ಮಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಸೇರಿದಂತೆ ಕೆಲ ದೇವಸ್ಥಾನಗಳಿಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ ರಾಜೇಂದ್ರ ನೋಟೀಸ್ ನೀಡಿದ್ದಾರೆ. ಲಾಕ್ ಡೌನ್ ಇದ್ದರೂ ದೇವಸ್ಥಾನಗಳಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಹಿನ್ನೆಲೆಯಲ್ಲಿ ಈ ನೋಟೀಸ್ ನೀಡಲಾಗಿದೆ.

ಧರ್ಮಸ್ಥಳ ಸೇರಿದಂತೆ ಕೆಲವು ದೇವಸ್ಥಾನಗಳ ಆಡಳಿತ ಮಂಡಳಿಗಳು ಲಾಕ್ ಡೌನ್ ಇದ್ದರೂ ಭಕ್ತರಿಗೆ ದರ್ಶನ ವ್ಯವಸ್ಥೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ನೋಟಿಸ್ ಜಾರಿಗೊಳಿಸಿರುವ ಡಿಸಿ, ಕಡ್ಡಾಯವಾಗಿ ದರ್ಶನ ವ್ಯವಸ್ಥೆ ಯನ್ನು ಸ್ಥಗಿತಗೊಳಿಸುವಂತೆ ಸೂಚನೆ ನೀಡಿದ್ದಾರೆ.

ಅಲ್ಲದೆ ಬೇರೆ ಜಿಲ್ಲೆಗಳಿಂದ ಬರುವ ಭಕ್ತರ ವಾಹನ ಸೀಝ್ ಮಾಡುವಂತೆ ಹಾಗೂ ಧರ್ಮಸ್ಥಳ, ಸುಬ್ರಹ್ಮಣ್ಯ ಕಡೆಗೆ ಹೋಗುವ ರಸ್ತೆಗಳಲ್ಲಿ ಅಲ್ಲಲ್ಲಿ ಬ್ಯಾರಿಕೇಡ್ ಹಾಕಲು ಸೂಚನೆ ನೀಡಿದ್ದಾರೆ. ಪೆರಿಯಶಾಂತಿ, ಚಾರ್ಮಾಡಿ ಹಾಗೂ ಉಜಿರೆ ಭಾಗದಲ್ಲಿ ಬ್ಯಾರಿಕೇಡ್ ಹಾಕಿ ತಪಾಸಣೆ ಕಠಿಣಗೊಳಿಸಲು ಡಿಸಿ ಸೂಚಿಸಿದ್ದಾರೆ. ಇದನ್ನೂ ಓದಿ: ವಿಶ್ವನಾಥ್​ರನ್ನು ಪಕ್ಕದಲ್ಲಿ ಕೂರಿಸಿಕೊಳ್ಳಲು ಸಾರಾ ಹಿಂದೇಟು

ಸದ್ಯ ಸೋಮವಾರದಿಂದ ರಾಜ್ಯದಲ್ಲಿ ನಯಾ ಲಾಕ್ ಡೌನ್ ಅನ್ನು ಸಿಎಂ ಘೋಷಣೆ ಮಾಡಿದ್ದು, 16 ಜಿಲ್ಲೆಗಳಲ್ಲಿ ಮತ್ತಷ್ಟು ನಿಯಮ ಸಡಿಲಿಕೆ ಮಾಡಿದ್ದಾರೆ. ಶೇ.5 ಕ್ಕಿಂತ ಕಡಿಮೆ ಪಾಸಿಟಿವಿಟಿ ದರ ಇರುವ ಜಿಲ್ಲೆಗಳಾದ ಉತ್ತರ ಕನ್ನಡ, ಬೆಳಗಾವಿ, ಮಂಡ್ಯ, ಕೊಪ್ಪಳ, ಚಿಕ್ಕಬಳ್ಳಾಪುರ, ತುಮಕೂರು, ಕೋಲಾರ, ಬೆಂಗಳೂರು ನಗರ (ಬಿಬಿಎಂಪಿ ಸೇರಿದಂತೆ), ಗದಗ, ರಾಯಚೂರು, ಬಾಗಲಕೋಟೆ, ಕಲಬುರಗಿ, ಹಾವೇರಿ, ರಾಮನಗರ, ಯಾದಗಿರಿ ಹಾಗೂ ಬೀದರ ಜಿಲ್ಲೆಗಳಿಗೆ ಸಡಿಲಿಕೆ ನೀಡಲಾಗಿದೆ. ಈ ಜಿಲ್ಲೆಗಳಲ್ಲಿ ಎಲ್ಲ ಅಂಗಡಿಗಳನ್ನು ಬೆಳಗ್ಗೆ 5 ರಿಂದ ಸಂಜೆ 5 ಗಂಟೆಯವರೆಗೆ ತೆರೆಯಲು ಅನುಮತಿ ನೀಡಲಾಗಿದೆ.

ಶೇ.5ಕ್ಕಿಂತ ಹೆಚ್ಚಿನ ಪಾಸಿಟಿವಿಟಿ ದರ ಇರುವ 13 ಜಿಲ್ಲೆಗಳಾದ ಹಾಸನ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಾಮರಾಜನಗರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಕೊಡಗು, ಧಾರವಾಡ, ಬಳ್ಳಾರಿ, ಚಿತ್ರದುರ್ಗ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಜೂನ್ 11ರ ಆದೇಶದಲ್ಲಿ ನೀಡಿರುವ ಸಡಿಲಿಕೆಗಳು ಮಾತ್ರ ಅನ್ವಯಿಸುತ್ತವೆ.

The post ಶ್ರೀ ಕ್ಷೇತ್ರ ಧರ್ಮಸ್ಥಳ ಸೇರಿದಂತೆ ದ.ಕ ಜಿಲ್ಲೆಯ ಕೆಲ ದೇವಸ್ಥಾನಗಳಿಗೆ ನೋಟೀಸ್ appeared first on Public TV.

Source: publictv.in

Source link