ಬಾಲಿವುಡ್ ನಟಿ ಕಂಗನಾ ರಣಾವತ್ ಸೋಶಿಯಲ್ ಮೀಡಿಯಾ ಮೂಲಕ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ ಮದುವೆ ಬಗ್ಗೆ ಕಮೆಂಟ್ ಮಾಡಿದ್ದು, ಎಲ್ಲಿಯೂ ಈ ಜೋಡಿಯ ಹೆಸರನ್ನು ಮಾತ್ರ ಪ್ರಸ್ತಾಪಿಸಿಲ್ಲ. ಕಂಗನಾ ಹಲವು ವಿಷಯಗಳ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಿರುತ್ತಾರೆ. ಅದರಂತೇ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಸ್ನಲ್ಲಿ “ಶ್ರೀಮಂತ ಮಹಿಳೆಯರು ತಮಗಿಂತ ಕಿರಿಯ ವಯಸ್ಸಿನ ಪುರುಷರನ್ನು ಮದುವೆ ಆಗುತ್ತಿರುವುದನ್ನು ನೋಡಲು ಖುಷಿ ಆಗುತ್ತದೆ” ಎಂದು ಬರೆದುಕೊಂಡಿದ್ದು, ನೆಟ್ಟಿಗರು ಕಂಗನಾ ಈ ಸಾಲುಗಳನ್ನು ವಿಕ್ಕಿ ಹಾಗೂ ಕತ್ರಿನಾ ಕುರಿತಾಯೇ ಬರೆದಿರಬೇಕು ಅಂತ ಗೆಸ್ ಮಾಡಿದ್ದಾರೆ.
ಇದೇ ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿರುವ ಮಾಧೊಪುರದ ಸಿಕ್ಸ್ ಸೆನ್ಸಸ್ ಫೋರ್ಟ್ ಹೋಟೆಲ್ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆ ನಡೆಯಲಿದ್ದೆ. ಇನ್ನು ವಯಸ್ಸಿನಲ್ಲಿ ವಿಕ್ಕಿ ಕತ್ರಿನಾಗಿಂತ ಐದು ವರ್ಷ ಕಿರಿಯವರಾಗಿದ್ದು, ಈ ಬಗ್ಗೆ ಕಂಗನಾ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
“ಯಶಸ್ವಿ ಪುರುಷರು ವಯಸ್ಸಿನಲ್ಲಿ ತಮಗಿಂತ ಕಿರಿಯ ವಯಸ್ಸಿನ ಮಹಿಳೆಯ ಜೊತೆ ಮದುವೆಯಾದ ಕಥೆಗಳನ್ನು ನಾವು ಕೇಳುತ್ತ ಬೆಳೆದಿದ್ದೇವೆ. ಇನ್ನು ಮಹಿಳೆಯರು ತಮ್ಮಗಿಂತ ಚಿಕ್ಕಿ ವಯಸ್ಸಿನ ಹುಡುಗರನ್ನು ಮದುವೆಯಾಗುವುದ್ದು ಇರಲಿ, ವಯಸ್ಸು ದಾಟಿದ ನಂತರ ಮಹಿಳೆಯರು ಮದುವೆ ಆಗುವುದೇ ಅಸಾಧ್ಯವಾಗಿತ್ತು. ಆದರೆ ಈಗಿನ ಶ್ರೀಮಂತ ಮಹಿಳೆಯರು, ಯಶಸ್ವಿ ನಟಿಯರು ಇಂತಹ ಹಳೆಯ ನಿಯಮಗಳನ್ನು ಮುರಿಯುತ್ತಿರುವುದು ನೋಡಲು ಖುಷಿ ಆಗುತ್ತದೆ. ಲಿಂಗ ಸಮಾನತೆ ಬಗೆಗಿನ ದೃಷ್ಟಿಕೋನವನ್ನು ಬದಲಿಸುತ್ತಿರುವ ಮಹಿಳೆಯರಿಗೆ ಮತ್ತು ಪುರುಷರಿಗೆ ಅಭಿನಂದನೆಗಳು” ಎಂದು ಕಂಗನಾ ಬರೆದುಕೊಂಡಿದ್ದಾರೆ.