ಶ್ರೀಮಂತ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆ ಆಗುತ್ತಿರೋದು ಖುಷಿ ವಿಚಾರ: ಕಂಗನಾ | Kangana Ranaut express her opinion about Katrina Kaif and Vicky Kaushal marriage without mentioning their names


ಶ್ರೀಮಂತ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆ ಆಗುತ್ತಿರೋದು ಖುಷಿ ವಿಚಾರ: ಕಂಗನಾ

ಕಂಗನಾ ರಣಾವತ್, ವಿಕ್ಕಿ ಕೌಶಲ್, ಕತ್ರಿನಾ ಕೈಫ್

ನಟಿ ಕಂಗನಾ ರಣಾವತ್​ (Kangana Ranaut) ಅವರು ಅನೇಕ ವಿಚಾರಗಳ ಬಗ್ಗೆ ಕಮೆಂಟ್​ ಮಾಡುತ್ತಾರೆ. ತಮಗೆ ಸಂಬಂಧ ಇರಲಿ, ಇಲ್ಲದೇ ಇರಲಿ.. ಬಹುತೇಕ ವಿಷಯಗಳ ಬಗ್ಗೆ ಅವರು ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಈಗ ಅವರು ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ (Katrina Kaif Vicky Kaushal Wedding) ಬಗ್ಗೆ ಅವರು ಮಾತನಾಡಿದ್ದಾರೆ. ಆದರೆ ಎಲ್ಲಿಯೂ ಈ ಜೋಡಿಯ ಹೆಸರನ್ನು ಪ್ರಸ್ತಾಪಿಸಿಲ್ಲ. ಹಾಗಿದ್ದರೂ ಅವರು ಹೇಳಿರುವುದು ಕತ್ರಿನಾ ಕೈಫ್ (Katrina Kaif)​ ಮತ್ತು ವಿಕ್ಕಿ ಕೌಶಲ್​ (Vicky Kaushal) ಕುರಿತಾಗಿಯೇ ಎಂದು ನೆಟ್ಟಿಗರು ಊಹಿಸುತ್ತಿದ್ದಾರೆ. ‘ಶ್ರೀಮಂತ ಮಹಿಳೆಯರು ತಮಗಿಂತ ಕಿರಿಯ ಪುರುಷರನ್ನು ಮದುವೆ ಆಗುತ್ತಿರುವುದು ನೋಡಲು ಖುಷಿ ಆಗುತ್ತದೆ’ ಎಂದು ಕಂಗನಾ ರಣಾವತ್​ ಅವರು ತಮ್ಮ ಇನ್​ಸ್ಟಗ್ರಾಮ್​ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ರಾಜಸ್ಥಾನದ ಸಿಕ್ಸ್​ ಸೆನ್ಸಸ್​ ಫೋರ್ಟ್​ ಹೋಟೆಲ್​ನಲ್ಲಿ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆ ನೆರವೇರುತ್ತಿದೆ. ಡಿ.9ರಂದು ಈ ಜೋಡಿ ಹಸೆಮಣೆ ಏರುತ್ತಿದೆ. ಈಗಾಗಲೇ ವಿವಾಹ ಪೂರ್ವ ಆಚರಣೆಗಳು ಆರಂಭ ಆಗಿವೆ. ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ನಡುವೆ ವಯಸ್ಸಿನ ಅಂತರ ಇದೆ. ಕತ್ರಿನಾಗೆ 38 ವರ್ಷ ವಯಸ್ಸು. ವಿಕ್ಕಿ ಕೌಶಲ್​ಗೆ ಈಗಿನ್ನೂ 33ರ ಪ್ರಾಯ. ತಮಗಿಂತ 5 ವರ್ಷ ಕಿರಿಯ ವ್ಯಕ್ತಿ ಜೊತೆ ಕತ್ರಿನಾ ದಾಂಪತ್ಯ ಜೀವನ ಆರಂಭಿಸುತ್ತಿದ್ದಾರೆ. ಈ ಬಗ್ಗೆ ಕಂಗನಾ ಅವರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಯಶಸ್ವಿ ಪುರುಷರು ವಯಸ್ಸಿನಲ್ಲಿ ತಮಗಿಂತ ತುಂಬ ಕಿರಿಯರಾದ ಮಹಿಳೆಯರ ಜತೆ ಮದುವೆ ಆದ ಕಥೆಗಳನ್ನು ಕೇಳುತ್ತ ನಾವು ಬೆಳೆದೆವು. ಗಂಡನಿಗಿಂತ ಹೆಂಡತಿಯೇ ಹೆಚ್ಚು ಸಾಧನೆ ಮಾಡಿದರೆ ಅದನ್ನು ಮಹಿಳೆಯರ ಪಾಲಿಗೆ ಒಂದು ಬಿಕ್ಕಟ್ಟಿನ ರೀತಿ ನೋಡಲಾಗುತ್ತಿತ್ತು. ಚಿಕ್ಕ ವಯಸ್ಸಿನ ಹುಡುಗರನ್ನು ಮದುವೆ ಮಾಡಿಕೊಳ್ಳುವುದು ಹಾಗಿರಲಿ, ಒಂದು ವಯಸ್ಸು ದಾಟಿದ ನಂತರ ಮಹಿಳೆಯರು ಮದುವೆ ಆಗುವುದೇ ಅಸಾಧ್ಯವಾಗಿತ್ತು. ಆದರೆ ಈಗ ಶ್ರೀಮಂತ ಮಹಿಳೆಯರು, ಯಶಸ್ವಿ ನಟಿಯರು ಆ ಎಲ್ಲ ಹಳೆಯ ನಿಯಮಗಳನ್ನು ಮುರಿಯುತ್ತಿರುವುದು ನೋಡಲು ಖುಷಿ ಆಗುತ್ತದೆ. ಲಿಂಗ ಸಮಾನತೆ ಬಗೆಗಿನ ದೃಷ್ಟಿಕೋನ ಬದಲಿಸುತ್ತಿರುವ ಮಹಿಳೆಯರಿಗೆ ಮತ್ತು ಪುರುಷರಿಗೆ ಅಭಿನಂದನೆಗಳು’ ಎಂದು ಕಂಗನಾ ಬರೆದುಕೊಂಡಿದ್ದಾರೆ.

ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಮದುವೆಗೆ ಬಾಲಿವುಡ್​ನ ಅನೇಕರಿಗೆ ಆಹ್ವಾನ ನೀಡಲಾಗಿದೆ. ಆದರೆ ಕಂಗನಾ ರಣಾವತ್​ ಅವರನ್ನು ಆಮಂತ್ರಿಸಲಾಗಿದೆಯೋ ಇಲ್ಲವೋ ಎಂಬ ಬಗ್ಗೆ ಮಾಹಿತಿ ಹೊರಬಿದ್ದಿಲ್ಲ.

TV9 Kannada


Leave a Reply

Your email address will not be published. Required fields are marked *