ಶ್ರೀನಗರದಿಂದ ಶಾರ್ಜಾಕ್ಕೆ ಹೋಗುವ ವಿಮಾನಗಳ ಸಂಖ್ಯೆ ಹೆಚ್ಚಿಸಲು ಭಾರತದ ನಿರ್ಧಾರ; ಪಾಕ್​ ವಿರುದ್ಧ ಪ್ರತೀಕಾರದ ಹೆಜ್ಜೆ ! | India plans to increase number of flights for Srinagar to Sharjah


ಶ್ರೀನಗರದಿಂದ ಶಾರ್ಜಾಕ್ಕೆ ಹೋಗುವ ವಿಮಾನಗಳ ಸಂಖ್ಯೆ ಹೆಚ್ಚಿಸಲು ಭಾರತದ ನಿರ್ಧಾರ; ಪಾಕ್​ ವಿರುದ್ಧ ಪ್ರತೀಕಾರದ ಹೆಜ್ಜೆ !

ಶ್ರೀನಗರ-ಶಾರ್ಜಾ ವಿಮಾನ

ದೆಹಲಿ: ಜಮ್ಮು-ಕಾಶ್ಮೀರದ ಶ್ರೀನಗರದಿಂದ ಯುನೈಟೆಡ್​ ಅರಬ್​ ಎಮಿರೇಟ್ಸ್​​ನ ಶಾರ್ಜಾಕ್ಕೆ ಹೋಗುವ ವಿಮಾನಗಳು ತಮ್ಮ ವಾಯುಪ್ರದೇಶದ ಮಾರ್ಗದಲ್ಲಿ ಹೋಗಬಾರದು ಎಂದು ಪಾಕಿಸ್ತಾನ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಭಾರತ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ಕಾಶ್ಮೀರದ ಜನರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಶ್ರೀನಗರದಿಂದ ಶಾರ್ಜಾಕ್ಕೆ ಹೋಗುವ ವಿಮಾನಗಳ ಸಂಖ್ಯೆಯನ್ನು ಹೆಚ್ಚಿಸಲು ಯೋಜನೆ ರೂಪಿಸಿದೆ. ಈ ಮೂಲಕ ಪಾಕಿಸ್ತಾನದ ವಿರುದ್ಧ ಪ್ರತೀಕಾರದ ಕ್ರಮದ ಹೆಜ್ಜೆ ಇಟ್ಟಿದೆ. 

ಇತ್ತೀಚೆಗೆ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್​ ಶಾ ಶ್ರೀನಗರ-ಶಾರ್ಜಾ ವಿಮಾನ ಹಾರಾಟಕ್ಕೆ ಚಾಲನೆ ನೀಡಿದ್ದರು. ಸದ್ಯ ಒಟ್ಟು ನಾಲ್ಕು ವಿಮಾನಗಳು ಸಂಚಾರ ನಡೆಸುತ್ತಿದ್ದವು. ಆದರೆ ಶ್ರೀನಗರದಿಂದ ಶಾರ್ಜಾಕ್ಕೆ ಪಾಕಿಸ್ತಾನದ ಭೂಪ್ರದೇಶದ ಮೇಲ್ಭಾಗದಿಂದ ವಿಮಾನಗಳು ಹಾರಾಟ ನಡೆಸಲು ಅಲ್ಲಿನ ಸರ್ಕಾರ ಇದೀಗ ನಿರ್ಬಂಧ ವಿಧಿಸಿದೆ. ಹಾರಾಟಕ್ಕೂ ಮೊದಲು ಭಾರತ ಮತ್ತು ದುಬೈ ಸರ್ಕಾರಗಳು ನಮ್ಮ ಅನುಮತಿ ಪಡೆದಿಲ್ಲ ಎಂದು ಕ್ಯಾತೆ ತೆಗೆದಿದೆ. ಹೀಗಾಗಿ ಇನ್ನುಮುಂದೆ ಶ್ರೀನಗರದಿಂದ ಶಾರ್ಜಾಕ್ಕೆ ಹೋಗಬೇಕಾದರೆ ಉದಯಪುರ, ಅಹ್ಮದಾಬಾದ್​ ಮತ್ತು ಒಮೆನ್​ ಮೂಲಕ ಹಾರಾಡಬೇಕಿದೆ. ಇದು ಸುಮಾರು ಒಂದೂವರೆ ತಾಸಿನ ಹೆಚ್ಚಿನ ಪ್ರಯಾಣವಾಗಲಿದ್ದು, ಟಿಕೆಟ್​ ಬೆಲೆಯೂ ಏರಿಕೆಯಾಗುವ ಆತಂಕದಲ್ಲಿ ಕಾಶ್ಮೀರಿಗಳು ಇದ್ದಾರೆ. ಆದರೆ ಭಾರತ ಸರ್ಕಾರ ಈಗೊಂದು ಮಹತ್ವದ ಹೆಜ್ಜೆ ಇಟ್ಟಿದೆ..ಮಾರ್ಗ ಬದಲಾವಣೆಯಿಂದ ಸಮಯ ಹೆಚ್ಚು ಹಿಡಿದರೂ ತೊಂದರೆ ಇಲ್ಲ, ಇದನ್ನು ಕಾಶ್ಮೀರಿಗಳಿಗೆ ನೀಡಲಾಗುವ ಸೇವೆ ಎಂದೇ ಭಾವಿಸುತ್ತೇವೆ ಎಂದು ಹೇಳಿ, ವಿಮಾನಗಳ ಸಂಖ್ಯೆಯನ್ನು ಇನ್ನಷ್ಟು ಹೆಚ್ಚಿಸಲು ಮುಂದಾಗಿದೆ. ಈ ಯೋಜನೆ ನವೆಂಬರ್​ 11ರಿಂದ ಅನುಷ್ಠಾನಕ್ಕೆ ಬರಲಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಶ್ರೀನಗರದಿಂದ ಶಾರ್ಜಾಕ್ಕೆ ಹೋಗುವ ವಿಮಾನಗಳು ತನ್ನ ವಾಯುಪ್ರದೇಶ ಪ್ರವೇಶಿಸುವಂತಿಲ್ಲ ಎಂದು ಹೇಳುವ ಮೂಲಕ ಪಾಕಿಸ್ತಾನ ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ಮಾರ್ಗಸೂಚಿಗಳನ್ನು ಉಲ್ಲಂಘಿಸಿದೆ ಎಂದು ಭಾರತ ಸರ್ಕಾರ ಹೇಳಿದೆ.  ಇನ್ನು ಭಾರತ ಪಾಕಿಸ್ತಾನದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಲೇಬೇಕು ಎಂದರೆ ಇನ್ನೊಂದು ಮಾರ್ಗವೂ ಇದೆ. ಲಾಹೋರ್​​ನಿಂದ ಸಿಂಗಪೂರಕ್ಕೆ ಹೋಗುವ ವಿಮಾನಗಳು ಭಾರತದ ವಾಯುಪ್ರದೇಶದಲ್ಲೇ ಹಾರುತ್ತವೆ. ಇದನ್ನು ನಿರ್ಬಂಧಿಸುವ ಅವಕಾಶವೂ ಭಾರತ ಸರ್ಕಾರಕ್ಕೆ ಇದೆ. ಹಾಗೆ ಮಾಡಿದರೆ ಲಾಹೋರ್​​ನಿಂದ ವಿಮಾನಗಳು ಕರಾಚಿಗೆ ಹೋಗಿ, ಅಲ್ಲಿಂದ ಕೊಲಂಬೋಕ್ಕೆ ತೆರಳಿ ನಂತರ ಸಿಂಗಾಪೂರಕ್ಕೆ ಹೋಗಬೇಕು. ಇದು ಭರ್ಜರಿ ದೂರವಾಗುತ್ತದೆ.

ಇದನ್ನೂ ಓದಿ:  ನವೆಂಬರ್ 5 ರಂದು ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಮತ್ತಷ್ಟು ಹದಗೆಡುವ ಸಾಧ್ಯತೆ

Dharwad Jail: ಜೈಲುಗಳಲ್ಲಿ ಅನಕ್ಷರಸ್ಥ ಕೈದಿಗಳಿಗೆ ಅಕ್ಷರ ಜ್ಞಾನದ ದೀಪ; ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಅಭಿಯಾನ

TV9 Kannada


Leave a Reply

Your email address will not be published. Required fields are marked *