ಚೀನಾದ ವುಹಾನ್ ಇಡೀ ಜಗತ್ತಿನ ಗಮನ ಸೆಳೆದಿತ್ತು. ಕಾರಣ ಈಗ ವಿಶ್ವವನ್ನೇ ನಡುಗಿಸುತ್ತಿರುವ ಕೊರೊನಾ ವೈರಸ್ ಮೊದಲು ಪತ್ತೆಯಾಗಿದ್ದೇ ಈ ವುಹಾನ್ ನಲ್ಲಿ. ವುಹಾನ್ ನ ಮಾಂಸದ ಮಾರುಕಟ್ಟೆ ಮೂಲಕವೇ ಇಂಥದ್ದೊದು ವೈರಸ್ ಹರಡ್ತಾ ಇದೆ ಅಂತ ಹೇಳಲಾಗ್ತಾ ಇದೆ. ಆದ್ರೆ ವೈರಸ್ ಬಗ್ಗೆ ಬೇರೆಯ ವಾದವೂ ಇದೆ. ಅದೇನು ಅಂದ್ರೆ ಇದೇ ಮಾರ್ಕೆಟ್​ನ ಕೂಗಳತೆ ದೂರದಲ್ಲಿರೋ ಲ್ಯಾಬ್ ನಲ್ಲಿ ಸೃಷ್ಟಿಸಲಾಗ್ತಾ ಇದ್ದ ಜೈವಿಕ ಅಸ್ತ್ರದ ಒಂದು ಭಾಗ ಸೋರಿಕೆ ಆಗಿದ್ರಿಂದ್ಲೇ ಇಷ್ಟೆಲ್ಲ ಗಂಡಾಂತರಕ್ಕೆ ಕಾರಣವಾಗ್ತಿದೆ ಅಂತಾ. ಆದರೆ ಇದರ ಬಗ್ಗೆ ಈಗಾಗಲೇ ಆರೋಪಗಳೂ ಕೇಳಿ ಬಂದಿವೆ. ಇತ್ತೀಚೆಗೆ ಹಲವು ಪ್ರತಿಷ್ಠಿತ ಮ್ಯಾಗ್ಸಿನ್​ಗಳಲ್ಲಿ ಇದಕ್ಕೆ ಪುಷ್ಟಿ ನೀಡುವ ವರದಿಗಳೂ ಬಂದಿವೆ.

ಆದರೆ, ಚೀನಾ ಇದಕ್ಕೆಲ್ಲ ತಲೆ ಕೆಡಿಸಿಕೊಳ್ತಾನೂ ಇಲ್ಲ. ಯಾರು ಏನೇ ಹೇಳಿದ್ರೂ ಸೊಪ್ಪೂ ಹಾಕುತ್ತಿಲ್ಲ. ಚೀನಾದ ಅಧ್ಯಕ್ಷ ಜಿನ್ ಪಿಂಗ್ ಅಂತೂ ಕೊರೊನಾ ಬಗ್ಗೆ ಮಾತೇ ಆಡಲ್ಲ. ಆದ್ರೆ ವಿಶ್ವವೆಲ್ಲ ಚೀನಾದ ಬಗ್ಗೆ ಮಾತನಾಡುತ್ತೆ. ಅಲ್ಲಿ ಕಾಣಿಸಿಕೊಂಡು ಗಂಡಾಂತರ ತಂದಿರುವುದಕ್ಕೆ ಹಿಡಿ ಶಾಪ ಹಾಕುತ್ತೆ. ಆದ್ರೆ, ಜಿನ್ ಪಿಂಗ್ ಏನೂ ಆಗೇ ಇಲ್ಲ ಎಂಬಂತೆ ತಮ್ಮದೇ ಶೈಲಿಯಲ್ಲಿ ಮುನ್ನಡೆಯುತ್ತಿದ್ದಾರೆ.

ಚೀನಾದ ವುಹಾನ್ ನಿಂದ ಫ್ಲೈಟ್ ಎಲ್ಲೆಲ್ಲಿ ಹಾರಿತ್ತೋ ಎಲ್ಲಾ ಕಡೆ ಜನ ಕೊರೊನಾ ವೈರಸ್ ಹೊತ್ತೊಯ್ದಿದ್ದರು. ದೂರದ ಅಮೆರಿಕಾಕ್ಕೂ ಹೋಗಿತ್ತು. ಯುರೋಪನ್ನು ತಲುಪಿಕೊಂಡಿತ್ತು. ಯಾವ ದ್ವೀಪ ರಾಷ್ಟ್ವವನ್ನೂ ಬಿಟ್ಟಿಲ್ಲ. ನೆರೆಯ ಭಾರತದಲ್ಲೂ ಕಾಣಿಸಿಕೊಂಡು ಈ ಕೊರೊನಾ ಸಂಕಷ್ಟ ಶುರುವಾಗಿ ಹೋಗಿತ್ತು. ಆದ್ರೆ, ಚೀನಾ ಇದನ್ನು ಮೊದಲು ಬಾಯಿ ಬಿಡಲೇ ಇಲ್ಲ. ವುಹಾನ್ ನಲ್ಲಿ ಏನಾಗ್ತಿದೆ ಅಂತ ಹೇಳಲೇ ಇಲ್ಲ. ಈ ವೈರಸ್ ಬಗ್ಗೆ ಇದರ ಅಪಾಯದ ಬಗ್ಗೆ ಮೊದಲು ಬಾಯಿ ಬಿಚ್ಚಲೇ ಇಲ್ಲ. ಎರಡು ಮೂರು ತಿಂಗಳು ಮೊದಲೇ ಅಲ್ಲಿ ಅಟ್ಟಹಾಸ ಶುರುವಾಗಿದ್ರೂ ಚೀನಾ ಸುಮ್ಮನೇ ಇತ್ತು. ಹೊರಜಗತ್ತಿಗೆ ಏನನ್ನೂ ಗೊತ್ತಾಗದ ಹಾಗೆ ರಹಸ್ಯ ಕಾಪಾಡಿಕೊಂಡಿತ್ತು. ಆದರೆ, ಯಾವಾಗ ಅದು ಸಾವಿರ ಸಾವಿರ ಜನರಿಗೆ ಹರಡಲು ಶುರುವಾಯ್ತೋ ಆಗ ತನ್ನಿಂದ ತಾನೇ ಗಂಡಾಂತರಕಾರಿ ವಿಚಾರ ಬಹಿರಂಗವಾಗಿ ಬಿಡ್ತು. ವುಹಾನ್ ನಲ್ಲಿ ಅವತ್ತು ಲಾಕ್ ಡೌನ್ ಘೋಷಿಸಿ ಬಿಟ್ಟಿತ್ತು ಚೀನಾ. ಅಷ್ಟೇ ಅಲ್ಲ ಕೆಲವೇ ದಿನಗಳ ಒಳಗಾಗಿ ಅದೊಂದು ದೊಡ್ಡ ಆಸ್ಪತ್ರೆಯನ್ನೇ ನಿರ್ಮಾಣ ಮಾಡಿತ್ತು. ಕೋವಿಡ್ ರೋಗಿಗಳಿಗೆ ಚಿಕಿತ್ಸೆ ಕೊಡಲೆಂದೇ ಇಷ್ಟು ದೊಡ್ಡ ಸೆಂಟರ್ ಸ್ಥಾಪಿಸಿತ್ತು ಚೀನಾ. ಇಷ್ಟೆಲ್ಲ ಆಗುವಷ್ಟರಲ್ಲಿ ಈ ವೈರಸ್ ಚೀನಾ ಮಾತ್ರ ಅಲ್ಲ. ಇಡೀ ವಿಶ್ವಕ್ಕೆಲ್ಲ ಹರಡಿಯಾಗಿತ್ತು. ವಿಶ್ವದ ದೊಡ್ಡಣ್ಣ ಅಮೆರಿಕಾ ಕೂಡ ತತ್ತರಿಸಿ ಹೋಗಿತ್ತು. ಮುಂದುವರೆದ ರಾಷ್ಟ್ರಗಳಿರುವ ಯುರೋಪ್ ಕೂಡ ಅಪಾರ ಸಾವು ನೋವು ಕಂಡಿತ್ತು. ಅಮೆರಿಕಾದ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಂತೂ ಚೀನಿ ವೈರಸ್ ಅಂತಾನೇ ಲೇವಡಿ ಮಾಡ್ತಾ ಇದ್ರು. ಆದರೆ ಈ ಚೀನಿ ವೈರಸ್ ಸೃಷ್ಟಿಸಿರೋ, ಸೃಷ್ಟಿಸ್ತಾ ಇರೋ ಅಲ್ಲೋಲ ಕಲ್ಲೋಲ ಅಷ್ಟಿಷ್ಟಲ್ಲ. ಇಡೀ ಜಗತ್ತನ್ನೇ ದಿಗ್ಬಂಧನಕ್ಕೊಳಪಡಿಸುವಂತೆ ಮಾಡಿ ಬಿಟ್ಟಿತ್ತು. ಎಲ್ಲಾ ಕಡೆ ಲಾಕ್​ಡೌನ್ ಮಾಡಿದ್ರಿಂದ ಜಗತ್ತೇ ಸ್ತಬ್ಧವಾಗಿ ಹೋಗಿತ್ತು.

ಈಗ ಚೀನಾದಲ್ಲಿ ಕೊರೊನಾ ವೈರಸ್ ಹರಡ್ತಾನೇ ಇಲ್ವಾ?
ಎರಡನೇ ಅಲೆ, ಮೂರನೇ ಅಲೆ ಚೀನಾದಲ್ಲಿ ಬಂದೇ ಇಲ್ವಾ?
ಎಲ್ಲೆಡೆ ಕೊರೊನಾ ಹಾವಳಿ ಇಡ್ತಾ ಇದ್ರೆ ಚೀನಾ ಮಾತ್ರ ಸೇಫಾ?

ಚೀನಾದಿಂದ ಕೊರೊನಾ ಅಪ್ ಡೇಟ್ ಏನೂ ಬರ್ತಾನೇ ಇಲ್ಲ. ಯಾವ ಮಾಹಿತಿಯನ್ನೂ ಚೀನಾ ಬಿಟ್ಟುಕೊಡುತ್ತಿಲ್ಲ. ಚೀನಾದಲ್ಲಿರೋದು ಜಿನ್ ಪಿಂಗ್ ಆಡಳಿತ. ಜಿನ್ ಪಿಂಗ್ ಆಡಳಿತದಲ್ಲಿ ಯಾರೂ ಬಹಿರಂಗವಾಗಿ ಇಂತಾದ್ದನ್ನೆಲ್ಲ ಮಾತನಾಡುವಂತೆಯೇ ಇಲ್ಲ. ಯಾವುದೇ ಸೋಷಿಯಲ್ ಮೀಡಿಯಾದಲ್ಲೂ ಈ ಕುರಿತಾದ ಮಾಹಿತಿ ಹರಿಬಿಡುವಂತೆಯೂ ಇಲ್ಲ. ಭಾರತದಲ್ಲಾದರೂ ಯಾವ ಹಳ್ಳಿ ಮೂಲೆಯಲ್ಲಿ ಏನಾದರೂ ಯಾರಾದರೂ ಒಬ್ಬರು ಅದನ್ನು ಪೋಸ್ಟ್ ಮಾಡಿ ಬಿಡುತ್ತಾರೆ. ಚೀನಾದಲ್ಲಿ ಇವೆಲ್ಲ ಕಟ್ಟು ನಿಟ್ಟು. ಆಜ್ಞೆ ಪಾಲಿಸದಿದ್ರೆ ಚೀನಾ ಆಡಳಿತ ಹೇಗೆ ನಡೆಸಿಕೊಳ್ಳುತ್ತೆ ಅನ್ನೋದು ಜಗತ್ತಿಗೇ ಗೊತ್ತು. ಪ್ರತಿಷ್ಠಿತ ಉದ್ಯಮಿ ಜಾಕ್ ಮಾ ಮಾತನಾಡಿದ್ರು ಅಂತ ಅವರು ಏನೆಲ್ಲ ಸಂಕಷ್ಟ ಅನುಭವಿಸ್ತಾ ಇದಾರೆ ಅಂತಾನೂ ಗೊತ್ತು.

ಹೀಗಾಗಿ ಚೀನಾ ಅಂದರೆ ಇಲ್ಲಿ ಪಕ್ಕಾ ಸರ್ವಾಧಿಕಾರತ್ವ. ಆಜ್ಞೆ ಪಾಲಿಸೋದಷ್ಟೇ ಕೆಲಸ. ಎಲ್ಲವೂ ಜಿನ್ ಪಿಂಗ್ ಅಣತಿಯಂತೆಯೇ ನಡೆಯಬೇಕು. ವಿಚಿತ್ರ ಅಂದ್ರೆ ಚೀನಾದಲ್ಲಿ ಮೊದಲ ವೈರಸ್ ಕಾಣಿಸಿಕೊಂಡು ಲಾಕ್ ಡೌನ್ ಘೋಷಣೆ ಮಾಡಿದಾಗ ಎಲ್ಲಾ ಕಡೆ ಸುದ್ದಿಯಾಗಿತ್ತು.

ಚೀನಾ ಹತ್ತು ದಿನಗಳಲ್ಲೇ ಬೃಹತ್ ಕೋವಿಡ್ ಸೆಂಟರನ್ನೇ ತೆರೆದಾಗ ಅದೊಂದು ದಾಖಲೆಯಾಗಿ ಎಲ್ಲಾ ಕಡೆ ಮೆಚ್ಚುಗೆಗೂ ಪಾತ್ರವಾಗಿತ್ತು. ಚೀನಾಕ್ಕೆ ಮಾತ್ರ ಇಂಥದ್ದೆಲ್ಲ ಸಾಧನೆ ಮಾಡಲು ಸಾಧ್ಯ ಅಂತ ಹೇಳಿದವರೇ ಹೆಚ್ಚು. ಆದರೆ ಬರ್ತಾ ಬರ್ತಾ ಚೀನಾ ಕೊರೊನಾ ಬಗ್ಗೆ, ಚೀನಾದಲ್ಲಿ ಏನಾಗ್ತಿದೆ ಅನ್ನೋ ಮಾಹಿತಿಯನ್ನು ಹೊರಜಗತ್ತಿಗೆ ತಿಳಿಸಲೇ ಇಲ್ಲ. ವಿಶ್ವದ 200ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ವೈರಸ್ ತೀವ್ರವಾಗಿ ಹರಡಿತ್ತು. ಕೋಟಿ ಕೋಟಿ ಜನರು ಸೋಂಕಿತರಾದರು. ಲಕ್ಷ ಲಕ್ಷ ಜನ ಸತ್ತರು. ಇನ್ನು ಎರಡನೇ ಅಲೆ, ಮೂರನೇ ಅಲೆ ಎದುರಿಸುತ್ತಿರುವ ದೇಶಗಳು ಅದೆಷ್ಟೋ. ಭಾರತದಲ್ಲಿ ಈಗ ಎರಡನೇ ಅಲೆ ಅಪ್ಪಳಿಸಿ ಗಂಡಾಂತರವನ್ನೇ ತಂದಿದೆ. ಎಲ್ಲಾ ದೇಶಗಳಲ್ಲೂ ಪದೇ ಪದೇ ವೈರಸ್ ಹಾವಳಿ ಇಡ್ತಾ ಇದೆ. ಆದ್ರೆ ಚೀನಾದಿಂದ ಮಾತ್ರ ಯಾವ ಸುದ್ದಿಯೂ ಬರ್ತಾ ಇಲ್ಲ. ಯಾವ ಮಾಹಿತಿಯೂ ಬಹಿರಂಗವಾಗ್ತಾ ಇಲ್ಲ. ಹಾಗಾದ್ರೆ ಚೀನಾದಲ್ಲಿ ಇನ್ನೊಂದು ಅಲೆ ಬಂದೇ ಇಲ್ವಾ. ವೈರಸ್ ಮೊದಲು ಹರಡಿದ್ದು ಬಿಟ್ಟರೆ ಬಳಿಕ ಚೀನಾ, ತನ್ನ ದೇಶದಲ್ಲಿ ಈ ಸಾಂಕ್ರಾಮಿಕ ಹರಡಲು ಬಿಟ್ಟೇ ಇಲ್ವಾ ಅನ್ನೋ ಪ್ರಶ್ನೆ ಎದ್ದಿದೆ. ಆದ್ರೆ ಚೀನಾ ಮಾತ್ರ ಕೊರೊನಾ ಫುಲ್ ಕಂಟ್ರೋಲ್ ಆಗಿದೆ ಅಂತಾನೇ ಹೇಳ್ತಿದೆ. ಅಂದ್ರೆ ಚೀನಾ ಜಗತ್ತಿನ ಎಲ್ಲಾ ರಾಷ್ಟ್ರಗಳಿಗಿಂತ ಈಗ ಸೇಫಾ ಅಂತ ಕೇಳಿದ್ರೆ ಅದಕ್ಕೂ ಸ್ಪಷ್ಟ ಉತ್ತರ ಇಲ್ವೇ ಇಲ್ಲ.

ಚೀನಾದಲ್ಲಿ ಈವರೆಗೆ ಎಷ್ಟು ಲಕ್ಷ ಜನರಿಗೆ ವೈರಸ್ ಹರಡಿದೆ?
ಚೀನಾದಲ್ಲಿ ಹೆಚ್ಚಿನ ಸಾವಾಗದೇ ಜನ ಅಷ್ಟು ಸೇಫಾಗಿದ್ದಾರಾ?
ಚೀನಾ ಕೊರೊನಾ ವೈರಾಣುವಿನಿಂದ ಮುಕ್ತ ಆಗ್ತಾ ಇದ್ಯಾ?

ಮೊದಲು ಚೀನಾದಲ್ಲಿ ಕೊರೊನಾ ಹರಡ್ತಾ ಇದ್ದ ಹಾಗೆ ನಿತ್ಯ ಎಷ್ಟು ಜನರಿಗೆ ಸೋಂಕು ತಗುಲಿತ್ತು ಅನ್ನೋ ಅಂಕಿ ಸಂಖ್ಯೆ ಬಿಡುಗಡೆ ಮಾಡುತ್ತಿತ್ತು. ಅದರಂತೆ ಚೀನಾದಲ್ಲಿ 1 ಲಕ್ಷದ 4 ಸಾವಿರ ಜನರಿಗೆ ಸೋಂಕು ಹರಡಿದೆ. 4 ಸಾವಿರದ 858 ಜನರು ಸಾವನ್ನಪ್ಪಿದ್ದಾರೆ. ಆದರೆ ಅದಾದ ನಂತರ ಚೀನಾದಿಂದ ಯಾವುದೇ ಅಂಕಿ ಅಂಶ ಬಹಿರಂಗವಾಗಿಲ್ಲ. ಅಂದ್ರೆ ಚೀನಾದಲ್ಲಿ 1 ಲಕ್ಷ ಜನರಿಗಿಂತ ಹೆಚ್ಚು ಜನರಿಗೆ ಸೋಂಕು ಹರಡಲೇ ಇಲ್ವಾ ಅಥವಾ ಹರಡಿದ್ರೂ ಚೀನಾ ಮುಚ್ಚಿಟ್ಟು ಬಿಟ್ಟಿದ್ಯಾ. ಈ ಪ್ರಶ್ನೆ ಮೊದಲೇ ಎದುರಾಗಿತ್ತು. ಆದ್ರೆ ಈಗ ಯಾಕೆ ಮತ್ತೆ ಈ ವಿಚಾರ ಚರ್ಚೆಗೆ ಬಂದಿದೆ ಅಂದ್ರೆ ಚೀನಾ ವಿದೇಶಾಂಗ ಸಚಿವ ವಾಂಗ್ ಇ ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಅಂತ ಹೇಳಿ ಬಿಟ್ಟಿದ್ದಾರೆ. ಹೀಗಾಗಿ ನಿಜವಾಗಲೂ ಚೀನಾದಲ್ಲಿ ಅಂತಹ ಪರಿಸ್ಥಿತಿ ಇದ್ಯಾ, ಚೀನಾದಲ್ಲಿ ಜನ ಬೇರೆಲ್ಲಾ ದೇಶಗಳಿಗಿಂತ ಹೆಚ್ಚು ಸೇಫಾಗಿದ್ದಾರಾ, ಚೀನಾ ಕೊರೊನಾ ವೈರಾಣುವಿನಿಂದ ಮುಕ್ತ ಆಗ್ತಾ ಇದ್ಯಾ ಅನ್ನೋ ಹತ್ತು ಹಲವು ಪ್ರಶ್ನೆಗಳು ಕೇಳಿ ಬರ್ತಾ ಇವೆ. ಆದ್ರೆ ಇದಕ್ಕೆಲ್ಲ ಉತ್ತರ ಕೊಡೋದೇ ಇಲ್ಲ ಚೀನಾ. ಹಾಗಂತ ಚೀನಾ ಕೊರೊನಾ ಮುಕ್ತವಾಗಿದ್ಯಾ ಅಂತ ಕೇಳಿದ್ರೆ ಕಳೆದ ಕೆಲವು ದಿನಗಳಿಂದ ಹತ್ತೋ ಹದಿನೈದೋ ಕೇಸ್ ಗಳು ಹೊಸ ಕೇಸ್ ಬಂದಿವೆ ಅಂತ ಮಾತ್ರ ಹೇಳ್ತಿದೆ. ಅಂದ್ರೆ ಚೀನಾದಲ್ಲಿ ಅಷ್ಟರಮಟ್ಟಿಗೆ ಕಂಟ್ರೋಲ್ ಆಗಿ ಬಿಟ್ಟಿದ್ಯಾ ಕೊರೊನಾ.

ಸಮರ್ಥವಾಗಿ ನಿರ್ವಹಿಸಿ ಕೊರೊನಾ ಗೆದ್ದೇ ಬಿಡ್ತಾ ಚೀನಾ?
ಮತ್ತೆ ಆರ್ಥಿಕವಾಗಿಯೂ ಚೇತರಿಸಿಕೊಂಡು ಸುಧಾರಿಸಿ ಬಿಡ್ತಾ?
ವಿಶ್ವಕ್ಕೆಲ್ಲ ಕೊರೊನಾ ಹರಡಿಸಿ ತಾನು ಇನ್ನಷ್ಟು ಪ್ರಬಲವಾಯ್ತಾ?

ಚೀನಾ ಅಧ್ಯಕ್ಷ ಜಿನ್ ಪಿಂಗ್ ಹೇಳೋ ಪ್ರಕಾರ ಚೀನಾ ಕೊರೊನಾವನ್ನು ಗೆದ್ದು ಬಿಟ್ಟಿದೆ. ಕೊರೊನಾ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಿ ಅದನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ಆರ್ಥಿಕವಾಗಿಯೂ ಹಿಂದೆಂದಿಗಿಂತೂ ವೇಗ ಪಡೆದುಕೊಂಡಿದೆ. ಹೀಗಂತ ಚೀನಾದ ಅಧ್ಯಕ್ಷ ಜಿನ್ ಪಿಂಗ್ ಅವರೇ ಘೋಷಿಸಿ ಬಿಟ್ಟಿದ್ದಾರೆ. ಚೀನಾ ಅಧ್ಯಕ್ಷರೇ ಹೇಳಿದ ಮೇಲೆ ಜಗತ್ತು ನಂಬುತ್ತೋ ಬಿಡುತ್ತೋ, ಆದ್ರೆ ಚೀನಾದ ಪ್ರಜೆಗಳಂತೂ ತಲೆ ಆಡಿಸಲೇ ಬೇಕು. ಚೀನಾ ಇರೋದೇ ಹಾಗೆ. ಇಲ್ಲಿ ವಾಕ್ ಸ್ವಾತಂತ್ರ್ಯ, ಮಾಧ್ಯಮ ಸ್ವಾತಂತ್ರ್ಯ ಎಲ್ಲಾ ಅಷ್ಟಕಷ್ಟೇ. ಜಿನ್ ಪಿಂಗ್ ಏನು ಹೇಳ್ತಾರೋ ಅದೇ ಫೈನಲ್. ಅಂತರಾಷ್ಟ್ರೀಯ ಮಾಧ್ಯಮಗಳಿಗೂ ಇಲ್ಲಿ ಇದ್ದಷ್ಟು ನಿರ್ಬಂಧ ಬೇರೆಲ್ಲೂ ಇಲ್ಲ. ಅದೊಂದು ಉತ್ತರ ಕೊರಿಯಾ ಬಿಟ್ರೆ ಮತ್ತೆಲ್ಲೂ ಇಲ್ಲಿಯಷ್ಟು ಬಾಯಿ ಕಟ್ಟಿ ಹಾಕೋದಿಲ್ಲ. ಹೀಗಾಗಿ ಚೀನಾದಲ್ಲಿ ಏನಾಗ್ತಿದೆ ಅಂತ ನಿತ್ಯ ಅಪ್ ಡೇಟ್ ಸುಲಭವಾಗಿ ಸಿಗೋದೇ ಇಲ್ಲ. ಆದರೆ ಪ್ರಗತಿಯ ಬಗ್ಗೆ ಮಾತ್ರ ಚೀನಾ ಹೇಳಿಕೊಳ್ಳುತ್ತೆ. ಇಲ್ಲಿನ ಜನರ ಸ್ಥಿತಿ ಗತಿ ಬಗ್ಗೆ ಏನೂ ಹೇಳಿಕೊಳ್ಳೋದೇ ಇಲ್ಲ. ಈಗ ಬೇರೆ ಬೇರೆ ದೇಶಗಳು ಅದನ್ನೇ ಯೋಚಿಸ್ತಾ ಇದ್ದಾವೆ. ವಿಶ್ವಕ್ಕೆಲ್ಲ ಕೊರೊನಾ ಹರಡಿಸಿ ತಾನು ಮಾತ್ರ ಕಂಟ್ರೋಲ್ ಮಾಡಿಕೊಳ್ಳುವ ಕಾರ್ಯತಂತ್ರ ಕಂಡು ಕೊಂಡು ಇದೇ ಸಂದರ್ಭ ಅಂತ ಆರ್ಥಿಕವಾಗಿ ಚೀನಾ ಪ್ರಬಲವಾಗಿ ಬಿಡ್ತಾ ಅಂತ ಪ್ರಶ್ನೆ ಮಾಡ್ತಿದಾರೆ. ವಿಶ್ವವೆಲ್ಲ ಸಂಕಷ್ಟದಲ್ಲಿರುವಾಗ ಚೀನಾ ಮಾತ್ರ ಅಷ್ಟಾಗಿ ಲಾಕ್ ಮಾಡಿರಲೇ ಇಲ್ಲ. ಉತ್ಪಾದನಾ ವಲಯವೂ ಹೇಳಿಕೊಳ್ಳುವಷ್ಟು ಸ್ಥಗಿತವಾಗಿರಲಿಲ್ಲ. ಆದ್ರೆ ರಫ್ತು ಕಡಿಮೆಯಾಗಿ ಚೀನಾಗೆ ಲಾಸ್ ಆಗಿತ್ತು. ಆದರೆ, ಯಾವಾಗ ಮತ್ತೆ ಹಡಗು, ವಿಮಾನಗಳು ಸಂಚರಿಸತೊಡಗಿದವೋ ಚೀನಾದ ರಫ್ತು ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಚೀನಾದಲ್ಲಿ ತಯಾರಾಗುವ ವಸ್ತುಗಳಿಗೆ ಅದೆಷ್ಟೇ ನಿರ್ಬಂಧ ಅಂತ ಹೇಳಿದರೂ ನಮ್ಮ ಪಕ್ಕದಲ್ಲೇ ಇರುತ್ತವೆ ಚೀನಾದ ವಸ್ತುಗಳು. ಹೀಗಾಗಿ ಚೀನಾ ಕಳೆದೊಂದು ವರ್ಷದಿಂದ ಬೇರೆ ದೇಶಗಳಷ್ಟು ತತ್ತರಿಸಿಲ್ಲ ಅಂತಾನೇ ಹೇಳಲಾಗ್ತಿದೆ.

ಸಂಕಷ್ಟ ಕಾಲವನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಂಡಿತ್ತಾ?
ಅಗತ್ಯಕ್ಕೆ ತಕ್ಕ ವಸ್ತುಗಳ ಉತ್ಪಾದಿಸಿ ಲಾಭ ಮಾಡಿಕೊಂಡು ಬಿಡ್ತಾ?
ಲಾಕ್ ಡೌನ್ ಬಳಿಕ ರಫ್ತು ಹೆಚ್ಚಿಸಿಕೊಂಡು ವಹಿವಾಟು ಹೆಚ್ಚಾಯ್ತಾ?

ಚೀನಾ ಅಂದರೆ ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಇರೋ ರಾಷ್ಟ್ರ. ಇಲ್ಲಿ ಕಡಿಮೆ ವೇತನಕ್ಕೆ ಹೆಚ್ಚು ಕೆಲಸ. ಇಲ್ಲಿನ ಜನರೂ ಇದಕ್ಕೆ ಒಗ್ಗಿ ಹೋಗಿದ್ದಾರೆ. ಜಗತ್ತಿನ ಬೇರೆಲ್ಲೂ ಮಾಡದ ದುಡಿಮೆಯನ್ನು ಇಲ್ಲಿನ ಜನಾ ಮಾಡ್ತಾರೆ. ಇದನ್ನು ಹೇಳಿದರೆ ಅತಿಶಯೋಕ್ತಿಯೇನೂ ಆಗಲ್ಲ. ದುಡಿಮೆ ಮಾಡುವ ಪ್ರತಿ ವ್ಯಕ್ತಿ ಚೀನಾದಲ್ಲಿ ನಿತ್ಯ 10 ರಿಂದ 11 ತಾಸುಗಳ ಕಾಲ ಕೆಲಸ ಮಾಡುತ್ತಾನೆ. ಆದರೆ ವೇತನ ಮಾತ್ರ ಅಷ್ಟಕಷ್ಟೇ . ಹೀಗಾಗಿ ಕಡಿಮೆ ವೆಚ್ಚದಲ್ಲಿ ಹೆಚ್ಚು ಉತ್ಪಾದನೆ ಮಾಡುವ ರಾಷ್ಟ್ರ ಜಗತ್ತಿನಲ್ಲಿ ಯಾವುದಾದರೂ ಇದ್ರೆ ಅದು ಚೀನಾ. ರಾತ್ರಿ ಬೆಳಗಾಗೋದ್ರೊಳಗೆ, ವಾರ ಕಳೆಯೋದ್ರೊಳಗೆ ಬೇಡಿಕೆಗೆ ತಕ್ಕಷ್ಟು ವಸ್ತುಗಳನ್ನು ತಯಾರು ಮಾಡಿ ಬಿಡುತ್ತೆ. ಅಷ್ಟು ಮಷಿನರಿ, ಮಾನವ ಸಂಪನ್ಮೂಲ ಚೀನಾದಲ್ಲಿದೆ. ವಿಶ್ವದಲ್ಲಿ ಯಾವುದೇ ಹೊಸ ವಸ್ತು ಬಂದ್ರೂ ಅದರ ತದ್ರೂಪ ಚೀನಾದಲ್ಲಿ ಒಂದೇ ವಾರದಲ್ಲಿ ಸಿದ್ಧವಾಗಿ ಬಿಡುತ್ತೆ. ಅದು ಜಗತ್ತಿಗೆಲ್ಲ ಹಂಚಿಕೆಯಾಗುತ್ತೆ. ಥೇಟ್ ಅದೇ ರೂಪ. ಆದರೆ ಬಳಸುವ ವಸ್ತುಗಳು ಬೇರೆ, ಗುಣಮುಟ್ಟವೂ ಬೇರೆ. ಆದ್ರೆ ಚೀನಾದ ವಸ್ತುಗಳು ವಿಶ್ವದ ಎಲ್ಲಾ ಕಡೆ ಬಿಕರಿಯಾಗುತ್ತವೆ. ವಿಶ್ವವೆಲ್ಲ ಕೊರೊನಾದಿಂದ ತತ್ತರಿಸಿ ಹೋಗ್ತಾ ಇದ್ರೆ ಚೀನಾ ಅಗತ್ಯಕ್ಕೆ ತಕ್ಕ ವಸ್ತುಗಳನ್ನು ಉತ್ಪಾದನೆ ಮಾಡಲು ಆರಂಭಿಸಿ ಬಿಟ್ಟಿತ್ತು. ಮಾಸ್ಕ್ ಬೇಕು ಅಂದ್ರೆ ಚೀನಾ ರಾತ್ರಿ ಬೆಳಗಾಗೋದ್ರೊಳಗೆ ಕಳಿಸಿ ಬಿಡ್ತಿತ್ತು. ಅದ್ಯಾವುದೋ ಸಲಕರಣೆ ಬೇಕು ಅಂದ್ರೆ ಚೀನಾದಲ್ಲಿ ರೆಡಿ ಆಗಿ ಬಿಡ್ತಿತ್ತು. ಹೀಗೆ ಸಂಕಷ್ಟ ಕಾಲವನ್ನೇ ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುವ ಕೌಶಲ್ಯ ಇರೋದು ಚೀನಾದಲ್ಲಿ ಮಾತ್ರ. ಲಾಕ್ ಡೌನ್ ಬಳಿಕವಂತೂ ಚೀನಾದ ರಫ್ತು ಮತ್ತಷ್ಟು ಹೆಚ್ಚಾಗಿದ್ಯಂತೆ. ಹೀಗಾಗಿ ಚೀನಾ ಮತ್ತೆ ಎದೆಯುಬ್ಬಿಸಿಕೊಂಡು ಜಗತ್ತಿಗೆ ಸಾರಿ ಹೇಳ್ತಾ ಇದೆ. ನಾನೇ ಗಟ್ಟಿ, ನಾನೇ ಪ್ರಬಲ ಅಂತ.

ಅನುಭವ ಕಲಿಸಿದ ಪಾಠವನ್ನು ಮರೆಯಲಿಲ್ಲವಾ ಚೀನಾ?
ಚೀನಾಗೆ ಕೊರೊನಾ ವೇಳೆಯೂ ಅದೇ ಪ್ಲಸ್ ಪಾಯಿಂಟಾ?
ಒಂದು ಬಾರಿ ಹರಡಿದ್ದು ಬಿಟ್ರೆ ಮತ್ತೆ ತಲೆ ಎತ್ತಲು ಬಿಟ್ಟೇ ಇಲ್ವಾ?

ಚೀನಾಗೆ ಸಾಂಕ್ರಾಮಿಕ ರೋಗ ಹೊಸದಲ್ಲ. 2002ರಲ್ಲೇ ಸಾಕಷ್ಟು ಪಾಠ ಕಲಿತಿದೆ ಚೀನಾ. ಸಾರ್ಸ್ ಕಂಟ್ರೋಲ್ ಮಾಡಿದ ಅನುಭವ ಚೀನಾಕ್ಕೆ ಇದ್ದೇ ಇತ್ತು. ಇದೇ ಅನುಭವ ಕಲಿಸಿದ ಪಾಠವನ್ನು ಚೀನಾ ಮರೆತಿರಲಿಲ್ಲ. ಇದೇ ಈಗ ಕೊರೊನಾ ಕಂಟ್ರೋಲ್ ಮಾಡುವಲ್ಲಿಯೂ ಚೀನಾಕ್ಕೆ ಸಹಕಾರಿಯಾಗಿತ್ತು ಅಂತಾನೇ ಅಲ್ಲಿನ ತಜ್ಞರು ಹೇಳ್ತಾ ಇದಾರೆ. ಅಲ್ಲಿನ ಆಡಳಿತವೂ ತನ್ನ ಸಮರ್ಥ ನೀತಿಯಿಂದಲೇ ಇದು ಸಾಧ್ಯವಾಯ್ತು ಅಂತ ಹೇಳ್ತಾ ಇದೆ. ಜಿನ್ ಪಿಂಗ್ ಅಂತೂ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಕೊರೊನಾ ಒಮ್ಮೆ ಅಬ್ಬರಿಸಿದ ಮೇಲೆ ಮತ್ತೆ ಹರಡಲು ಬಿಟ್ಟೇ ಇಲ್ವಂತೆ ಚೀನಾ. ಎರಡನೇ ಅಲೆ, ಮೂರನೇ ಅಲೆ ಅಬ್ಬರಿಸಲು ಅವಕಾಶವನ್ನೇ ಕೊಟ್ಟಿಲ್ವಂತೆ ಚೀನಾ. ಅಲ್ಲೋ ಇಲ್ಲೋ ಕೇಸ್ ಬಂದ್ರೆ ಅದನ್ನು ಅಲ್ಲಿಯೇ ಕಟ್ಟಿ ಹಾಕ್ತಾ ಇದ್ಯಂತೆ ಚೀನಾ ಆಡಳಿತ. ಇಂಡಿಯಾಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ, ಜನ ಗಿಜುಗುಡುತ್ತಲೇ ಇರುವ ಚೀನಾದ ಮಹಾನಗರಗಳಲ್ಲಿ ಇದು ಸಾಧ್ಯಾನಾ ಅಂತ ಕೇಳಿದ್ರೆ ಚೀನಾದವರು ಹೌದು ಅಂತಿದಾರೆ. ಆದ್ರೆ ಜಗತ್ತು ಚೀನಾವನ್ನು ಈ ವಿಷಯದಲ್ಲಂತೂ ಏನೇ ಹೇಳಿದ್ರೂ ನಂಬ್ತಾನೇ ಇಲ್ಲ. ಚೀನಾದಲ್ಲಿ ಅನಾಹುತ ಆಗಿದೆ. ಆದ್ರೆ ಅದು ಹೇಳಿಕೊಳ್ತಾ ಇಲ್ಲ ಅಷ್ಟೇ ಅಂತಾನೇ ಹೇಳ್ತಿರೋದು. ಆದ್ರೆ ಚೀನಾ ಎಂತೆಂಥಾ ಆರೋಪ ಬಂದಾಗಲೂ ತಲೆ ಕೆಡಿಸಿಕೊಳ್ಳದೇ ಇರೋದು. ಈಗ ತಲೆ ಕೆಡಿಸಿಕೊಳ್ಳುತ್ತಾ.

ಚೀನಾ ನಿಜವಾಗಲೂ ಕಂಟ್ರೋಲ್ ಮಾಡಿದ್ದೇ ಆದ್ರೆ ಹೇಗೆ?
ಅಷ್ಟೊಂದು ಜನ ಸಂಖ್ಯೆ ಇದ್ರೂ ಹೆಚ್ಚು ಜನ ಬಾಧಿತರಾಗಿಲ್ವಾ?
ಕಮ್ಯುನಿಸ್ಟ್ ಪಕ್ಷದ ಆಡಳಿತ ಅಷ್ಟೊಂದು ಬಿಗಿ ಮಾಡಿ ಬಿಡ್ತಾ?

ಚೀನಾ ನಿಜಕ್ಕೂ ಕೊರೊನಾ ಕಂಟ್ರೋಲ್ ಮಾಡಿದ್ರೆ ಅದು ಮೆಚ್ಚುಗೆ ವ್ಯಕ್ತಪಡಿಸುವಂತಾದ್ದೇ. ಅದರಲ್ಲಿ ಯಾವುದೇ ಮುಲಾಜಿಲ್ಲ. ಯಾರೇ ಸಾಧನೆ ಮಾಡಿದ್ರೂ ಅಸೂಯೆ ಆದ್ರೂ ಯಾಕೆ. ಆದ್ರೆ ಚೀನಾ ಹೇಳೋದು ಒಂದು ಮಾಡೋದು ಒಂದು ಅನ್ನೋ ನೀತಿ ಅನಸರಿಸೋದ್ರಿಂದ ಕೊರೊನಾ ವಿಚಾರದಲ್ಲೂ ಹೀಗೆಯೇ ನಡೆದುಕೊಂಡು ಬಿಡ್ತಾ ಅನ್ನೋದಷ್ಟೇ ಅನುಮಾನ. ಚೀನಾದಲ್ಲಿರುವ ಕಮ್ಯೂನಿಸ್ಟ್ ಆಡಳಿತ ಕೂಡ ಅಷ್ಟು ಬಿಗಿಯಾಗಿಯೇ ಇದೆ. ಇಲ್ಲವಾದರೆ ಇಷ್ಟೊಂದು ಜನ ಸಂಖ್ಯೆ ಇರುವ ದೇಶವನ್ನು ನಿಭಾಯಿಸೋದು ಸುಲಭ ಅಲ್ಲ. ಆದ್ರೆ ಚೀನಾದಲ್ಲಿ ಎಲ್ಲವೂ ಗಪ್ ಚುಪ್. ಏನೇ ಹೇಳಿದ್ರೂ ಕೇಳಬೇಕು ಅಷ್ಟೇ. ಅಷ್ಟೊಂದು ಕಟ್ಟು ನಿಟ್ಟಾಗಿ ನಿರ್ಬಂಧ ತಂದು ಬಿಡುತ್ತೆ ಚೀನಾ. ಕಟ್ಟು ನಿಟ್ಟಾಗಿ ಪಾಲಿಸಬೇಕು ಅಂತ ಒಂದು ಆಜ್ಞೆ ಹೊರಡಿಸಿದರೆ ಅಷ್ಟೇ ಸಾಕು. ಇಲ್ಲಿನ ಜನ ತಲೆ ಬಾಗಿ ಸ್ವೀಕರಿಸುತ್ತಾರೆ. ಅಸಹನೆಯಲ್ಲೋ, ಒಪ್ಪಿಕೊಂಡೋ ಅದು ಬೇರೆ ಮಾತು. ಆದ್ರೆ ಆಜ್ಞೆಯ ಪಾಲನೆಯಂತೂ ಆಗುತ್ತೆ. ಕೊರೊನಾ ಕಾಲದಲ್ಲೂ ಚೀನಾ ಇಂತಾದ್ದೇ ನೀತಿ ಅನುಸರಿಸಿತ್ತು. ಕಠಿಣ ರೂಲ್ಸ್ ತಂದು ಬಿಟ್ಟಿತ್ತು. ಯಾರೇ ಆಗಲಿ ಈ ವಿಚಾರದಲ್ಲಿ ನೋ ಕಾಂಪ್ರಮೈಸ್. ಕಮ್ಯೂನಿಸ್ಟ್ ಆಡಳಿತದ ವ್ಯವಸ್ಥೆಯೇ ಚೀನಾವನ್ನು ಕೊರೊನಾದಿಂದ ಹೊರತರುವಂತೆ ಮಾಡಿದೆ ಅಂತಾನೇ ಇಲ್ಲಿನ ನಾಯಕರು ಹೇಳ್ತಿದಾರೆ. ಸತ್ಯವೂ ಇರಬಹುದು.

ಕೆಲವು ವಿಚಾರಗಳಲ್ಲಿ ಚೀನಾದ ಸಾಧನೆ ಕಡಿಮೆಯೇನಲ್ಲ. ಹಾಗಂತ ಹೊಗಳುವಷ್ಟೇನು ಚೀನಾದಲ್ಲಿ ಸಮೃದ್ಧತೆ ನೆಲೆಸಿಲ್ಲ. ಆದ್ರೆ ಏನೇ ಆದ್ರೂ ಚೀನಾ ಗಡಿ ದಾಟಿ ಯಾವ ಮಾಹಿತಿಯೂ ಹೊರಗೆ ಬರೋದೇ ಇಲ್ಲ. ಹೀಗಾಗಿ ಚೀನಾ ಹೇಳಿದ್ದೇ ಸತ್ಯ. ಚೀನಾ ನಿಜವಾಗಲೂ ಕೊರೊನಾ ಕಂಟ್ರೋಲ್ ಮಾಡಿದ್ದರೆ ಯಾರಿಗೂ ಬೇಸರ ಇಲ್ಲ. ಆದ್ರೆ, ಕಂಟ್ರೋಲ್ ಮಾಡಿದ್ದಾಗಿ ಹೇಳಿ ನಾನೇ ಸಕ್ಸಸ್ ಅಂತ ತೋರಿಕೆಗೆ ಹೇಳಿ ಕೊಳ್ತಾ ಇದ್ಯಾ ಅನ್ನೋ ಅನುಮಾನ ಮಾತ್ರ ಕಾಡ್ತಾನೇ ಇದೆ.

The post ಸಂಕಷ್ಟ ಕಾಲವನ್ನೇ ಅವಕಾಶವನ್ನಾಗಿ ಮಾಡಿಕೊಳ್ತು ಡ್ರ್ಯಾಗನ್ ರಾಷ್ಟ್ರ.. ಹೇಗೆ ಗೊತ್ತಾ..? appeared first on News First Kannada.

Source: newsfirstlive.com

Source link