ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಫೈನಲ್​​ ಮತ್ತು ಇಂಗ್ಲೆಂಡ್​​ ವಿರುದ್ಧದ ಸರಣಿಗೆ ಪ್ರಮುಖ ಆಟಗಾರರನ್ನು ಒಳಗೊಂಡ ತಂಡ, ಜೂನ್​ 2ರಂದು ಇಂಗ್ಲೆಂಡ್​ಗೆ ಹಾರಲಿದೆ. ಹೀಗಾಗಿ ಮತ್ತೊಂದು ಪ್ರತ್ಯೇಕ ತಂಡ ರಚಿಸಿ ಶ್ರೀಲಂಕಾ ಪ್ರವಾಸಕ್ಕೆ ಕಳುಹಿಸಲು ಬಿಸಿಸಿಐ ಸಿದ್ಧತೆ ನಡೆಸಿದೆ. ಇದರ ನಡುವೆ ಈ ತಂಡಕ್ಕೆ ನಾಯಕನಾರು ಅನ್ನೋ ಪ್ರಶ್ನೆ ಉದ್ಭವವಾಗಿದೆ. ಜೊತೆಗೆ ಹಾರ್ದಿಕ್​ ಪಾಂಡ್ಯ- ಶಿಖರ್ ಧವನ್​ ಪೈಪೋಟಿ ನಡೆಯುತ್ತಿದೆ.

ಇನ್ನು ಈ ಕುರಿತು ಮಾತನಾಡಿರುವ ಟೀಮ್​ ಇಂಡಿಯಾ ವೇಗಿ ದೀಪಕ್​ ಚಹರ್​, ಶ್ರೀಲಂಕಾ ವಿರುದ್ಧದ ಸೀಮಿತ ಓವರ್​ಗಳ ಸರಣಿಗೆ ನಾಯಕನ ಸ್ಥಾನಕ್ಕೆ ಶಿಖರ್​​ ಧವನ್​ ಉತ್ತಮ ಆಯ್ಕೆ ಎಂದಿದ್ದಾರೆ. ಧವನ್​ ರಾಷ್ಟ್ರೀಯ ತಂಡದಲ್ಲಿ ದೀರ್ಘಕಾಲ ಆಡಿದ ಅನುಭವ ಹೊಂದಿದ್ದಾರೆ. ಜೊತೆಗೆ ಅವರು ಹಿರಿಯ ಆಟಗಾರರು. ಇದು ಕಿರಿಯ ಆಟಗಾರರಿಗೆ ಸಹಾಯಕವಾಗುತ್ತೆ. ಹೀಗಾಗಿ ಅವರೇ ನಾಯಕನಾಗಲು ಉತ್ತಮ ಆಯ್ಕೆ ಎಂದು ಹೇಳಿದ್ದಾರೆ.

ಇನ್ನು ಎರಡೂ ಮಾದರಿಯ ಕ್ರಿಕೆಟ್​ಗೆ ಇಬ್ಬರನ್ನು ನಾಯಕನಾಗಿ ಆಯ್ಕೆ ಮಾಡಲು ಆಯ್ಕೆ ಸಮಿತಿ ಸದಸ್ಯರು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ಗುರುವಾರ ಟೀಮ್​ ಇಂಡಿಯಾ ಮುಖ್ಯ ಕೋಚ್​ ರವಿಶಾಸ್ತ್ರಿ ಇಂಗ್ಲೆಂಡ್​ ಹೋಗಲಿರುವ ಕಾರಣ, ಮತ್ತೊಂದು ತಂಡಕ್ಕೆ ಕನ್ನಡಿಗ, ದಿ ವಾಲ್​ ರಾಹುಲ್​ ದ್ರಾವಿಡ್​ರನ್ನು ಹೆಡ್​ ಕೋಚ್​ ಆಗಿ ಆಯ್ಕೆ ಮಾಡಲಾಗಿದೆ.

ಚೆನ್ನೈ ಸೂಪರ್​ ಕಿಂಗ್ಸ್​ನಲ್ಲಿ ಮಿಂಚಿನ ಪ್ರದರ್ಶನ ನೀಡಿದ ಚಹರ್​, ಲಂಕಾ ಪ್ರವಾಸಕ್ಕೆ ಆಯ್ಕೆಯಾಗುವವರ ರೇಸ್​​ನಲ್ಲಿ ಮುಂಚೂಣಿಯಲ್ಲಿದ್ದಾರೆ. ಸಿಂಹಳಿಯರ ವಿರುದ್ಧ ಜುಲೈನಲ್ಲಿ ತಲಾ ಮೂರು ಪಂದ್ಯಗಳ ಏಕದಿನ ಮತ್ತು ಟಿ20 ಸರಣಿಯನ್ನ ಭಾರತ ಆಡಲಿದೆ.

The post ಶ್ರೀಲಂಕಾ ಸರಣಿಗೆ ಶಿಖರ್ ಧವನ್​​ ನಾಯಕನಾಗಲಿ- ದೀಪಕ್ ಚಹರ್ appeared first on News First Kannada.

Source: newsfirstlive.com

Source link