
‘ಶ್ರೀ ಅಲ್ಲಮ ಪ್ರಭು’ ಚಿತ್ರದ ಸುದ್ದಿಗೋಷ್ಠಿ
Pramod Muthalik: ‘ವ್ಯೋಮಕಾಯ ಶ್ರೀ ಅಲ್ಲಮ ಪ್ರಭು’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದೆ. ಸಚಿನ್ ಸುವರ್ಣ, ನೀನಾಸಂ ಅಶ್ವತ್ಥ್, ರಮೇಶ್ ಪಂಡಿತ್, ಶೃಂಗೇರಿ ರಾಮಣ್ಣ, ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.
ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಅವರಿಗೆ ಸಿನಿಮಾ ಕ್ಷೇತ್ರದ ಜೊತೆ ಯಾವುದೇ ನಂಟು ಇಲ್ಲ. ಹಾಗಿದ್ದರೂ ಕೂಡ ಅವರೊಂದು ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ‘ವ್ಯೋಮಕಾಯ ಶ್ರೀ ಅಲ್ಲಮ ಪ್ರಭು’ (Sri Allama Prabhu) ಸಿನಿಮಾದ ಟ್ರೇಲರ್ ಲಾಂಚ್ ಸಮಾರಂಭಕ್ಕೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಶುಭ ಕೋರಿದ್ದಾರೆ. ಈ ಚಿತ್ರಕ್ಕೆ ಶರಣ್ ಗದ್ವಾಲ್ ನಿರ್ದೇಶನ ಮಾಡಿದ್ದಾರೆ. ಮಹಾವೀರ ಪ್ರಭು ಮತ್ತು ಮಾಧವಾನಂದ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ನನಗೂ ಚಿತ್ರರಂಗಕ್ಕೂ ಸಂಬಂಧವಿಲ್ಲ. ನನ್ನ ಕ್ಷೇತ್ರವೇ ಬೇರೆ. ಆದರೂ ನನ್ನನ್ನು ಏಕೆ ಕರೆದರು ಎಂದು ಯೋಚಿಸುತ್ತಿದೆ. ಈ ತಂಡದವರು ನನ್ನ ಮೇಲಿಟ್ಟಿರುವ ಪ್ರೀತಿ ಅಪಾರ. ಹಾಗಾಗಿ ಬಂದಿದ್ದೀನಿ. ಕಮರ್ಷಿಯಲ್ ಚಿತ್ರಗಳ ಪೈಪೋಟಿ ಇರುವ ಈ ಸಮಯದಲ್ಲಿ ಇಂತಹ ಕಥೆ ಆಯ್ದುಕೊಂಡಿರುವ ನಿರ್ಮಾಪಕರಿಗೆ ಮೊದಲು ಧನ್ಯವಾದ ತಿಳಿಸಬೇಕು’ ಎಂದಿದ್ದಾರೆ ಪ್ರಮೋದ್ ಮುತಾಲಿಕ್.
‘ವೀರಭೂಮಿ, ಧರ್ಮಭೂಮಿ, ಪುಣ್ಯಭೂಮಿ ಅಂತ ಬೇರೆ ಯಾವ ದೇಶಕ್ಕೂ ಹೆಸರಿಲ್ಲ. ಆ ಎಲ್ಲಾ ಹೆಸರುಗಳು ಇರುವುದು ನಮ್ಮ ದೇಶಕ್ಕೆ ಮಾತ್ರ. ಭಾರತಕ್ಕೆ ಈ ರೀತಿಯ ಹೆಸರು ಬರಲು ಸಾಕಷ್ಟು ಜನ ಸಾಧು-ಸಂತರು ಇಲ್ಲಿ ಅವತರಿಸುವುದೇ ಕಾರಣ. ಅಂತಹ ಮಹಾಪುರುಷರಲ್ಲಿ ಒಬ್ಬರಾದ ಅಲ್ಲಮಪ್ರಭುಗಳ ಕುರಿತಾದ ಈ ಸಿನಿಮಾ ಯಶಸ್ವಿಯಾಗಲಿ’ ಎಂದು ಪ್ರಮೋದ್ ಮುತಾಲಿಕ್ ಹಾರೈಸಿದ್ದಾರೆ.
‘ವ್ಯೋಮಕಾಯ ಶ್ರೀ ಅಲ್ಲಮ ಪ್ರಭು’ ಸಿನಿಮಾಗೆ ನಟ ‘ನೆನಪಿರಲಿ’ ಪ್ರೇಮ್ ಕೂಡ ಶುಭ ಕೋರಿದ್ದಾರೆ. ‘ಹಿಂದೆ ಎಷ್ಟೋ ಜನ ನಮ್ಮ ದೇಶದ ಸಂಪತ್ತು ಲೂಟಿ ಹೊಡೆದರೂ, ಇನ್ನೂ ನಮ್ಮಲ್ಲಿ ಸಂಪತ್ತು ಇದೆ ಅಂದರೆ ಅದಕ್ಕೆ ಅಲ್ಲಮಪ್ರಭುಗಳಂತಹ ಸಾಧು-ಸಂತರ ಆಶೀರ್ವಾದವೇ ಕಾರಣ’ ಎಂಬುದು ಪ್ರೇಮ್ ಮಾತು.