ಬೆಂಗಳೂರು: ಬೆಂಗಳೂರಿನ ಮುಖ್ಯ ಶಾಖೆಯನ್ನು ಹೊಂದಿರುವ ಶ್ರೀ ವಸಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ಬ್ಯಾಂಕ್ ಬಾಗಿಲು ಮುಚ್ಚಿರುವ ಸುದ್ದಿಗಳು ಕೇಳಿಬರುತ್ತಿವೆ. ಕೆಲವು ದಿನಗಳ ಹಿಂದೆ ಇದೇ ರೀತಿ ರಾಘವೇಂದ್ರ ಕೋ ಆಪರೇಟಿವ್ ಬ್ಯಾಂಕ್ ತನ್ನ ಗ್ರಾಹಕರಿಗೆ ಉಂಡೆ ನಾಮ ತಿಕ್ಕಿ ಅವರ ಭವಿಷ್ಯಕ್ಕೆ ಕೊಡಲಿ ಏಟನ್ನು ಹಾಕಿದೆ. ಈ ಹಗರಣದಲ್ಲಿಯೂ ಹಿಂದಿನ ರಾಘವೇಂದ್ರ ಕೋ ಆಪರೆಟೀವ್ ಬ್ಯಾಂಕ್ ಹಗರಣದಲ್ಲಿ ಭಾಗಿಯಾಗಿದ್ದ ಬಸವನಗುಡಿ ಶಾಸಕ, ಪ್ರಭಾವಿ ಬಿಜೆಪಿ ಮುಖಂಡ ರವಿ ಸುಬ್ರಹ್ಮಣ್ಯ ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಮುಖ್ಯ ವಕ್ತಾರ ಶರತ್ ಖಾದ್ರಿ ಆರೋಪಿಸಿದ್ದಾರೆ.

ಆಮ್ ಆದ್ಮಿ ಪಾರ್ಟಿಯ ಮಾಧ್ಯಮ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಿವೃತ್ತ ಜೀವನವನ್ನು ನೆಮ್ಮದಿಯಿಂದ ಕಳೆಯಲು ಬ್ಯಾಂಕ್ ನಲ್ಲಿ ಠೇವಣಿ ಇಟ್ಟಿರುವ ಗ್ರಾಹಕರಿಗೆ ಜೀವನವೇ ಈಗ ಆಯೋಮಯವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ನೆಮ್ಮದಿಯಿಂದ ಮನೆಯಲ್ಲಿ ಜೀವನ ಕಳೆಯಬೇಕಾಗಿದ್ದವರು, ಇಂದು ತಮ್ಮದೇ ಹಣಕ್ಕಾಗಿ ರಸ್ತೆಯಲ್ಲಿ ನಿಂತು ಬ್ಯಾಂಕ್ ನ ಎದುರು ಹಣಕ್ಕಾಗಿ ಅಂಗಾಲಚುವ ಪರಿಸ್ಥಿತಿ ಉಂಟಾಗಿದೆ ಎಂದು ತಿಳಿಸಿದರು.

ನಂತರ ಮಾತನಾಡಿದ ಆಮ್ ಆದ್ಮಿ ಪಾರ್ಟಿಯ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಅವರು, ಶ್ರೀ ವಸಿಷ್ಠ ಕೋ ಅಪರೇಟಿವ್ ಬ್ಯಾಂಕಿನ ಪ್ರಮುಖ ನಿರ್ದೇಶಕ ಕೆ.ಎನ್ ವೆಂಕಟನಾರಾಯಣ ಅನೇಕ ಬಿಜೆಪಿ ನಾಯಕರ ಜೊತೆ ಉತ್ತಮ ಸಂಬಂಧ ಹೊಂದಿದ್ದು, ಆತನು ಶಾಸಕ ರವಿ ಸುಬ್ರಹ್ಮಣ್ಯ ಸೇರಿದಂತೆ ಅನೇಕ ಬಿಜೆಪಿ ಪಕ್ಷಕ್ಕೆ ಆಪ್ತವಾಗಿರುವ ಮತ್ತು ಒಟ್ಟಿಗೆ ಇರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ದೊರಕುತ್ತವೆ. ಮೇಲ್ನೋಟಕ್ಕೇ ಆತನಿಗೆ ಬಿಜೆಪಿ ಪ್ರಭಾವಿ ಮುಖಂಡರ ಕೃಪಾಕಟಾಕ್ಷ ಕಂಡುಬರುತ್ತದೆ. ಹೀಗಿರುವಾಗ ಪೊಲೀಸ್ ಅಥವಾ ಸಿಬಿಐ ತನಿಖೆಯಲ್ಲಿ ಬ್ಯಾಂಕ್ ನ ಸಹಸ್ರಾರು ಗ್ರಾಹಕರಿಗೆ ನ್ಯಾಯ ಸಿಗುವುದು ಅಸಂಭವ ಎಂದರು.

ಈ ಪ್ರಕರಣದ ಕುರಿತಾಗಿ ಹೈಕೋರ್ಟ್ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಯಬೇಕೆಂದು ಮತ್ತು ಆರೋಪಿಗಳ ಜೊತೆಗೆ ಬಿಜೆಪಿ ನಾಯಕರ ನಂಟಿನ ಬಗ್ಗೆಯೂ ಆಮೂಲಾಗ್ರ ತನಿಖೆ ನಡೆಸಿ ಗ್ರಾಹಕರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ. ಇದನ್ನೂ ಓದಿ: ಗೋವಾ- ಕರ್ನಾಟಕ ಗಡಿಯಲ್ಲಿ ನಿರ್ಬಂಧ : ನಿತ್ಯ ಉದ್ಯೋಗಕ್ಕೆ ತೆರಳುವವರಿಗೆ ಸಂಕಷ್ಟ

The post ಶ್ರೀ ವಸಿಷ್ಠ ಬ್ಯಾಂಕ್ ಕೇಸ್ ಆರೋಪಿಗಳನ್ನು ರವಿ ಸುಬ್ರಹ್ಮಣ್ಯ ರಕ್ಷಿಸುತ್ತಿದ್ದಾರೆ – ಆಪ್ appeared first on Public TV.

Source: publictv.in

Source link