ಶ್ರೀಲಂಕಾದ ಕಡಲ ತೀರದಲ್ಲಿ ಮೊನ್ನೆ ಮೊನ್ನೆ ಒಂದು ಹಡಗಿಗೆ ಬೆಂಕಿ ಬಿದ್ದು ಭಾರೀ ಅನಾಹುತವಾಗಿದೆ. ಹಡಗು ಸುಟ್ಟು ಹೋಗಿದ್ದರೂ ಅದರಲ್ಲಿದ್ದ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ. ರಾಸಾಯನಿಕ ತುಂಬಿದ್ದ ಹಡಗು ಡ್ಯಾಮೇಜ್ ಆಗಿದ್ರಿಂದ ಶ್ರೀಲಂಕಾ ಕಡಲ ತೀರ ಮಲೀನವಾಗ್ತಿದೆ.

ನೋಡ ನೋಡುತ್ತಲೇ ಹಡಗು ಉರಿದು ಉರಿದು ಸಾಗರದ ಒಡಲಲ್ಲಿ ಲೀನವಾಗಿಬಿಟ್ಟಿದೆ. ಇಷ್ಟು ದೊಡ್ಡ ಹಡಗಿನಲ್ಲಿ ಇದ್ದಷ್ಟು ಸರಕುಗಳೆಲ್ಲವೂ ಹೊತ್ತಿ ಉರಿದಿವೆ. ಇಲ್ಲಾ, ಸಮುದ್ರದ ಮಡಿಲು ಸೇರಿ ಬಿಟ್ಟಿವೆ.

ಸಿಂಗಾಪುರದ ಎಕ್ಸ್ ಪ್ರೆಸ್ ಪರ್ಲ್ ಸರಕು ಸಾಗಣೆ ಹಡಗು
ಅಪಘಾತಕ್ಕೀಡಾಗಿರುವ ಹಡಗು ಗುಜರಾತ್​​ನಿಂದ ಕೊಲಂಬೊ ಬಂದರಿಗೆ ತೈಲ ಮತ್ತು ರಾಸಾಯನಿಕಗಳನ್ನು ಸಾಗಿಸುತ್ತಿತ್ತು. ಕೊಲಂಬೊ ಕರಾವಳಿಯಿಂದ 9.5 ನಾಟಿಕಲ್ ಮೈಲಿ ದೂರದಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಆದರೆ, ಹಡಗು ಸೇರಬೇಕಾದ ಜಾಗಕ್ಕೆ ತಲುಪಲೇ ಇಲ್ಲ. ಸಾಗರದ ಮಧ್ಯೆಯೇ ಬೆಂಕಿಗೆ ಆಹುತಿಯಾಗಿ ಹೋಯಿತು.

ನಿತ್ಯ ವಿಶ್ವದ ಸುತ್ತೆಲ್ಲ ನೂರಾರು ಹಡಗುಗಳು ಸರಕುಗಳನ್ನು ಸಾಗಿಸುತ್ತಲೇ ಇರುತ್ತವೆ. ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಸಮುದ್ರ ಮಾರ್ಗವಾಗಿ ಕೋಟ್ಯಾಂತರ ರೂಪಾಯಿ ಮೌಲ್ಯದ ಸರಕುಗಳನ್ನು ಹೊತ್ತೊಯ್ಯುತ್ತವೆ. ವಾರಗಟ್ಟಲೇ ಕ್ರಮಿಸುವ ಈ ದೊಡ್ಡ ದೊಡ್ಡ ಹಡಗುಗಳನ್ನು ಕೆಲವೇ ಕೆಲವು ಸಿಬ್ಬಂದಿ ನಿರ್ವಹಿಸುತ್ತಾ ಇರುತ್ತಾರೆ. ಹಗಲು ರಾತ್ರಿ ಕಣ್ಣಲ್ಲಿ ಕಣ್ಣಿಟ್ಟುಕೊಂಡು ಹಡಗನ್ನು ತಲುಬೇಕಾದ ಜಾಗಕ್ಕೆ ತಲುಪಿಸುತ್ತಾರೆ. ಆದ್ರೆ ಕೆಲವೊಮ್ಮೆ ಹೀಗೆ ಅಗ್ನಿ ಅನಾಹುತ ಆಗಿಬಿಟ್ರೆ ರಕ್ಷಣೆ ಮಾಡೋದೇ ಒಂದು ಸವಾಲು.

ಈ ಹಡಗು ಕೂಡ ಅಷ್ಟೇ. ನಿಧಾನವಾಗಿ ಶ್ರೀಲಂಕಾದ ಕೊಲಂಬೊದ ಬಂದರಿನತ್ತ ಬರ್ತಾ ಇತ್ತು. ದಿಢೀರ್ ಅಂತ ಬೆಂಕಿ ಕಾಣಿಸಿಕೊಂಡಿತ್ತು. ಮೊದಲು ಸಣ್ಣ ಪ್ರಮಾಣದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಸಿಬ್ಬಂದಿ ಅಷ್ಟೊಂದು ಆತಂಕಗೊಳ್ಳಲಿಲ್ಲ. ಹಡಗಿನಲ್ಲಿರುವ ಅಗ್ನಿ ಶಾಮಕ ವ್ಯವಸ್ಥೆಯನ್ನು ಬಳಸಿಕೊಂಡು ಬೆಂಕಿ ನಂದಿಸಲು ಪ್ರಯತ್ನಿಸಿದ್ದರು. ಹಡಗಿನಲ್ಲಿ ನೀರು ಪಂಪ್ ಮಾಡುವ ವ್ಯವಸ್ಥೆ ಇದ್ದೇ ಇರುತ್ತೆ. ಆದರೆ, ಬೆಂಕಿ ನಿಯಂತ್ರಣಕ್ಕೆ ಬರುವ ಯಾವುದೇ ಮುನ್ಸೂಚನೆ ಕಾಣಿಸಲೇ ಇಲ್ಲ. ತಕ್ಷಣ ಹಡಗಿನ ಅಧಿಕಾರಿಗಳು ಕಂಟ್ರೋಲ್ ರೂಂಗೆ ಮಾಹಿತಿ ನೀಡಿದ್ರು. ಕೂಡಲೇ ಶ್ರೀಲಂಕಾದ ಬಂದರು ಅಧಿಕಾರಿಗಳು ಅಲರ್ಟ್ ಆಗಿ ಅಲ್ಲಿಗೆ ನೀರಿನ ಟ್ಯಾಂಕರ್ ಇರುವ ಹಡಗುಗಳನ್ನು ಕಳುಹಿಸಿದ್ರು. ಕೆಲವೇ ಹೊತ್ತಿನಲ್ಲಿ ನೀರಿನ ಟ್ಯಾಂಕರ್ ಇರುವ ಹಡಗುಗಳು ಇಲ್ಲಿಗೆ ಧಾವಿಸಿಬಂದವು

ಹೊತ್ತಿ ಉರಿಯುತ್ತಿರುವ ಬೆಂಕಿ ನಂದಿಸಲು ಹಡಗುಗಳಿಂದ ಕಾರ್ಯಾಚರಣೆ ನಡೆಸಲಾಯ್ತು. ನಿರಂತರವಾಗಿ ಗಂಟೆಗಟ್ಟಲೇ ಈ ಕಾರ್ಯಾಚರಣೆ ಕಂಟಿನ್ಯೂ ಆಗಿತ್ತು. ಆದ್ರೆ ಅಷ್ಟರಲ್ಲೇ ಹಡಗಿನ ಎಲ್ಲಾ ಮೂಲೆಗಳಿಗೂ ಬೆಂಕಿ ವ್ಯಾಪಿಸಿಬಿಟ್ಟಿತ್ತು. ಇದರಿಂದ ಬೆಂಕಿ ಕಂಟ್ರೋಲ್ ಮಾಡುವುದು ಅಷ್ಟೊಂದು ಸುಲಭವಾಗಿರಲಿಲ್ಲ. ಈ ಮಧ್ಯೆ ಹಡಗಿನಲ್ಲಿ ಸಿಬ್ಬಂದಿ ಹೇಗಾದರೂ ಮಾಡಿ ಪಾರಾದರೆ ಸಾಕು ಅಂತ ಲೈಫ್​​ ಜಾಕೆಟ್ ಧರಿಸಿ ಸಾಗರಕ್ಕೆ ಜಿಗಿಯುತ್ತಿದ್ದರು. ಆದರೆ ಹಡಗಿನಲ್ಲಿದ್ದ ಬೃಹತ್ ಪ್ರಮಾಣದ ಸರಕುಗಳು ಮಾತ್ರ ಅಗ್ನಿಗೆ ಆಹುತಿಯಾಗಿ ಹೋಗ್ತಾ ಇದ್ವು. ಹಡಗಿನ ಕೆಳಭಾಗಕ್ಕೆ ಬೆಂಕಿ ವ್ಯಾಪಿಸಿದ ಪರಿಣಾಮ ಸರಕು ತುಂಬಿದ ಕಂಟೈನರ್ಗಳು ಸಮುದ್ರದ ಪಾಲಾಗಿಬಿಟ್ಟವು.

ದಟ್ಟವಾದ ಹೊಗೆ ಆವರಿಸಿತ್ತು. ಸಾಗರದ ಮಧ್ಯೆ ಹಡಗು ಹೊತ್ತಿ ಉರಿಯುತ್ತಲೇ ಇತ್ತು. ಇದು ಸಾಮಾನ್ಯ ಸರಕು ತುಂಬಿದ ಹಡಗಾಗಿದ್ದರೆ ಮತ್ತಷ್ಟು ಆತಂಕ ತರ್ತಾ ಇರಲಿಲ್ಲ. ಆದರೆ ಈ ಹಡಗಿನಲ್ಲಿ ಬರೋಬ್ಬರಿ 325 ಮೆಟ್ರಿಕ್ ಟನ್ ಇಂಧನ ಟ್ಯಾಂಕ್​​ಗಳು ಮತ್ತು ನೈಟ್ರಿಕ್ ಆ್ಯಸಿಡ್​​ನ 1,486 ಕಂಟೇನರ್ ಗಳು ಇತ್ತು. ಹೀಗಾಗಿ ಇದೆಲ್ಲ ಸಾಗರಕ್ಕೆ ಸೋರಿಕೆಯಾಗಿ ಈಗ ಶ್ರೀಲಂಕಾ ಕಡಲ ತೀರ ಮಾಲಿನ್ಯದ ಅಪಾಯವನ್ನು ಎದುರಿಸುತ್ತಿದೆ. ತೈಲ ಸೋರಿಕೆಯಾಗಿ, ರಾಸಾಯನಿಕ ಸೋರಿಕೆಯಾಗಿ ಸಾಗರದ ಜಲಚರಗಳಿಗೆ ಅಪಾಯ ತಂದುಬಿಟ್ಟಿವೆ.

ಬೆಂಕಿ ಆರಿಸಲು ಹೋದ ಹಡಗುಗಳು ಅಲ್ಲಿನ ಸಿಬ್ಬಂದಿಗಳನ್ನೂ ರಕ್ಷಣೆ ಮಾಡಿತ್ತು. ಆದರೆ, ರಾಸಾಯನಿಕ ಸೋರಿಕೆಯಾಗಿ ಅಪಾಯ ತರಬಾರದೆಂದು ವಿಶೇಷ ಹೆಲಿಕಾಪ್ಟರ್ ಕೂಡ ಇಲ್ಲಿಗೆ ಧಾವಿಸಿತ್ತು. ಹೆಲಿಕಾಪ್ಟರ್ ಮೂಲಕ ಬೆಂಕಿ ಆರಿಸುವ ರಾಸಾಯನಿಕಗಳನ್ನು ಚೆಲ್ಲಲಾಯ್ತು. ಆದರೂ ಬೆಂಕಿ ನಿಯಂತ್ರಣಕ್ಕೆ ತರೋದು ಕಷ್ಟವಾಗಿ ಹೋಯ್ತು. ಬೆಂಕಿ ನಿಯಂತ್ರಣಕ್ಕೆ ಬಂದು ಹಡಗಿನ ಕೆಲವು ಭಾಗಗಳು ಮಾತ್ರ ಹಾಗೆ ಉಳಿದುಕೊಂಡಿವೆ. ಆದ್ರೆ ಈಗಾಗಲೇ ಕೆಲವು ಕಂಟೈನರ್ ಗಳು ಡ್ಯಾಮೇಜ್ ಆಗಿದ್ರಿಂದ ರಾಸಾಯನಿಕ ಮತ್ತು ತೈಲ ಸಂಗ್ರಹ ಸಾಕಷ್ಟು ಸೋರಿಕೆಯಾಗಿ ಹೋಗಿದೆ.

ತೈಲ ಸೋರಿಕೆಯಾದಲ್ಲಿ ಅದು ಸೂಕ್ಷ್ಮ ಪ್ರದೇಶ ಮತ್ತು ಪ್ರಮುಖ ಪ್ರವಾಸಿ ತಾಣವಾದ ನೆಗೊಂಬೊ ಲಗೂನ್‌ನತ್ತ ಪ್ರವಹಿಸಲಿದೆ ಎಂದು ಸಾಗರ ಪರಿಸರ ಸಂರಕ್ಷಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಹಡಗಿನ ಅವಶೇಷ ಮತ್ತು ಇತರ ವಸ್ತುಗಳು ಕಾಣಿಸಿದಲ್ಲಿ ಅವುಗಳಿಂದ ದೂರ ಇರುವಂತೆ ತೀರ ಪ್ರದೇಶದ ಜನರಿಗೆ ಈಗಾಗಲೇ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಶ್ರೀಲಂಕಾದ ಕಡಲ ತೀರದಲ್ಲಿ ಅಗ್ನಿ ಅನಾಹುತಕ್ಕೆ ಸಿಲುಕಿರುವ ‘ಎಕ್ಸ್‌ಪ್ರೆಸ್‌ ಪರ್ಲ್‌’ ಹಡಗು ಮುಳುಗುತ್ತಿದೆ. ಜೊತೆಗೆ, ಒಡೆದು ಹೋಳಾಗುವ ಭೀತಿ ಎದುರಾಗಿದೆ. ಅದರಿಂದ ಹೊರಚೆಲ್ಲುವ ಅಪಾರ ಪ್ರಮಾಣದ ತೈಲವು ತೀರ ಪ್ರದೇಶದಲ್ಲಿ ಭಾರೀ ಮಾಲಿನ್ಯ ಸೃಷ್ಟಿ ಮಾಡುವ ಸಾಧ್ಯತೆಗಳಿವೆ. ಇನ್ನೊಂದೆಡೆ ಕಡಲತೀರದಲ್ಲಿ ಸೃಷ್ಟಿಯಾಗುವ ಮಾಲಿನ್ಯವನ್ನು ನಿಯಂತ್ರಿಸಲು ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಶ್ರೀಲಂಕಾದ ಸಮುದ್ರ ಪರಿಸರ ಸಂರಕ್ಷಣಾ ಪ್ರಾಧಿಕಾರ ಹೇಳಿದೆ.

ಭಾರತದಿಂದ ನೆರವಿನ ಹಸ್ತ
ಕೊಲಂಬೊದಿಂದ ಮರಾವಿಲಾವರೆಗಿನ ಕಡಲ ತೀರಕ್ಕೆ ಹಡಗಿನಿಂದ ಬರುವ ರಾಸಾಯನಿಕಗಳು ಮತ್ತು ಇತರ ವಸ್ತುಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗುವುದು ಎಂದು ರಾಷ್ಟ್ರೀಯ ಜಲಸಂಪನ್ಮೂಲ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ನಾರಾ) ತಿಳಿಸಿದೆ. ಹಡಗಿನಲ್ಲಿ ಕಾಣಿಸಿಕೊಂಡ ಬೆಂಕಿ ಈಗಾಗಲೇ ನಿಯಂತ್ರಣ ಮೀರಿ ವ್ಯಾಪಿಸಿದೆ. ಒಂದು ಹಡಗು ಉರಿಯುತ್ತಲೇ ಇದೆ. ಇದರ ಬೆಂಕಿ ನಂದಿಸಲು ಭಾರತವು ಶ್ರೀಲಂಕಾಕ್ಕೆ ನೆರವಿನ ಹಸ್ತ ಚಾಚಿದೆ. ಭಾರತೀಯ ಕರಾವಳಿ ಕಾವಲು ಪಡೆಯ ಮೂರು ಹಡಗು ಬೆಂಕಿ ನಂದಿಸುವ ಕಾರ್ಯದಲ್ಲಿ ನಿರತವಾಗಿವೆ. ಶ್ರೀಲಂಕಾದ ನೌಕಾಪಡೆಯ ಹಡಗು ಮತ್ತು ನಾಲ್ಕು ಖಾಸಗಿ ಟಗ್‌ಗಳೂ ಉರಿಯುತ್ತಿರುವ ಹಡಗಿನ ಮೇಲೆ ನೀರು ಸುರಿಸುತ್ತಿವೆ. ಮಿಲಿಟರಿ ಹೆಲಿಕಾಪ್ಟರ್‌ನಿಂದ ಅಗ್ನಿನಂದಕ ರಾಸಾಯನಿಕಗಳನ್ನು ಹಾಕಲಾಗುತ್ತಿದೆ. ಈ ಹಡಗಿನಲ್ಲಿ 325 ಮೆಟ್ರಿಕ್ ಟನ್ ಇಂಧನ ಟ್ಯಾಂಕ್‌ಗಳು ಮತ್ತು ನೈಟ್ರಿಕ್ ಆ್ಯಸಿಡ್‌ನ 1,486 ಕಂಟೇನರ್‌ಗಳಿವೆ.

186 ಮೀಟರ್ (610 ಅಡಿ) ಉದ್ದದ ಹಡಗನ್ನು ಬೆಂಕಿ ತೀರಾ ದುರ್ಬಲಗೊಳಿಸಿದೆ. ಅದು ಒಡೆದು ತೈಲ ಹೊರಚೆಲ್ಲಲಿದೆ ಎಂದು ಶ್ರೀಲಂಕಾದ ಸಮುದ್ರ ಪರಿಸರ ಸಂರಕ್ಷಣಾ ಪ್ರಾಧಿಕಾರ ತಿಳಿಸಿದೆ. ಸಿಂಗಪುರದ ಸರಕುಸಾಗಣೆ ಹಡಗು ಶ್ರೀಲಂಕಾದ ಕೊಲಂಬೊ ಬಳಿ ಮುಳುಗಿದ್ದು, ತೈಲ ಸೋರಿಕೆಯಾಗುವ ಭೀತಿ ಎದುರಾಗಿದೆ ಎಂದು ವರದಿಯಾಗಿದೆ. ಇದೇ ಹಡಗಿನಲ್ಲಿ ಕಳೆದ ವಾರ ಅಗ್ನಿ ಅನಾಹುತ ಸಂಭವಿಸಿತ್ತು.

ಬೆಂಕಿ ನಂದಿಸುವ ಯತ್ನಗಳು ಫಲಪ್ರದವಾಗದ ಕಾರಣ ತೈಲ ಸೋರಿಕೆ ಅನಾಹುತ ಎದುರಿಸಲು ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ. ಎಂವಿ ಎಕ್ಸ್‌ಪ್ರೆಸ್ ಪರ್ಲ್’ ಹಡಗು ಮುಳುಗುವ ಭೀತಿ ಎದುರಾಗಿದೆ ಎಂದು ‘ಕೊಲಂಬೊ ಗ್ಯಾಜೆಟ್’ ಪತ್ರಿಕೆ ವರದಿ ಮಾಡಿದೆ. ತೈಲ ಸೋರಿಕೆಯಾದಲ್ಲಿ ಅದು ಸೂಕ್ಷ್ಮ ಪ್ರದೇಶ ಮತ್ತು ಪ್ರಮುಖ ಪ್ರವಾಸಿ ತಾಣವಾದ ನೆಗೊಂಬೊ ಲಗೂನ್‌ನತ್ತ ಪ್ರವಹಿಸಲಿದೆ ಎಂದು ಸಾಗರ ಪರಿಸರ ಸಂರಕ್ಷಣಾ ಪ್ರಾಧಿಕಾರ ಎಚ್ಚರಿಕೆ ನೀಡಿದೆ. ಹಡಗಿನ ಅವಶೇಷ ಮತ್ತು ಇತರ ವಸ್ತುಗಳು ಕಾಣಿಸಿದಲ್ಲಿ ಅವುಗಳಿಂದ ದೂರ ಇರುವಂತೆ ತೀರ ಪ್ರದೇಶದ ಜನರಿಗೆ ಈಗಾಗಲೇ ಪ್ರಾಧಿಕಾರ ಎಚ್ಚರಿಕೆ ನೀಡಿದೆ.

ಅಂದ್ಹಾಗೆ ಅವಘಡತಕ್ಕೀಡಾಗಿರುವ ಹಡಗು ಗುಜರಾತಿನ ಹಾಜಿರಾಯಾದಿಂದ ಕೊಲಂಬೊ ಬಂದರಿಗೆ ತೈಲ ಮತ್ತು ರಾಸಾಯನಿಕಗಳನ್ನು ಸಾಗಿಸುತ್ತಿತ್ತು. ಕೊಲಂಬೊ ಕರಾವಳಿಯಿಂದ 9.5 ನಾಟಿಕಲ್ ಮೈಲಿ ದೂರದಲ್ಲಿ ಮೇ 20ರಂದು ಹಡಗಿನಲ್ಲಿ ಬೆಂಕಿ ಕಾಣಿಸಿಕೊಂಡಿತ್ತು.

The post ಶ್ರೀಲಂಕಾ ಕಡಲತೀರದಲ್ಲಿ ಹಡಗಿನಲ್ಲಿ ಬೆಂಕಿ.. ಮಾಲಿನ್ಯದ ಭೀತಿ appeared first on News First Kannada.

Source: newsfirstlive.com

Source link