ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ: ಹಿಂದುತ್ವವಾದಿಗಳಿಂದ ಕರಪತ್ರ ಹಂಚಿಕೆ, ನಿಷೇಧಾಜ್ಞೆ ಹೇರಿದ ಜಿಲ್ಲಾಡಳಿತ | Srirangapatna Jamiya Masjid Controversy Hindu Outfits Threatens to enter Mosque Prohibitory Orders Imposed


ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ: ಹಿಂದುತ್ವವಾದಿಗಳಿಂದ ಕರಪತ್ರ ಹಂಚಿಕೆ, ನಿಷೇಧಾಜ್ಞೆ ಹೇರಿದ ಜಿಲ್ಲಾಡಳಿತ

ಶ್ರೀರಂಗಪಟ್ಟಣ ಜಾಮಿಯಾ ಮಸೀದಿ

ಶ್ರೀರಂಗಪಟ್ಟಣದಲ್ಲಿ ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದ್ದರೂ, ಪಟ್ಟಣ ವ್ಯಾಪ್ತಿಯಲ್ಲಿ ಚುರುಕಿನ ಚಟುವಟಿಕೆಗಳು ಕಂಡು ಬರುತ್ತಿವೆ.

ಮಂಡ್ಯ: ತಾಲ್ಲೂಕಿನ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯನ್ನು (Jamia Masjid of Srirangapatna) ಪ್ರವೇಶಿಸಿ ತೀರುವುದಾಗಿ ಹಿಂದುತ್ವವಾದಿಗಳು ಶುಕ್ರವಾರ ಕರಪತ್ರಗಳನ್ನು ಹಂಚಿದ್ದಾರೆ. ಜಿಲ್ಲಾಡಳಿತ ನಿಷೇಧಾಜ್ಞೆ ಹೇರಿದ್ದರೂ, ಪಟ್ಟಣ ವ್ಯಾಪ್ತಿಯಲ್ಲಿ ಚುರುಕಿನ ಚಟುವಟಿಕೆಗಳು ಕಂಡು ಬರುತ್ತಿವೆ. ಮಂಡ್ಯಜಿಲ್ಲೆ ಮಂಡ್ಯ ತಾಲ್ಲೂಕಿನ ಉಪ್ಪರಕನಹಳ್ಳಿಯಲ್ಲಿ ಹಿಂದುತ್ವವಾದಿ ಮುಖಂಡ ಶಿವಕುಮಾರ್ ಆರಾಧ್ಯ ಈ ಸಂಬಂಧ ಕರಪತ್ರ ಹಂಚಿದ್ದು, ಪೊಲೀಸರಿಗೆ ಸೆಡ್ಡು ಹೊಡೆದಿದ್ದಾರೆ. ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿ ಈಗಾಗಲೇ 144ನೇ ವಿಧಿ ಅನ್ವಯ ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದೆ, ಕರಪತ್ರ ಹಂಚಿದರೆ ಬಂಧಿಸುವುದಾಗಿ ಪೊಲೀಸರು ಎಚ್ಚರಿಸಿದ್ದರೂ, ಕರಪತ್ರ ಹಂಚುವ ಪ್ರಕ್ರಿಯೆ ಸಾಗಿದೆ. ಮಂಡ್ಯದಲ್ಲಿ ನಾಳೆ (ಜೂನ್ 4) ಹಲವು ನಾಟಕೀಯ ಬೆಳವಣಿಗೆಗಳು ನಡೆಯಬಹುದು ಎಂದು ಅಂದಾಜಿಸಲಾಗಿದೆ.

ಹಿಂದುತ್ವ ಪರ ಸಂಘಟನೆಗಳು ಜಾಮಿಯಾ ಮಸೀದಿ ಚಲೋ ಚಳವಳಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಎಸ್.ಅಶ್ವಥಿ ಆದೇಶ ಹೊರಡಿಸಿದ್ದಾರೆ. ಐವರಿಗಿಂತ ಹೆಚ್ಚು ಜನರು ಒಂದೆಡೆ ಸೇರುವಂತಿಲ್ಲ ಎಂದು ತಿಳಿಸಲಾಗಿದೆ. ಮಸೀದಿ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಒತ್ತಾಯಿಸಿ ಜಾಥಾಗೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಕರೆ ನೀಡಿದ್ದಾರೆ. ಕುವೆಂಪು ವೃತ್ತದಿಂದ ಜಾಮಿಯಾ ಮಸೀದಿವರೆಗೆ ಜಾಥಾ ನಡೆಸಲು ಉದ್ದೇಶಿಸಲಾಗಿದೆ. ಈ ಜಾಥಾಕ್ಕೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಇಂದು (ಜೂನ್ 3) ಸಂಜೆ 6ರಿಂದ ಜೂನ್ 5ರವರೆಗೆ ಶ್ರೀರಂಗಪಟ್ಟಣ ಪುರಸಭೆ ವ್ಯಾಪ್ತಿಯ 5 ಕಿಮೀ ವ್ಯಾಪ್ತಿಯಲ್ಲಿ ಮದ್ಯಮಾರಾಟ ನಿಷೇಧಿಸಲಾಗಿದೆ. ಶನಿವಾರ ನಡೆಯಬೇಕಿದ್ದ ವಾರದ ಸಂತೆಯನ್ನೂ ಮುಂದೂಡಿ ಪುರಸಭೆ ಮುಖ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಸೀದಿಯಲ್ಲಿ ವಿದ್ಯಾರ್ಥಿಗಳ ವಾಸ್ತವ್ಯ

ಜಾಮಿಯಾ ಮಸೀದಿಯಲ್ಲಿ ಮದರಸಾ ವಿದ್ಯಾರ್ಥಿಗಳು ವಾಸ್ತವ್ಯ ಹೂಡಿದ್ದಾರೆ ಎಂದು ವಿಶ್ವ ಹಿಂದೂ ಪರಿಷತ್ ಜಿಲ್ಲಾಡಳಿತಕ್ಕೆ ದೂರು ನೀಡಿದೆ. ಮಸೀದಿಯಲ್ಲಿ ಮದರಸಾ ವಿದ್ಯಾರ್ಥಿಗಳಿರುವ ವಿಡಿಯೊ ಒಂದು ಈಗ ವೈರಲ್ ಆಗಿದೆ. ಮದರಸಾವನ್ನು ಖಾಲಿ ಮಾಡಬೇಕು ಎಂದು ವಿಎಚ್​ಪಿ ಒತ್ತಾಯಿಸಿದೆ.

TV9 Kannada


Leave a Reply

Your email address will not be published. Required fields are marked *