ಶ್ರೀಮಂತನ ಸ್ನೇಹ ಬೆಳಸಿ ಸುಲಿಗೆ – ಹನಿಟ್ರ್ಯಾಪ್ ಸಂಚುಕೋರರಿಗೆ ಜೀವಾವಧಿ ಶಿಕ್ಷೆ

ಹುಬ್ಬಳ್ಳಿ: ಶ್ರೀಮಂತ ವ್ಯಕ್ತಿಯೊಂದಿಗೆ ಸಲುಗೆ ಬೆಳೆಸಿಕೊಂಡು ಆತನನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಸಹಚರರೊಂದಿಗೆ ಚಾಕುವಿನಿಂದ ಇರಿದು ಸುಲಿಗೆ ಮಾಡಿದ ಯುವತಿ ಸೇರಿದಂತೆ ನಾಲ್ವರು ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ.

ಹನಿಟ್ರ್ಯಾಪ್ ಹಾಗೂ ಸುಲಿಗೆ ಮಾಡಿದ ನಾಲ್ವರಿಗೆ ಹುಬ್ಬಳ್ಳಿಯ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದ್ದು, ಸುಲಿಗೆಕೋರರು ಕಂಬಿ ಪಾಲಾಗಿದ್ದಾರೆ.

ಏನಿದು ಪ್ರಕರಣ?
ಶ್ರೀಮಂತರನ್ನು ಪತ್ತೆ ಮಾಡಿ ಅವರೊಂದಿಗೆ ಸ್ನೇಹ ಬೆಳೆಸಿ ಸಲುಗೆಯಿಂದ ಹಣ ಕೀಳುವ ಉದ್ದೇಶದಿಂದ ಹುಬ್ಬಳ್ಳಿಯ ನಾಲ್ವರು ಹೊಂಚು ಹಾಕಿದ್ದರು. ಅನಘಾ ವಡವಿ ಎನ್ನುವ ಯುವತಿಯೊಂದಿಗೆ ಸ್ನೇಹ ಬೆಳೆಸಿದ ಬಲಬೀರ ದುರ್ಗಾಜಿರಾವ್ ಎಂಬವರನ್ನು 2017ರ ಜುಲೈ 30 ರಂದು ಅನಘಾ ಕಾರವಾರ ರಸ್ತೆಯ ಸೈನಿಕ ಶಾಲೆಯ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ಯಿದ್ದಳು. ಈ ವೇಳೆಗೆ ಅಲ್ಲಿಗೆ ಬಂದ ಅನಘಾ ಸಹಚರರಾದ ರಮೇಶ್ ಹಜಾರೆ, ಗಣೇಶ ಶೆಟ್ಟಿ, ವಿನಾಯಕ ಹಜಾರೆ, ಬಲಬೀರ ಮೇಲೆ ದಾಳಿ ಮಾಡಿದ್ದರು. ನಮ್ಮ ಹುಡುಗಿಯನ್ನ ರೇಪ್ ಮಾಡಲು ಬಂದಿದ್ದೀಯ ಎಂದು ಬೆದರಿಸಿ 5 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಆದರೆ ಹನಿಟ್ರ್ಯಾಪ್ ಗೆ ಒಳಗಾದ ಬಲಬೀರ ತನ್ನ ಬಳಿ ಹಣವಿಲ್ಲ ಎಂದಾಗ ಸುಲಿಗೆಕೋರರು ಬಲಬೀರಗೆ ಚಾಕುವಿನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದರು.

ಬಲಬೀರ ಬಳಿಯ ಇದ್ದ ಮೊಬೈಲ್ ಫೋನ್, ಎಟಿಎಂ ಕಾರ್ಡ್ ಕಿತ್ತುಕೊಂಡು ಹತ್ತಿರದ ಎಟಿಎಂಗೆ ಕರೆದುಕೊಂಡು ಹೋಗಿ 10 ಸಾವಿರ ರೂಪಾಯಿ ಡ್ರಾ ಮಾಡಿಸಿಕೊಂಡು ಬಲಬೀರನನ್ನ ಸಿದ್ಧಾರೂಢ ಮಠದ ಬಳಿ ಬಿಟ್ಟು ಪರಾರಿಯಾಗಿದ್ದರು. ಘಟನೆಯ ಕುರಿತು ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ಈ ಪ್ರಕರಣದ ವಿಚಾರಣೆ ನಡೆಸಿದ 5ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್. ಗಂಗಾಧರ್ ಅವರು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಲು ಆದೇಶಿಸಿದ್ದಾರೆ.

ಆರೋಪಿಗಳಾದ ನಾಲ್ವರಿಗೆ ಜೀವಾವಧಿ ಶಿಕ್ಷೆ ಹಾಗೂ ರಮೇಶ್, ಗಣೇಶ್. ವಿನಾಯಕ್‍ಗೆ ತಲಾ 17,500 ರೂಪಾಯಿ ದಂಡ ಹಾಗೂ ಆರೋಪಿತಳಾದ ಯುವತಿ ಅನಘಾಗೆ 15,000 ಸಾವಿರ ದಂಡ ವಿಧಿಸಿದ್ದಾರೆ. ಇದನ್ನೂ ಓದಿ: ಕಂಟೇನರ್​ಗೆ ಲಾರಿ ಡಿಕ್ಕಿ – ಇಬ್ಬರ ದುರ್ಮರಣ

The post ಶ್ರೀಮಂತನ ಸ್ನೇಹ ಬೆಳಸಿ ಸುಲಿಗೆ – ಹನಿಟ್ರ್ಯಾಪ್ ಸಂಚುಕೋರರಿಗೆ ಜೀವಾವಧಿ ಶಿಕ್ಷೆ appeared first on Public TV.

Source: publictv.in

Source link