಡಿದ್ದ. ಜೊತೆಗೆ ಅವರ ಗೇಮ್ ಸುರಕ್ಷಿತ ಮಾಡಲು ಶ್ರೀಕಿ ನನಗೆ ಆಫರ್ ಕೊಟ್ಟ. ಅದರ ಸಿಇಓ ಕರೆಯಿಸಿ ಅವರ ಗೇಮ್​ಗೆ ಶ್ರೀಕಿ ಸೇಫ್ ಮಾಡಿಕೊಟ್ಟ. ಇದರಿಂದ ನಾವು ಎಲ್ಲಾ ಸೇರಿ 50 ಲಕ್ಷ ಹಣ ಸಂಪಾದನೆ ಮಾಡಿದ್ದೆವು. 2019ರಲ್ಲಿ ಬಿಟ್ ಕಾಯಿನ್ ಕ್ಯಾಷ್ ಮಾಡಲು ಅಕೌಂಟ್​ಗೆ ನನ್ನ ಕೇಳಿದ. ಅದಕ್ಕಾಗಿ ಒಬ್ಬ ಅಕೌಂಟೆಂಟ್ ಬೇಕು ಎಂದು ನನಗೆ ಕೇಳಿದ್ದ. ಆಗ ನಾನು ಹೇಮಂತ್ ಮುದ್ದಪ್ಪನನ್ನು ಪರಿಚಯ ಮಾಡಿಕೊಟ್ಟಿದ್ದೆ. ಆನಂತರ ಬಿಬಿಎಂಪಿ ಈ ಪ್ರಕ್ಯೂರ್ ವೆಬ್ ಸೈಟ್ ಹ್ಯಾಕ್ ಮಾಡಿದ್ದ. ಈ ವೇಳೆ 10.5 ಕೋಟಿ ಹಣವನ್ನು ಹೇಮಂತ್ ಕೊಟ್ಟ ಅಕೌಂಟ್​​ಗೆ ಕಳುಹಿಸಿದ್ದ. ಅದರಲ್ಲಿ ಬ್ರೋಕರ್ ಎಲ್ಲಾ ಪಡೆದ ಬಳಿಕ ಶ್ರೀಕಿ 2 ಕೋಟಿ ತಗೊಂಡಿದ್ದ’ ಎಂದು ಹೇಳಿರೋದನ್ನ ಚಾರ್ಜ್​​ಶೀಟ್​ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ.

ಮೋಜು ಮಸ್ತಿಗೆ ಹಣ ಬಳಕೆ
ಶ್ರೀಕಿ ನನಗೆ ಪೋಕರ್ ಸೈಟ್ ವೆಬ್ ಸೈಟ್ ಹ್ಯಾಕ್ ಮಾಡಿ ಸಹಾಯ ಮಾಡುತ್ತಿದ್ದ. ನಾನು ಆಟವಾಡುವಾಗ ಎದುರಾಳಿ ಕಾರ್ಡ್ ಗಳನ್ನು ನನಗೆ ತೋರಿಸ್ತಿದ್ದ. ಇದರಿಂದ ನನಗೆ ಗೆಲ್ಲಲು ಸಹಾಯವಾಗಿ ಕೋಟ್ಯಾಂತರ ರೂಪಾಯಿ ಹಣ ಸಂಪಾದನೆ ಮಾಡಲು ಸಹಾಯ ಆಯಿತು. ಅಷ್ಟೂ ಹಣವನ್ನು ನಾವೆಲ್ಲಾ ಸೇರಿ ಮೋಜು ಮಸ್ತಿಗೆ ಬಳಕೆ ಮಾಡಿದ್ದೆವು ಎಂದು ಬಾಯಿಬಿಟ್ಟಿದ್ದಾನೆ.

ಹ್ಯಾಕ್ ಮಾಡಿದ ಜಾಗ ಪತ್ತೆ ಆಗಬಾರದು ಅಂತಾ ಶ್ರೀಕಿ ಕಾಡಿಗೆ ಹೋಗಿದ್ದ. ನಾನು ಒಮ್ಮೆ ಆತನನ್ನ ಚಿಕ್ಕಮಗಳೂರಿಗೆ ಕರೆದುಕೊಂಡು ಹೋಗಿದ್ದೆ. ಕಬಿನಿ ಹಾರೆಂಜ್ ಕೌಂಟಿಯಲ್ಲಿ ಒಂದು ತಿಂಗಳು ಬಿಟ್ ಕಾಯಿನ್ ಹ್ಯಾಕ್ ಮಾಡಿದ್ದೇವು. ನಾನು ಶ್ರೀಕಿ ಮೂಲಕ ಪೋಕರ್ ಗೇಮ್ ಕಸ್ಟಮರ್ ಡಾಟಾ ಕಳ್ಳತನ ಮಾಡಿಸಿದ್ದೆ. ಶ್ರೀಕಿ ಕೃತ್ಯಕ್ಕೆ ಬಳಸಿದ್ದ ಲ್ಯಾಪ್ ಟಾಪ್ & ಗ್ಯಾಜೆಟ್ಸ್ ನನ್ನ ಪ್ಲಾಟ್​ನಲ್ಲಿ ಇಟ್ಟಿದ್ದ.

ಇನ್ನು ಪ್ರಕರಣದ ಆರೋಪಿ ಪ್ರಸಿದ್ ಶೆಟ್ಟಿ ಕೂಡ ಸಿಸಿಬಿ ಮುಂದೆ ಹೇಳಿಕೆ ಕೊಟ್ಟಿದ್ದು, ನಾನು ಬೆಂಗಳೂರಿನ ಆರ್ ಎಂವಿ ಎಕ್ಸ್​ಟೆನ್ಷನ್ ಸದಾಶಿವ ನಗರ ನಿವಾಸಿ ಆಗಿದ್ದೇನೆ. ಯಾವುದೇ ಕೆಲಸವಿಲ್ಲದೇ ನಾನು ಈ ಗ್ಯಾಂಗ್ ಜೊತೆ ಇರುತ್ತಿದ್ದೆ. 2018 ರಲ್ಲಿ ನನಗೆ ಸುನೀಷ್ ಮೂಲಕ ಶ್ರೀಕಿಯ ಪರಿಚಯವಾಗಿತ್ತು. ಸುನೀಷ್ ಹೆಗ್ಡೆಯ ಚಿಕ್ಕಮ್ಮನ ಮಗ ಈ ಪ್ರಸೀದ್ ಶೆಟ್ಟಿಯಾಗಿದ್ದಾನೆ. ಸುನೀಷ್ ಜೊತೆ ಈ ಎಲ್ಲಾ ಕೃತ್ಯಗಳಲ್ಲಿ ನಾನು ಭಾಗಿಯಾಗಿದ್ದೆ ಎಂದು ಸಿಸಿಬಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ ಅಂತಾ ಚಾರ್ಜ್​ಶೀಟ್​ನಲ್ಲಿ ಉಲ್ಲೇಖ ಮಾಡಲಾಗಿದೆ.

News First Live Kannada


Leave a Reply

Your email address will not be published. Required fields are marked *