ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರ ಬಳಿ ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಬಾಳೆ, ಕಬ್ಬಿನ ಗದ್ದೆ, ಅಡಕೆ ತೆಂಗಿನ ತೋಟಕ್ಕೆ ನೀರು ನುಗ್ಗಿವೆ. ಹೆಚ್ಚಿನ ಪ್ರಮಾಣ ನೀರು ಬಿಟ್ಟಿರುವ ಕಾರಣ ನದಿಪಾತ್ರದಲ್ಲಿರುವ ಜನರು ಆತಂಕಗೊಂಡಿದ್ದಾರೆ.

ಕಾವೇರಿ ಪ್ರವಾಹದಿಂದ ಶವಸಂಸ್ಕಾರ ಮಾಡಲು ಪರದಾಟ.
ಮಂಡ್ಯ: ಕಾವೇರಿ ಪ್ರವಾಹದಿಂದ ಶವಸಂಸ್ಕಾರ (Cremation) ಮಾಡಲು ಪರದಾಡಿರುವಂತಹ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಮಹದೇವಪುರದಲ್ಲಿ ನಡೆದಿದೆ. ಕ್ಯಾನ್ಸರ್ನಿಂದ ನಿನ್ನೆ ಗ್ರಾಮದಲ್ಲಿ ಸುಲೋಚನಾ(48) ಎಂಬುವವರು ಮೃತಪಟ್ಟಿದ್ದರು. ಪ್ರವಾಹದಿಂದಾಗಿ ಎದೆ ಮಟ್ಟದ ನೀರಿನಲ್ಲಿ ಗ್ರಾಮಸ್ಥರು ಶವ ಹೊತ್ತು ಸ್ಮಶಾನಕ್ಕೆ ತೆರಳಿದ್ದಾರೆ. ಕಾವೇರಿ ನದಿ ಭೋರ್ಗರೆತಕ್ಕೆ ಪ್ರತಿವರ್ಷ ಸ್ಮಶಾನದ ರಸ್ತೆ ಜಲಾವೃತವಾಗುತ್ತದೆ. ಮಹಿಳೆಯ ಶವವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲು ಜನರು ಪರದಾಡಿದ್ದು, ಕೊನೆಗೆ ಪ್ರವಾಹದ ನೀರಲ್ಲೆ ಮಹಿಳೆಯ ಶವವನ್ನು ಗ್ರಾಮಸ್ಥರು ತೆಗೆದುಕೊಂಡು ಹೋದರು. ಇನ್ನೂ ಕಾವೇರಿ ನದಿಗೆ 1 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಹಿನ್ನೆಲೆ, ಕಾವೇರಿ ನದಿ ಪಾತ್ರದ ಜಮೀನುಗಳಿಗೆ ನೀರು ನುಗ್ಗಿದೆ.